WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Monday, March 18, 2013

ಬಿಡು ಬಾಹ್ಯದೊಳು ಡಂಭವ

ಬಿಡು ಬಾಹ್ಯದೊಳು ಡಂಭವ
ಮಾನಸದೊಳು ಎಡೆಬಿಡದಿರು ಶಂಭುವ.
ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯ
ಪಡೆದರೆ ಶಿವ ನಿನಗೊಲಿಯನು ಮರುಳೆ.

ಜನಕಂಜಿ ನಡೆಕೊಂಡರೇನುಂಟು ಲೋಕದಿ
ಮನಕಂಜಿ ನಡೆಕೊಂಬುದೇ ಚಂದ.
ಜನರೇನ ಬಲ್ಲರು ಒಳಗಾಗೋ ಕೃತ್ಯವ
ಮನವರಿಯದ ಕಳ್ಳತನವಿಲ್ಲವಲ್ಲ.

ಮನದಲಿ ಶಿವ ತಾ ಮನೆಮಾಡಿಕೊಂಡಿಹ
ಮನಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ.
ಮನಕಂಜಿ ನಡೆಯದೆ ಜನಕಂಜಿ ನಡೆದರೆ
ಮನದಾಣ್ಮ ಗುರುಸಿದ್ಧ ಮರೆಯಾಗೋನಲ್ಲ.

-ಸರ್ಪಭೂಷಣ ಶಿವಯೋಗಿಗಳು

Sunday, March 17, 2013

ಉಪನಿಷತ್ತುಗಳು - ಮ್ಯಾಕ್ಸ್ ಮುಲ್ಲರ್ ಅನುವಾದ

ಮ್ಯಾಕ್ಸ್ ಮುಲ್ಲರ್ ಅವರ ುಪನಿಷತ್ತುಗಳ ಅನುವಾದವನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
The Upanishads, Part 1 (SBE01) Index:


Monday, March 11, 2013

ಆಧುನಿಕ ಭಾರತದ ಶಿಕ್ಷಣ ಮಾತೆ


“ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ ಪ್ರತಿಯೊಂದು ಶಾಲೆಗೂ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಅದಕ್ಕಾಗಿ ಇದೋ ನನ್ನ ಮನಃಪೂರ್ವಕ ಅಭಿನಂದನೆಗಳು” ಎನ್ನುತ್ತಾ ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ ತಮಗೆ, ಬ್ರಿಟಿಷ್ ಸರ್ಕಾರ ಹೊದಿಸಿ ಗೌರವಿಸಿದ ಶಾಲನ್ನು ಮಹಾತ್ಮ ಜ್ಯೋತಿಬಾ ಫುಲೆ ತಮ್ಮ ಮಡದಿಗೆ ನೀಡಿದಾಗ, ಇಡೀ ಸಭೆಗೆ ಸಭೆಯೇ ಎದ್ದು ನಿಂತು, ಸಮರ್ಥ ಶಿಕ್ಷಕಿ, ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆಗೆ ಕರತಾಡನದೊಂದಿಗೆ ಗೌರವ ಸೂಚಿಸಿತು. ಹೀಗೆ ಪತಿಯಿಂದ ಸಾಮಾಜಿಕವಾಗಿ ಪ್ರಶಂಸೆ ಮತ್ತು ಗೌರವವನ್ನು ಪಡೆದ ಧೀಮಂತ ಮಹಿಳೆ, ತಾಯಿ ಸಾವಿತ್ರಿಬಾಯಿ ಫುಲೆ!

ತಳಸಮುದಾಯ ಹಾಗೂ ಹೆಣ್ಣುಮಕ್ಕಳು ಮೇಲ್ಜಾತಿಗೆ ಸಮಾನವಾದ ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಅದರ ಸಾಕಾರಕ್ಕಾಗಿ ಅನೇಕ ನೋವು, ಅಪಮಾನ, ಸಂಕಟಗಳನ್ನು ಅನುಭವಿಸಿದ ಮಹಿಳೆ, ನಾವೆಲ್ಲರೂ ಕೃತಜ್ಞರಾಗಿರಬೇಕಾದ ತಾಯಿ ಸಾವಿತ್ರಿಬಾಯಿ ಫುಲೆ. ಇಂದು ತಳ ಸಮುದಾಯಗಳು ಹಾಗೂ ಮಹಿಳೆಯರು ಒಂದಿಷ್ಟಾದರೂ ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂತೆ ಆಗಿರುವುದರ ಹಿಂದೆ ಅವರ ಬಹು ದೊಡ್ಡ ಹೋರಾಟವೇ ಇದೆ.

ಒಂದೆಡೆ ಬ್ರಿಟಿಷ್ ಸಾಮ್ರಾಜ್ಯದ ಪ್ರಾಬಲ್ಯ, ಇನ್ನೊಂದೆಡೆ ತಲೆತಲಾಂತರದಿಂದ ಬಂದ ಪರಂಪರೆಯಂತೆ, ಹಿಂದೂ ಮೇಲ್ಜಾತಿಗಳು ಜಾತಿ-ದೇವರುಗಳ ಹೆಸರಿನಲ್ಲಿ ತಳಸಮುದಾಯಗಳನ್ನು ತುಳಿಯುತ್ತಿದ್ದ ಕಾಲ. ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕಿಲ್ಲದೆ, ವಿದ್ಯೆ ಪಡೆಯುವುದೇ ಮಹಾ ಪಾಪವೆಂಬಂತಿದ್ದ ಸಂದರ್ಭ. ಹೆಣ್ಣಿಗೆ ಮದುವೆಯೊಂದೇ ಅಂತಿಮ. ಅವಳೇನೂ ಹೇಳುವಂತಿಲ್ಲ. ಕೇಳುವಂತಿಲ್ಲ. ಇಂತಹ ಸಂದರ್ಭದಲ್ಲಿ ಜ್ಯೋತಿಬಾ ಫುಲೆ ದಂಪತಿಗಳು ಹೆಣ್ಣು ಮಕ್ಕಳಲ್ಲಿ ಹತ್ತಿಸಿದ ಶಿಕ್ಷಣದ ಅರಿವಿನ ಕಿಡಿ ಇಂದು ಬೆಳಕಾಗಿ ಪಸರಿಸುತ್ತಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ 3ನೇ ಜನವರಿ 1831ರಲ್ಲಿ ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿದ ಸಾವಿತ್ರಿಬಾಯಿಗೆ 9 ವರ್ಷವಾಗಿದ್ದಾಗಲೇ ಜ್ಯೋತಿಬಾ ಅವರೊಂದಿಗೆ ವಿವಾಹವಾಯಿತು. ಮದುವೆಯ ನಂತರ ಅವರು ಪುಣೆಗೆ ಬಂದರು. ಹಸುಗೂಸಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ಜ್ಯೋತಿಬಾ ಅವರ ವಿದ್ಯಾಭ್ಯಾಸ ಕುಂಟುತ್ತಾ ಸಾಗಿತ್ತು. ತಾಯಿಯ ದೂರದ ಸಂಬಂಧಿಯಾಗಿದ್ದ ಬಾಲವಿಧವೆ ಸಗುಣಾಬಾಯಿ ಇವರ ಸಾಕುತಾಯಿ.

ಸಗುಣಾ ಅವರಿಗೆ ಶಿಕ್ಷಣದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಇವರು ಸಂಪ್ರದಾಯ, ಕಟ್ಟುಕಟ್ಟಲೆಗಳ ಕುರಿತು ಆಳದಲ್ಲಿ ಪ್ರತಿಭಟನಾತ್ಮಕ ಮನೋಭಾವ ಹೊಂದಿದ್ದರು. ಹೀಗೆಂದೇ ಸಾವಿತ್ರಿಬಾಯಿ ಹಾಗೂ ತಮಗೆ ಪಾಠವನ್ನು ಹೇಳಿಕೊಡಲು ಜ್ಯೋತಿಬಾ ಅವರನ್ನೇ ಒಪ್ಪಿಸಿದರು! ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ದಕ್ಕಿಸಿಕೊಂಡ ಈ ಇಬ್ಬರು ಹೆಣ್ಣುಮಕ್ಕಳು ಜ್ಯೋತಿಬಾ ಅವರೊಡಗೂಡಿ, ಬಹುಜನರಿಗೆ ಅಕ್ಷರವನ್ನು ನಿರಾಕರಿಸಿದ್ದ ರೋಗಗ್ರಸ್ತ ಸಮಾಜವನ್ನು ಎದುರು ಹಾಕಿಕೊಂಡು ಹೆಣ್ಣುಮಕ್ಕಳಿಗೆ ಹಾಗೂ ತಳ ಸಮುದಾಯದವರಿಗೆ ಶಿಕ್ಷಣದ ಬಾಗಿಲನ್ನು ತೆರೆದರು!

1847ರಲ್ಲಿ ನಾರ್ಮನ್ ಶಾಲೆಯಲ್ಲಿ ಕೇವಲ 17 ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿಬಾಯಿ ಅವರು ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1848ರಲ್ಲಿ ಜ್ಯೋತಿಬಾ ಅವರು ಪುಣೆಯಲ್ಲಿ ತೆರೆದ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆಯಲ್ಲಿ (ಭಾರತದಲ್ಲಿ ಎರಡನೆಯದು) ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಪ್ರಾರಂಭಿಸಿದರು. ಮೇಲ್ಜಾತಿ, ತಳಸಮುದಾಯಕ್ಕೆ ಸೇರಿದ 9 ಜನ ಹೆಣ್ಣುಮಕ್ಕಳಿಂದ ಪ್ರಾರಂಭವಾದ ಶಾಲೆ, ಮುಂದೆ ಅನೇಕ ಬಾಲೆಯರಿಗೆ ವಿದ್ಯಾದಾನದ ಕೇಂದ್ರವಾಯ್ತು.

ಆ ಕಾಲದಲ್ಲಿ ಬ್ರಾಹ್ಮಣ ಪುರುಷರ ಹೊರತಾಗಿ ಬೇರೆಯವರಿಗೆ ಅಕ್ಷರ ಕಲಿಯುವ ಅವಕಾಶ ಕಡಿಮೆಯಿತ್ತು. ಅಂಥ ಸಂದರ್ಭದಲ್ಲಿ ಹೆಣ್ಣೊಬ್ಬಳು ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಿ, ಉಚಿತ ವಿದ್ಯಾದಾನ ನೀಡಲಾರಂಭಿಸಿದ್ದು ಸಂಪ್ರದಾಯಸ್ಥ ಮೇಲ್ಜಾತಿಯವರಿಗೆ ನುಂಗಲಾರದ ತುತ್ತಾಯಿತು. ಸಾವಿತ್ರಿಬಾಯಿಯವರು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಲಾಯಿತು. ಕಲ್ಲು, ಕೆಸರು, ತೊಪ್ಪೆಗಳನ್ನೆಸೆದು ಹೆದರಿಸಿ, ಕೊಲೆ ಬೆದರಿಕೆ ಹಾಕಿದರು. ಯಾವುದಕ್ಕೂ ಬಗ್ಗದಿದ್ದಾಗ, ಇವರ ಶಾಲೆಗೆ ಸೇರಿದ್ದ ಹೆಣ್ಣುಮಕ್ಕಳಿಗೆ ಜಾತಿ ಹಾಗೂ ಸಮಾಜ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಸಾವಿತ್ರಿಬಾಯಿ ಮನೆ ಮನೆಗಳಿಗೆ ಹೋಗಿ ಪೋಷಕರ ಮನವೊಲಿಸಿ, ಶಿಕ್ಷಣದ ಔನ್ನತ್ಯವನ್ನು ತಿಳಿ ಹೇಳಿ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದರು. ಹೀಗೆ ನಿಜವಾದ ಅರ್ಥದಲ್ಲಿ ಆಧುನಿಕ ಭಾರತದ ಶಿಕ್ಷಣ ಮಾತೆಯಾದರು.

ಇದೇ ಕಾರಣಕ್ಕೆ ಜ್ಯೋತಿಬಾ ತಮ್ಮ ಸ್ವಂತ ಮನೆ ತೊರೆದು ಹೊರಬೀಳಬೇಕಾದ, ಸಾವಿತ್ರಿಬಾಯಿಯವರು ತವರಿನಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾದ ಪ್ರಸಂಗಗಳು ಎದುರಾದವು. ಇದನ್ನೆಲ್ಲಾ ಕೆಲವು ಪ್ರಗತಿಪರ ಸ್ನೇಹಿತರೊಡಗೂಡಿ ದಿಟ್ಟವಾಗಿ ಎದುರಿಸಿದ ದಂಪತಿಗಳು 1848-1852ರವರೆಗೆ ಹದಿನೆಂಟಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ತೆರೆದು ಸಾವಿರಾರು ಹೆಣ್ಣುಮಕ್ಕಳು ಹಾಗೂ ತಳಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಿದ ದಾಖಲೆಗಳಿವೆ.

ಈ ಎಲ್ಲ ಶಾಲೆಗಳ ಆಡಳಿತ ಜವಾಬ್ದಾರಿಯನ್ನು ಹೊತ್ತು, ನಿರಂತರವಾದ ಸಾಮಾಜಿಕ ಸಂಘರ್ಷಕ್ಕೆ ಈಡಾಗಿಯೂ ಉತ್ತಮ ಶಿಕ್ಷಣತಜ್ಞೆಯಾಗಿ, ಯಶಸ್ವಿ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿದ್ದು ಇತಿಹಾಸ ಗರ್ಭದಲ್ಲಿ ಹೂತುಹೋಗಿದೆ. ಕ್ರಾಂತಿಕಾರಿ ಕವಿಯಾಗಿ ಹೋರಾಟದ ಹಾಡುಗಳನ್ನು ರಚಿಸಿದ ಸಾವಿತ್ರೀ ಬಾಯಿ ಅವರ ತೀವ್ರವಾದ ತುಡಿತ ಸಮಾನ ಶಿಕ್ಷಣದ ಕಡೆಗಿದ್ದುದು ಅವರ ಈ ಕವಿತೆಯಿಂದ ಗೋಚರವಾಗುತ್ತದೆ.

ನಡೆ! ಶಿಕ್ಷಣ ಪಡೆ!

ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು

ಪಡೆ ವಿವೇಕ! ಪಡೆ ಸಂಪತ್ತು! ಇದಕಾಗಲಿ ನಿನ್ನಯ ದುಡಿಮೆ
ಅರಿವಿಲ್ಲದವರಾಗಿ ನಮಗೆ ಕೈ ಜಾರಿತು ಸಕಲವೂ ಪಶುವಾದೆವು, ಇಲ್ಲದಾಗಿ ವಿವೇಕವೂ
ಸಾಕಿನ್ನು ಈ ಜಡತೆ ಸಾಕು

ನಡೆನಡೆ ಶಿಕ್ಷಣ ಪಡೆ!
ಆಗಲಿ ಕೊನೆ, ದಮನಿತರ ಕಣ್ಣೀರ ಸಂಕಟಕ್ಕೂ ಕೊನೆ
ಇದೊ ಇಲ್ಲಿದೆ! ನಿಮ್ಮ ಕಣ್ಮುಂದೆಯೆ ಬಿದ್ದಿದೆ

ಶಿಕ್ಷಣದ ರೂಪದಲಿ ಚಿನ್ನದ ಗಣಿಯು
ತಡವೇಕೆ? ನಡೆನಡೆ ಶಿಕ್ಷಣ
ಪಡೆ!

ಜಾತಿಯ ಸಂಕೋಲೆ ಕತ್ತರಿಸಿ ನಡೆ.

ವೈದಿಕ ಶಾಸ್ತ್ರದ ಕಾಲ್ತೊಡರ ಕಿತ್ತೆಸೆದು ನಡೆ ನಡೆ!

ಅನೇಕ ಸಾಮಾಜಿಕ ಅನಿಷ್ಟಗಳ ಎದುರಿಗೂ ಫುಲೆ ದಂಪತಿಗಳು ಉಗ್ರ ಹೋರಾಟ ನಡೆಸಿದರು. ಹೆಣ್ಣುಮಕ್ಕಳೆಡೆಗೆ ಒಂದು ಸರ್ಕಾರ ವಹಿಸಬಹುದಾದ ಸೂಕ್ಷ್ಮ ಎಚ್ಚರ, ಕಾಳಜಿಗಳನ್ನು ಅವರು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿದರು. ವಿಧವೆಯರ ಕೇಶಮುಂಡನವನ್ನು ವಿರೋಧಿಸಿ, ಅವರ ಪುನರ್ ವಿವಾಹಗಳನ್ನು ಏರ್ಪಡಿಸಿದರು.

ಕಾಮುಕ ಪುರುಷರಿಗೆ ಬಲಿಯಾಗಿ ಗರ್ಭಧರಿಸುವ ವಿಧವೆಯರಿಗಾಗಿ, ಅವರಿಗೆ ಹುಟ್ಟುವ ಮಕ್ಕಳಿಗಾಗಿ 1863ರಲ್ಲಿ `ಬಾಲಹತ್ಯೆ ಪ್ರತಿಬಂಧಕ ಗೃಹ'ಗಳನ್ನು ತೆರೆದರು. ಅನಾಥ ವಿಧವೆಯರ ಸುರಕ್ಷಿತ ಹೆರಿಗೆಗಾಗಿ `ಗುಪ್ತ ಪ್ರಸೂತಿ ಗೃಹ'ಗಳನ್ನು ಸ್ಥಾಪಿಸಿದರು. ಅನೇಕ ಅನಾಥಾಶ್ರಮಗಳೂ ಸ್ಥಾಪನೆಯಾದವು.

ಸ್ವಂತ ಮಕ್ಕಳನ್ನು ಹೊಂದದೆಯೇ ಈ ದಂಪತಿಗಳು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿದರು. ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ರೂಪಿಸಿದ `ಸತ್ಯಶೋಧಕ ಚಳವಳಿ' ಸಾಮಾಜಿಕ ಪಿಡುಗುಗಳ ವಿರುದ್ಧದ ಒಂದು ಅಸ್ತ್ರವೇ ಆಗಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಸಾವಿತ್ರಿಬಾಯಿಯವರ ನಾಯಕತ್ವದಲ್ಲಿ ಸ್ಥಾಪಿಸಿದ್ದೂ ಒಂದು ದಾಖಲೆ.

ಜ್ಯೋತಿಬಾ ಫುಲೆಯವರ ಮರಣದ ನಂತರವೂ ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ದಿಟ್ಟೆ ಸಾವಿತ್ರಿಬಾಯಿ ಫುಲೆಯವರನ್ನು ನಾವಿಂದು ಮರೆತು ಹೋಗಿದ್ದೇವೆಂಬುದೇ ವಿಪರ್ಯಾಸ. ವ್ಯಾಪಕವಾಗಿ ಹರಡಿದ್ದ ಪ್ಲೇಗ್ ಕಾಯಿಲೆಗೆ ತುತ್ತಾದ ರೋಗಿಗಳ ಸೇವೆಯಲ್ಲಿ ಅವರು ನಿಸ್ವಾರ್ಥವಾಗಿ ತೊಡಗಿಕೊಂಡು, ನಿರ್ಗತಿಕರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು. ಕ್ಷಾಮದ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೇಹ ಮಾರಿಕೊಳ್ಳುವುದನ್ನು ತಪ್ಪಿಸಿ ಘನತೆಯಿಂದ ಬದುಕಲು ದಾರಿಗಳನ್ನು ಹುಡುಕಿಕೊಟ್ಟರು. ಕೊನೆಗೆ ಈ ನಮ್ಮ ಶಿಕ್ಷಣದ ತಾಯಿ ತೀವ್ರ ಪ್ಲೇಗ್ ಖಾಯಿಲೆಗೆ ತುತ್ತಾಗಿ ತಮ್ಮ 66ನೇ ವಯಸ್ಸಿನಲ್ಲಿ, 10 ಮಾರ್ಚ್ 1897ರಲ್ಲಿ ಸಾವನ್ನಪ್ಪಿದರು.
ಸಮಾನ ಶಿಕ್ಷಣ, ಸಮ ಸಮಾಜದ ಕನಸು ಕಂಡ ಫುಲೆ ದಂಪತಿಗಳು ಇನ್ನಿಲ್ಲವಾಗಿ ಶತಮಾನವೇ ಕಳೆದುಹೋದರೂ ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ! ಜಾಗತೀಕರಣದ ಬಿರುಗಾಳಿ ಮತ್ತು ಉಳ್ಳವರ ಪರವಾದ ಶೈಕ್ಷಣಿಕ ನೀತಿಗಳಿಂದಾಗಿ ಮಹಿಳೆ ಮತ್ತು ತಳ ಸಮುದಾಯ ಇಂದಿಗೂ ಸಮಾನ ಶಿಕ್ಷಣವನ್ನು ಪಡೆಯಲಾಗದೇ ಶಿಕ್ಷಣದ ಹಕ್ಕಿನಿಂದ ವಂಚನೆಗೊಳಗಾಗುತ್ತಿದೆ. ಸಮಾನತೆಯನ್ನು ಸಾಧಿಸಲು ಸಮಾನ ಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು `ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ'ಯನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆಪಡುತ್ತಿವೆ. ಆದರೆ ಸಮಾನ ಶಿಕ್ಷಣದ ಜಾರಿಗೆ ಬೇಕಾದಂತಾ ಇಚ್ಛಾಶಕ್ತಿಯ ಕೊರತೆಯಿಂದ ಮನಬಂದಂತೆ ಶಿಕ್ಷಣ ನೀತಿಯನ್ನು ರೂಪಿಸಿಕೊಂಡು, ಶಿಕ್ಷಣ ಖಾಸಗೀಕರಣಕ್ಕೆ ತನ್ನನ್ನು ಒತ್ತೆ ಇಟ್ಟುಕೊಂಡು, ವಿದ್ಯೆಯೆಂಬ ಮೂಲಭೂತ ಹಕ್ಕನ್ನೂ ಮಾರಾಟದ ಸರಕಾಗಿಸಿದೆ. ತಾಯ್ತನದ ತುಡಿತವಿರದ ಲಾಭಕೋರ ಸರ್ಕಾರ, ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಶಾಲೆಗಳನ್ನೇ ಮುಚ್ಚುತ್ತಿದೆ.

ಸಾವಿತ್ರಿಬಾಯಿಯವರ ಅಂದಿನ ಶ್ರಮ ಸಾರ್ಥಕವಾಗಬೇಕಾದರೆ ಪ್ರಾದೇಶಿಕ ಭಾಷೆಯನ್ನು ಪ್ರಾಥಮಿಕ ಹಂತದಲ್ಲಾದರೂ ಮಾಧ್ಯಮವಾಗುಳ್ಳ ಸಮಗ್ರ ಏಕರೂಪ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ಅದರ ಮೊದಲ ಭಾಗವಾಗಿ ಸರ್ಕಾರ, ಸಾವಿತ್ರಿಬಾಯಿಯವರು ಜನಿಸಿದ ಜನವರಿ 3ನ್ನು `ರಾಷ್ಟ್ರೀಯ ಸಮಾನ ಶಿಕ್ಷಣ ದಿನ'ವೆಂದು ಘೋಷಿಸಬೇಕು.

ಈ ಘೋಷಣೆ ಭಾರತದ ಕಗ್ಗತ್ತಲೆಗೆ ಬೆಳಕಾದ ತಾಯಿಯೊಬ್ಬಳ ದಿನಾಚರಣೆ ಆಗುತ್ತದೆ. ಅಂದು ಮಾಮೂಲಿನಂತೆ ಸಾರ್ವತ್ರಿಕ ರಜೆಯನ್ನೇನೂ ಸರ್ಕಾರ ನೀಡುವುದು ಬೇಡ. (ಹೆಣ್ಣುಮಕ್ಕಳಿಗೆ ಯಾವ ರಜಾ ದಿನಗಳಲ್ಲೂ, ನಿವೃತ್ತಿಯ ನಂತರವೂ ಬಿಡುವೆಂಬುದಿರುವುದೇ ಇಲ್ಲ). ಆ ದಿನದಂದು `ಸಮಾನ ಶಿಕ್ಷಣ'ದ ಕುರಿತು ಸರ್ಕಾರ ಮತ್ತು ಇತರ ಪ್ರಗತಿಪರ ಸಂಸ್ಥೆಗಳು ಚರ್ಚೆ, ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣಗಳನ್ನು ನಡೆಸಬೇಕಾಗಿದೆ.

 -ರೂಪ ಹಾಸನ
ಕೃಪೆ: ಪ್ರಜಾವಾಣಿ

ಆರ್ಯಾಂಬ ಪಟ್ಟಾಭಿ

ಕನ್ನಡದ ಪ್ರಖ್ಯಾತ ಬರಹಗಾರ್ತಿ ಆರ್ಯಾಂಬ ಪಟ್ಟಾಭಿ ಅವರು 1936ರ ಮಾರ್ಚ್ 12ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಶ್ರೀ ಅವರ ತಮ್ಮಂದಿರಾದ ಬಿ.ಎಂ.ಕೃಷ್ಣಸ್ವಾಮಿಯವರು. ತಾಯಿ ತಂಗಮ್ಮನವರು. ಪ್ರಾರಂಭಿಕ ಶಿಕ್ಷಣವನ್ನು ಮಂಡ್ಯದಲ್ಲಿ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪಡೆದ ಆರ್ಯಾಂಬ ಅವರು ಬಿ.ಎ. ಪದವಿ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಬಾಲ್ಯದಿಂದಲೇ ಓದುವ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಹೈಸ್ಕೂಲಿನಲ್ಲಿದ್ದಾಗಲೇ ಲೇಖನಗಳು, ಕಥೆಗಳ ಬರವಣಿಗೆ ಪ್ರಾರಂಭ ಮಾಡಿದ್ದ ಆರ್ಯಾಂಬ ಅವರು ಶಾಲಾ ಕಾಲೇಜುಗಳಲ್ಲಿ ತಮ್ಮ ಬರಹಗಳಿಗಾಗಿ ಅನೇಕ ಬಹುಮಾನಗಳನ್ನೂ ಗಳಿಸುತ್ತ ಬಂದು, ಮುಂದೆ ಹಲವಾರು ಕಥೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಪಡಿಸಿದರು. ಅಕ್ಕನಾದ ತ್ರಿವೇಣಿಯವರು ಹಲವಾರು ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ತಂಗಿಯಾದ ಇವರಿಗೂ ಕಾದಂಬರಿ ಬರೆಯಲು ಪ್ರೇರೇಪಿಸಿದಾಗ, ಇವರು ಬರೆದ ಮೊದಲ ಕಾದಂಬರಿಯನ್ನು ಓದಿದ ತ್ರಿವೇಣಿಯವರೇ ‘ಹೊಂಗನಸು’ ಎಂದು ನಾಮಕರಣ ಮಾಡಿ ಪ್ರಕಟಣೆಗೂ ನೆರವಾದರು. “ಬೃಹತ್ ಕಾದಂಬರಿಯನ್ನು ಬರೆಯಬೇಡ, ಬರವಣಿಗೆಯನ್ನು ಎಂದೂ ನಿಲ್ಲಿಸಬೇಡ, ಓದುಗರ ಪ್ರೀತಿ-ಅಭಿಮಾನವೇ ಸಾಹಿತಿಗಳಿಗೆ ಶ್ರೀರಕ್ಷೆ” ಇದು ಅಕ್ಕ ತ್ರಿವೇಣಿ ಇವರಿಗೆ ಹೇಳಿದ ಕಿವಿಮಾತು. ಅವರಿರುವಾಗಲೇ ಮೂರು ಕಾದಂಬರಿ ಬರೆದು ಪ್ರಕಟಿಸಿದ್ದರು.

‘ಹೊಂಗನಸು’ ಪ್ರಕಟವಾದದ್ದು 1961ರಲ್ಲಿ. ನಂತರ ಆರಾಧನೆ, ಪ್ರಿಯಸಂಗಮ, ಎರಡುಮುಖ, ಬೀಸಿದ ಬಲೆ ಮುಂತಾದ 34 ಕಾದಂಬರಿಗಳು ಪ್ರಕಟಗೊಂಡಿವೆ. ಕಪ್ಪು-ಬಿಳುಪು ಕಾದಂಬರಿಯು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಚಲನಚಿತ್ರವಾಗಿದೆ. ಇದಲ್ಲದೆ ಎರಡು ಮುಖ, ಮರಳಿಗೂಡಿಗೆ, ಸವತಿಯ ನೆರಳು, ಕನ್ನಡ ಚಲನ ಚಿತ್ರಗಳಾಗಿವೆ. ಎರಡುಮುಖ ಮತ್ತು ಮರಳಿಗೂಡಿಗೆ ಚಲನಚಿತ್ರಗಳು ರಾಜ್ಯಪ್ರಶಸ್ತಿ ಪಡೆದ ಚಿತ್ರಗಳಾಗಿವೆ. ಇವರು ಬರೆದ ಹಲವಾರು ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡು ‘ಮರಳಿ ಬಂದ ಮಮತೆ’, ‘ಉದಯ ರವಿ’, ‘ನನ್ನವಳು’, ‘ತೆರೆಸರಿದಾಗ’ ಮುಂತಾದ ಕಥಾ ಸಂಕಲನಗಳಲ್ಲಿ ಸೇರಿವೆ.

ಆರ್ಯಾಂಬ ಅವರು ಮಕ್ಕಳಿಗಾಗಿ 12 ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಚ. ವಾಸುದೇವಯ್ಯ, ರವೀಂದ್ರನಾಥ ಠಾಕೂರ್, ತಾಯಿ ತೆರೇಸ, ನಾಲ್ವಡಿ ಕೃಷ್ಣರಾಜ ಒಡೆಯರ್, ಮೇರಿ ಕ್ಯೂರಿ ಮತ್ತು ತ್ರಿವೇಣಿ ಮುಂತಾದವುಗಳು ಸೇರಿವೆ. ನಾಟಕ ಕ್ಷೇತ್ರದಲ್ಲಿಯೂ ಸಾಕಷ್ಟು ಕೃಷಿಮಾಡಿದ್ದ ಆರ್ಯಾಂಬ ಅವರು ಸಾಲುದೀಪ, ಬೆಕ್ಕಿನಕಣ್ಣು, ಬೆಳಕಿನತ್ತ, ದುಡ್ಡಿದ್ದವನೆ ದೊಡ್ಡಪ್ಪ, ಸಾಕುಮಗ, ಕಸ್ತೂರಿ ಮುಂತಾದ ನಾಟಕಗಳನ್ನು ರಚಿಸಿದ್ದು ಇವು ಆಕಾಶವಾಣಿ ನಾಟಕಗಳಾಗಿ ಪ್ರಸಾರಗೊಂಡಿವೆ.

ಇವಲ್ಲದೆ ‘ಭಾರತದ ಮಹಾಪುರುಷರು’ ಮಾಲಿಕೆಯಲ್ಲಿ ಆರ್ಯಾಂಬ ಅವರು ಬರೆದ ಆದಿಶಂಕರಾಚಾರ್ಯ, ಬಸವೇಶ್ವರ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಕೂರ್, ಗಾಂಧಿ ಮತ್ತು ಅರವಿಂದ ಘೋಷ್ ಮುಂತಾದ ಮಹನೀಯರ ಕಥೆಗಳು ಮೂಡಿ ಬಂದಿದ್ದು ಈ ಪುಸ್ತಕಗಳು ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಾಗಿ ಮೂಡಿಬಂದಿವೆ.

ಆರ್ಯಾಂಬ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡೆ, ಸಂಗೀತ, ನಾಟಕಾಭಿನಯಗಳಲ್ಲಿ ತೊಡಗಿಸಿಕೊಂಡಿದ್ದು ಅನೇಕ ಕನ್ನಡ, ಇಂಗ್ಲಿಷ್, ಸಂಸ್ಕೃತ ನಾಟಕಗಳಲ್ಲಿ ಅಭಿನಯಿಸಿದಂತೆ ಟೆಬಲ್ ಟೆನಿಸ್, ಟೆನಿಸ್, ಸಾಫ್ಟ್ ಬಾಲ್, ಬ್ಯಾಡ್‌ಮಿಂಟನ್ ಮುಂತಾದ ಕ್ರೀಡೆಗಳಲ್ಲೂ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದವರು.

ಟೆನಿಸ್ ಕ್ರೀಡೆಯ ಬಗ್ಗೆ ಸಮಗ್ರ ಅಧ್ಯಯನ ಮಾಡಿ ರಚಿಸಿದ ‘ಟೆನಿಸ್’ ಕೃತಿಯು 1987 ರಲ್ಲಿ ಪ್ರಕಟಗೊಂಡಿದ್ದು ಪರಿಷ್ಕೃತ ಎರಡನೆಯ ಮುದ್ರಣವನ್ನು ಮೈಸೂರು ವಿಶ್ವವಿದ್ಯಾಲವು 2012ರಲ್ಲಿ ಹೊರತಂದಿದೆ. ಇದು ಟೆನಿಸ್ ಬಗ್ಗೆ ಪ್ರಕಟವಾಗಿರುವ ಕನ್ನಡದ ಏಕೈಕ ಗ್ರಂಥವೆನಿಸಿದೆ. ಅಮೆರಿಕ, ಕೆನಡ, ಸಿಂಗಪುರ ದೇಶಗಳನ್ನು ಸುತ್ತಿ ಇವರು ಬರೆದ ಪ್ರವಾಸಾನುಭವ ಕೃತಿ ‘ವಿದೇಶ ಪ್ರವಾಸ’.

ಆರ್ಯಾಂಬ ಅವರು ಹಲವಾರು ಸಂಘಟನೆ, ಸಂಘ, ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ, ಪದಾಧಿಕಾರಿಗಳಾಗಿ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಹೀಗೆ ವಿಶಿಷ್ಟರೀತಿಯಲ್ಲಿ ಸಾಹಿತ್ಯ ಮತ್ತು ಸಮಾಜ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಆರ್ಯಾಂಬ ಪಟ್ಟಾಭಿಯವರನ್ನು ಅರಸಿ ಬಂದಿರುವ ಪ್ರಶಸ್ತಿಗಳು ಹಲವಾರು. ‘ಟೆನಿಸ್’ ಗ್ರಂಥಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’, ಅತ್ತಿಮಬ್ಬೆ ಪ್ರತಿಷ್ಠಾನದ ‘ಅತ್ತಿಮಬ್ಬೆ ಪ್ರಶಸ್ತಿ’, ವಿದೇಶ ಪ್ರವಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಿಂಗರಾಜ ಸಾಹಿತ್ಯ ಪ್ರಶಸ್ತಿ ಮತ್ತು ಕನ್ನಡ ಲೇಖಕಿಯರ ಪರಿಷತ್ತಿನ ಪ್ರಶಸ್ತಿಗಳು; ಸರ್.ಎಂ. ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಬಿ. ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಸಂಚಿ ಹೊನ್ನಮ್ಮ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಆರ್ಯಾಂಬ ಪಟ್ಟಾಭಿ ಅವರಿಗೆ ಸಂದಿವೆ. ಸ್ನೇಹಿತರು, ಅಭಿಮಾನಿಗಳು 2002 ರಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಉನ್ಮೀಲನ’.

Sunday, March 10, 2013

ಕಥೆಗಾರನ ಋಣ ತೀರಿಸುವ ಹೊತ್ತು...

ಕಥೆಗಾರನ ಋಣ ತೀರಿಸುವ ಹೊತ್ತು... | ಪ್ರಜಾವಾಣಿ

ಗಂಗಾವತರಣ - ದ.ರಾ. ಬೇಂದ್ರೆ

ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹನಿಸಿ ಬಾ ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ ಜೀವ ಜಲದಲ್ಲಿ ಚಲಿಸಿ ಬಾ ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ ನೀರು ನೀರಾಗಿ ಉರುಳಿ ಬಾ ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಕೊಳೆಯ ತೊಳೆವವರು ಇಲ್ಲ ಬಾ ಬೇರೆ
ಶಕ್ತಿಗಳು ಹೊಲ್ಲ ಬಾ ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ ನಮ್ಮ ನಾಡನ್ನೆ ಸುತ್ತ ಬಾ ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ

ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಹ್ಪಾತವನ್ನೆ

ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
ದಮ್ ದಮ್ ಎಂದಂತೆ ದುಡುಕಿ ಬಾ ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ ಬಾಳು ಬೆಳಕಾಗಿ ಬೆಳೆದು ಬಾ ಕೈ ತೊಳೆದು ಬಾ ಮೈ ತೊಳೆದು ಬಾ

ಇಳಿದು ಬಾ ತಾಯಿ ಇಳಿದು ಬಾ ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ ದತ್ತ ನರಹರಿಯ ಮುತ್ತೆ ಬಾ ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ

Sunday, March 3, 2013

ತಾರಾ

ಚಲನಚಿತ್ರರಂಗವೆಂಬ ತಾರೆಗಳ ತೋಟದಲ್ಲಿ ವಿಶಿಷ್ಟರಾದ ತಾರಾ ಅವರ ಹುಟ್ಟಿದ ದಿನ ಮಾರ್ಚ್ 4. ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ತಾರಾ ಅದನ್ನು ಮತ್ತೊಮ್ಮೆ ತಂದರು. ‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’ ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ತಾರಾ ಕನ್ನಡ ನಾಡು ಕಂಡ ಅಮೂಲ್ಯ ಪ್ರತಿಭೆ. ಅವರ ಮತದಾನ, ಸಯನೈಡ್ ಅಂತ ಚಿತ್ರಗಳೂ ಅಷ್ಟೇ ಪ್ರಸಿದ್ಧ. 

ತಾರಾ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ತಮಿಳು ಚಿತ್ರರಂಗದ ಮೂಲಕ. ನಂತರ ಕನ್ನಡಕ್ಕೆ ಬಂದು ಇಲ್ಲಿ ನಿರಂತರವಾಗಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಲನಚಿತ್ರಗಳಲ್ಲಿ ಮನೆಮಾತಾಗಿದ್ದಾರೆ. ಅಷ್ಟೊಂದು ವರ್ಷ ಚಿತ್ರರಂಗದಲ್ಲಿದ್ದರೂ ಅವರು ನಾಯಕಿಯಾಗಿ ನಟಿಸಿದ್ದು ವಿರಳ ಚಿತ್ರಗಳಲ್ಲಿ. ಕನ್ನಡದ ಪ್ರತಿಷ್ಟಿತ ನಟರಾದ ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಅವರ ಕೂಡ ಅಲ್ಲಲ್ಲಿ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ತಾರಾ ಹೆಚ್ಚಾಗಿ ಕಂಡದ್ದು ನಮ್ಮ ನಾಯಕರ ತಂಗಿಯ ಪಾತ್ರದಲ್ಲಿ. 
ಸಿದ್ಧಲಿಂಗಯ್ಯ, ಕೆ. ಬಾಲಚಂದರ್, ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಶೇಷಾದ್ರಿ, ಮಣಿರತ್ನಂ, ನಾಗತಿಹಳ್ಳಿ ಅಂಥಹ ವಿಭಿನ್ನ ನೆಲೆಯ ಶ್ರೇಷ್ಠರ ನಿರ್ದೇಶನಗಳಲ್ಲಿ ಕೆಲಸಮಾಡಿದ್ದಾರೆ. ಹಲವು ರೀತಿಯ ಸಾರ್ವಜನಿಕ ಕಾರ್ಯಗಳಲ್ಲಿ ಆಸಕ್ತರಾಗಿರುವ ತಾರಾ ಅವರು ರಾಜಕೀಯವಲಯದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ವಿಧಾನ ಪರಿಷತ್ ಸದಸ್ಯರೂ ಹೌದು. ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ‘ಬೆಳ್ಳಿ ಹೆಜ್ಜೆ’, ‘ವಾರ್ಷಿಕ ಚಲನಚಿತ್ರೋತ್ಸವ’ಗಳ ಮೂಲಕ ತಮ್ಮ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿದ್ದಾರೆ. 

ಚಲನಚಿತ್ರ ತಂತ್ರಜ್ಞ ವೇಣು ಅವರನ್ನು ವರಿಸಿರುವ ತಾರಾ ಅವರು ಇತ್ತೀಚೆಗೆ ತಾಯಿಯಾಗಿದ್ದಾರೆ.

ಪ್ರಾರ್ಥನೆ - ಜಿ. ಪಿ. ರಾಜರತ್ನಂ

ಮಲೆಗಳಲಿ ಕಲ್ಲುಂಟು
ಹೊಲಗಳಲಿ ಹುಲ್ಲುಂಟು
ಹೊಳೆಗಳಲಿ ಮೀನುಂಟು
ಗೂಡಿನಲಿ ಜೇನುಂಟು
ನೀನುಂಟು ಎಲ್ಲೆಲ್ಲೂ – ಓ ಶಿವ
ನೀನುಂಟು ಎಲ್ಲೆಲ್ಲೂ

ಬಾಳೆಯಲಿ ಫಲವುಂಟು
ಚಂದ್ರನಲಿ ಮೊಲವುಂಟು
ಹುತ್ತದಲಿ ಹಾವುಂಟು
ಬೆಂಕಿಯಲಿ ಕಾವುಂಟು
ನೀನುಂಟು ಎಲ್ಲೆಲ್ಲೂ – ಓ ಶಿವ
ನೀನುಂಟು ಎಲ್ಲೆಲ್ಲೂ

ದೀಪದಲಿ ಬೆಳಕುಂಟು
ಕೋಪದಲಿ ಹುಳುಕುಂಟು
ಸರುವ ಕಡೆ ನೀನುಂಟು
ಇರುವ ಕಡೆ ನಾನುಂಟು
ನೀನುಂಟು ಎಲ್ಲೆಲ್ಲೂ – ಓ ಶಿವ
ನೀನುಂಟು ಎಲ್ಲೆಲ್ಲೂ

Friday, March 1, 2013

ಸೂಳೆಕೆರೆ

ಆಂಧ್ರಪ್ರದೇಶದ ಕಂಭಂಕೆರೆ ಹೊರತುಪಡಿಸಿದರೆ ದಕ್ಷಿಣ ಭಾರತದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇರುವುದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆಗೆ. ಇದು ಕರ್ನಾಟಕದ ಪ್ರಾಚೀನ ತಂತ್ರಜ್ಞಾನದ ಹೆಮ್ಮೆ. ಹಿರೇಹಳ್ಳಕ್ಕೆ ಎರಡು ಗುಡ್ಡಗಳ ಮಧ್ಯೆ ಒಂದು ಬೃಹತ್ ಒಡ್ಡು ಕಟ್ಟಿ ಹಾಕಿ ನೀರು ನಿಲ್ಲಿಸಿರುವ ಆ ಕೆರೆಯ ಸುತ್ತಳತೆ 65 ಕಿಲೋಮೀಟರ್. ಅದರ ಅಚ್ಚುಕಟ್ಟು ಪ್ರದೇಶ ಎರಡು ಸಾವಿರ ಹೆಕ್ಟೇರ್.

ಇಷ್ಟೊಂದು ವಿಸ್ತಾರದ ಕೆರೆ ನೋಡುಗರ ಕಣ್ಣಿಗೆ ಸಾಗರದಂತೆ ಕಾಣುತ್ತದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದದ ಏರಿ. ಏರಿಯ ಅಗಲ ಒಂದೆಡೆ 60 ಅಡಿಗಳಾದರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ.

ಐತಿಹಾಸಿಕ ಹಿನ್ನೆಲೆ

ಕೆರೆಯ ನಿರ್ಮಾಣದ ಹಿಂದೆ ಅಚ್ಚರಿಯ ಸಂಗತಿಗಳಿವೆ. ಇವು ಇತಿಹಾಸಕ್ತರಿಗೆ ಹೆಚ್ಚಿನ ಸಂಶೋಧನೆಗೆ ಆಕರಗಳನ್ನು ಒದಗಿಸುತ್ತವೆ. ಈ ಪ್ರದೇಶದಲ್ಲಿ ಹಿಂದೆ ಸ್ವರ್ಗವತಿ ಎಂಬ ಪಟ್ಟಣ ಇತ್ತೆಂಬ ಐತಿಹ್ಯ. ವಿಕ್ರಮರಾಯನೆಂಬ ರಾಜ ಆಳುತ್ತಿದ್ದ, ನೂತನಾದೇವಿ ಆತನ ಪತ್ನಿ. ಈ ದಂಪತಿಗೆ ಶಾಂತಲಾದೇವಿ (ಶಾಂತಮ್ಮ) ಎಂಬ ಒಬ್ಬಳೇ ಮಗಳು. ಅವಳು ಯವ್ವನಾವಸ್ಥೆಗೆ ಬಂದಾಗ ಒಮ್ಮೆ ತಂದೆಯ ಅನುಮತಿ ಪಡೆಯದೆ ಕಾರ್ಯನಿಮಿತ್ತ ನೆರೆಯ ಊರಿಗೆ ಹೋಗಿ ಅರಮನೆಗೆ ಹಿಂತಿರುಗುತ್ತಾಳೆ. ಆಕೆಯ ನಡವಳಿಕೆಯನ್ನು ತಂದೆ ವಿಕ್ರಮರಾಯ ಆಕ್ಷೇಪಿಸಿ ನಿಂದಿಸುತ್ತಾನೆ. ನಡತೆಗೆಟ್ಟವಳು (ಸೂಳೆ) ಎಂದು ಜರಿಯುತ್ತಾನೆ. ತಂದೆಯ ಬೈಗುಳ ಕೇಳಿ ನೊಂದ ಶಾಂತಲಾದೇವಿ ಆರೋಪ ಮುಕ್ತಳಾಗಲು ಒಂದು ಕೆರೆ ನಿರ್ಮಿಸಲು ಸಂಕಲ್ಪ ಮಾಡುತ್ತಾಳೆ. ಸ್ವರ್ಗವತಿ ಪಟ್ಟಣದ ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತ ಎಂದು ನಾಮಕರಣ ಮಾಡುವುದಾದರೆ ಆ ಪ್ರದೇಶವನ್ನು ಬಿಟ್ಟುಕೊಡುವುದಾಗಿ ಅವರು ಹೇಳುತ್ತಾರೆ. ಅವರ ಬೇಡಿಕೆಯಂತೆ ಒಪ್ಪಿದ ರಾಜಪುತ್ರಿ ಅಲ್ಲಿ ಕೆರೆ ನಿರ್ಮಾಣ ಮಾಡಿದಳು ಎಂಬುದು ಇತಿಹಾಸ.

ನೀರಿನ ಮೂಲ

ಅದೇನೆ ಇರಲಿ, ಇಲ್ಲಿನ ಐತಿಹ್ಯದಂತೆ ಸೂಳೆ ಶುಭ್ರ ಮನಸ್ಸಿನ ಶ್ರೇಷ್ಠಳು. ತ್ಯಾಗ ಸಂಕೇತದ ದೈವೀಸಮಾನಳೆಂಬ ಪೂಜ್ಯಭಾವನೆ ಇದೆ. ಸೂಳೆಕೆರೆಯ ಬಗ್ಗೆ ಚಿಕ್ಕ ಚಿಕ್ಕ ಸಮೃದ್ಧ ಜಾನಪದ ಗೀತೆಗಳಲ್ಲದೆ, ಕನಿಷ್ಠ ಮೂರು ಗ್ರಂಥಸ್ಥ ಕಾವ್ಯಗಳು ಹುಟ್ಟಿಕೊಂಡಿವೆ. ಕೆರೆ ವಿಸ್ತಾರವಾದ ಬೆಟ್ಟ ಸಾಲುಗಳ ಪ್ರದೇಶದಲ್ಲಿದೆ. ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಕೆರೆಗೆ ಹರಿದುಬರುತ್ತದೆ. ಹಳೇ ಮೈಸೂರು ರಾಜ್ಯದ ಬ್ರಿಟಿಷ್ ಎಂಜಿನಿಯರ್ ಸ್ಯಾಂಕಿ ಅವರು ಈ ಪ್ರದೇಶ ಕೆರೆ ನಿರ್ಮಾಣಕ್ಕೆ ಸೂಕ್ತವಲ್ಲ. ಹಿಂದಿನ ಕಾಲದ ನೀರಾವರಿ ತಂತ್ರಜ್ಞರ ಚಾಣಾಕ್ಷತೆಯಿಂದ ಈ ಕೆರೆ ನಿರ್ಮಾಣವಾಗಿದೆ. ಅದು ಅಚ್ಚರಿಯ ಸಂಗತಿ ಎಂದು ಹೇಳಿರುವುದು ಗಮನಾರ್ಹ. ಕೆರೆಯ ಉತ್ತರದಲ್ಲಿ ಸಿದ್ದನ ತೂಬು ಹಾಗೂ ಬಸವ ತೂಬು ಎಂಬ ಎರಡು ನಾಲೆಗಳಿವೆ. ಈ ಕೆರೆ ಸುಮಾರು 15ರಿಂದ 20 ಹಳ್ಳಿಗಳ ಕೃಷಿ ಭೂಮಿಗೆ (2000 ಎಕರೆ) ನೀರಾವರಿ ಸೌಲಭ್ಯ ಒದಗಿಸಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದೆ.

ತುಂಬಿದ ಕೆರೆಯ ಅಲೆಗಳು ಕಡಲ ಅಲೆಗಳಂತೆ ದಡಕ್ಕೆ ಅಪ್ಪಳಿಸುವುದು ನೋಡಲು ಪರಮಾದ್ಭುತ. ದಾವಣಗೆರೆ- ಚನ್ನಗಿರಿ ಮಾರ್ಗದಲ್ಲಿರುವ ಈ ಕೆರೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ ನೋಡಿ.

ಇನ್ನೇನಿದೆ?

ಕೆರೆಯ ಪೂರ್ವ ದಿಕ್ಕಿಗೆ ಹೊಯ್ಸಳ ಮತ್ತು ಕೆಳದಿ ವಾಸ್ತುಶೈಲಿಯ ಸಿದ್ದೇಶ್ವರ ದೇಗುಲವಿದೆ. ಇದರ ಆವರಣದಲ್ಲಿ ಶಾಂತವ್ವನ ದೇಗುಲವೂ ಇದೆ. ಕೆರೆಯ ಅಂಚಿನಲ್ಲೊಂದು ಆಕರ್ಷಕ ಕಲ್ಲು ಮಂಟಪ. ಇಲ್ಲಿಂದ ಕೆರೆ ವೀಕ್ಷಣೆ ಮನಮೋಹಕ. ಮೀನುಗಾರಿಕೆಗೂ ಈ ಕೆರೆಯ ಕೊಡುಗೆ ಅಪಾರ. ವಿಶೇಷವೆಂದರೆ, ಬೆಳದಿಂಗಳಲ್ಲಿ ಹಾಲಿನಂತೆ ನೀರ ಮೇಲೆಲ್ಲ ಚೆನ್ನಾಡುವ ಚಂದ್ರನ ಬೆಳಕು ಹೆಚ್ಚು ಮುದ ನೀಡುತ್ತದೆ. ಸೂರ್ಯೋದಯ, ಸೂರ್ಯಾಸ್ತಗಳ ವೇಳೆಗಳೂ ಅಷ್ಟೇ ರಂಗಾಗಿರುತ್ತದೆ.

ತಾಯೆ ಬಾರ ಮೊಗವ ತೋರ - ಗೋವಿಂದ ಪೈ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ 
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ

ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ 
ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು.

ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೋ
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೋ
ತೆನೆಕೆನೆಯ ಗಾಳಿಯೋ ಖಗಮೃಗೋರಗಾಳಿಯೋ
ನದಿ ನಗರ ನಗಾಳಿಯೋ ಇಲ್ಲಿಲ್ಲದುದುಳಿದುದೆ?

ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
ಬುಗುರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ?
ಪಾಂಡವರಜ್ಞಾತಮಿದ್ದ, ವಲಲಂ ಕೀಚಕನ ಗೆದ್ದ;
ಕುರುಕುಲಮಂಗದನ ಮೆದ್ದ ನಾಡು ನೋಡಿದಲ್ಲವೇ?
ನಂದನಂದನನಿಲ್ಲಿಂದ ಸಂದಿಗಯ್ದನಲ್ಲವೇ?

ಶಕವಿಜೇತನಮರ ಶಾತವಾಹನಾಖ್ಯನೀ ಶಕಂ,
ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ
ಚಳುಕ್ಯರಾಷ್ಟ್ರಕೂಟರೆಲ್ಲಿ ಗಂಗರಾ ಕದಂಬರೆಲ್ಲಿ
ಹೊಯ್ಸಳ ಕಳಚುರ್ಯರೆಲ್ಲ ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು.

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯಮತಾಚಾರ್ಯರ
ಶರ್ವ ಪಂಪ ರನ್ನರ, ಲಕ್ಷ್ಮೀಪತಿ ಜನ್ನರ
ಷಡಕ್ಷರಿ ಮುದ್ದಣ್ಣರ ಪುರಂದರವರೇಣ್ಯರ
ತಾಯೆ ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ

ಹಳೆಯಬೀಡ ಬೇಲನಾಡ ಮಾಡಮೆನಿತೊ ಸುಂದರಂ,
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ,
ಇಲ್ಲಿಲ್ಲದ ಶಿಲ್ಪಮಿಲ್ಲ, ನಿನ್ನ ಕಲ್ಲೆ ನುಡಿವುದಲ್ಲ
ಹಿಂಗತೆಯಿನಿವಾಲಸೊಲ್ಲನೆಮಗೆ ತೃಷೆ ದಕ್ಕಿಸು
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು.

ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯಿನಚ್ಚುಪಡಿಯನಾಂತರೆನಿತೊ ತಕ್ಕುದಂ?
ಎನಿತೊ ಹಳೆಯ ಕಾಲದಿಂದ ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ ನಿನಗೆ ಮರೆವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ?

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ ನೀನದನ್ನ ನವಶಕ್ತಿಯನೆಬ್ಬಿಸು
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!

ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?
ಕಡಲಿನೊರತೆಗೊಳವೆ ಕೊರತೆ ಬತ್ತದು ನಿನ್ನೂಟೆಯು
ಸೋಲಗೆಲ್ಲವಾರಿಗಿಲ್ಲ ಸೋತು ನೀನೆ ಗೆದ್ದೆಯಲ್ಲ
ನಿನ್ನನಳಿವು ತಟ್ಟಲೊಲ್ಲ ತಾಳಿಕೋಟೆ ಸಾಸಿರಂ
ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ!

ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ
ನಮ್ಮೆದೆಯಂ ತಾಯೆ ಬಲಿಸು ಎಲ್ಲರ ಬಾಯಲ್ಲಿ ನೆಲೆಸು
ನಮ್ಮ ಮನಮನೊಂದೆ ಕಲಸು ಇದನೊಂದನೆ ಕೋರುವೆ
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ?

ಕುನ್ನುಕ್ಕುಡಿ ವೈದ್ಯನಾಥನ್


ಪಿಟೀಲು ವಾದನದಲ್ಲಿ ದೇಶದಲ್ಲಿ ಕಂಡುಬರುವ ಪ್ರಧಾನ ಹೆಸರುಗಳಲ್ಲಿ ಕುನ್ನುಕ್ಕುಡಿ ವೈದ್ಯನಾಥನ್ ಒಬ್ಬರು.

ಈ ಮಹಾನ್ ಸಂಗೀತ ವಿದ್ವಾಂಸ ವೈದ್ಯನಾಥನ್ ಅವರು ಮಾರ್ಚ್ 2, 1935ರ ವರ್ಷದಲ್ಲಿ ಮುರುಗನ್ ದೇವಾಲಯದ ಊರಾದ ಕುನ್ನುಕ್ಕುಡಿಯಲ್ಲಿ ವಿದ್ವಾನ್ ರಾಮಸ್ವಾಮಿ ಶಾಸ್ತ್ರಿ ಮತ್ತು ಮೀನಾಕ್ಷಿ ದಂಪತಿಗಳ ಸುಪುತ್ರರಾಗಿ ಜನಿಸಿದರು. ತಂದೆ ರಾಮಸ್ವಾಮಿ ಶಾಸ್ತ್ರಿಗಳು ಸಂಸ್ಕೃತ ಮತ್ತು ತಮಿಳಿನ ಮಹಾನ್ ವಿದ್ವಾಂಸರೆಂದು ಪಡೆದ ಖ್ಯಾತಿಯ ಜೊತೆಗೆ ಕರ್ನಾಟಕ ಸಂಗೀತ ಮತ್ತು ಕಥಾಕಾಲಕ್ಷೇಪಗಳಿಗೂ ಹೆಸರಾಗಿದ್ದರು. ತಮ್ಮ ತಂದೆಯವರಿಂದ ವೈದ್ಯನಾಥನ್ ಅವರು ಬಾಲ್ಯದಿಂದಲೇ ಸಂಗೀತಾಭ್ಯಾಸವನ್ನು ಕೈಗೊಂಡರು.

ಹಣೆಯಲ್ಲಿ ದೊಡ್ಡ ವಿಭೂತಿ, ಹಸನ್ಮುಖದೊಂದಿಗೆ ಸಂಗೀತದ ಸ್ವಾದವನ್ನು ಸಂತಸದಿಂದ ಅನುಭಾವಿಸುತ್ತಾ, ಪ್ರೇಕ್ಷಕ ಶ್ರೋತೃವಿಗೆ ಅಪ್ಯಾಯಮಾನತೆ ಹುಟ್ಟುವ ರೀತಿಯಲ್ಲಿ ಪಿಟೀಲು ನುಡಿಸುತ್ತಾ ಸಂಭ್ರಮಿಸುವುದು.... ಇದು ಕುನ್ನುಕ್ಕುಡಿ ವೈದ್ಯನಾಥನ್ ಎಂದರೆ ನಮಗೆ ನೆನಪಿಗೆ ಬರುವ ಚಿತ್ರ. ವಯಲಿನ್ ವಾದ್ಯದಲ್ಲಿ ಅವರಿಂದ ಹೊರಹೊಮ್ಮುತ್ತಿದ್ದ ವೈವಿಧ್ಯತೆ, ಬಿರುಸು, ಮೃದುತ್ವ, ನಾಜೂಕು, ನಾವೀನ್ಯತೆ, ಮನರಂಜನೆ ಇವೆಲ್ಲಾ ಸಂಗೀತ ಪಂಡಿತರಿಂದ ಪಾಮರರವರೆಗೆ ತರುತ್ತಿದ್ದ ಅನುಭಾವ ಅಪ್ರತಿಮವಾದದ್ದು.

ತಮ್ಮ ಹನ್ನೆರಡನೆಯ ವಯಸ್ಸಿನಿಂದಲೇ ಕುನ್ನುಕ್ಕುಡಿ ವೈದ್ಯನಾಥನ್ ಅವರು ಸಂಗೀತದ ಘಟಾನುಘಟಿಗಳೆಂದು ಹೆಸರಾದ ಅರೈಯಕುಡಿ ರಾಮಾನುಜೈಂಗಾರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಮಹಾರಾಜಪುರಂ ಸಂತಾನಂ ಮುಂತಾದವರ ಕಚೇರಿಗಳಿಗೆ ಪಿಟೀಲು ವಾದನ ನೀಡುತ್ತಿದ್ದರು. ನಾದಸ್ವರ ವಿದ್ವಾಂಸರಾದ ಟಿ ಎನ್ ರಾಜರತ್ನಂ ಪಿಳ್ಳೈ ಮತ್ತು ತಿರುವೆಂಕಾಡು ಸುಬ್ರಮಣ್ಯಂ ಪಿಳ್ಳೈ ಅವರೊಂದಿಗೆ ಸಹಾ ಕುನ್ನುಕ್ಕುಡಿ ವೈದ್ಯನಾಥನ್ ಅವರ ಪಿಟೀಲು ವಾದನ ಜನಪ್ರಿಯತೆ ಪಡೆದಿತ್ತು.

1976ರ ವರ್ಷದಿಂದ ಮೊದಲ್ಗೊಂಡು ಸಂಗೀತ ಕಚೇರಿಗಳಲ್ಲಿ ಪಕ್ಕವಾದ್ಯಗಾರರಾಗಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದ ಕುನ್ನುಕ್ಕುಡಿಯವರು, ತಮ್ಮದೇ ಕಚೇರಿಗಳತ್ತ ಹೆಚ್ಚು ಗಮನಹರಿಸತೊಡಗಿದರು. ತಮ್ಮ ಸಂಗೀತ ಕಚೇರಿಗಳಲ್ಲಿ ನಿರಂತರವಾಗಿ ಹೊಸತನ ತುಂಬುವತ್ತ ಉತ್ಸುಕರಾಗಿದ್ದ ಅವರನ್ನು, ವಲಯಪಟ್ಟಿ ಸುಬ್ರಮಣ್ಯಂ ಅವರ ಡೋಲುವಾದನದ ಸಂಯೋಗವನ್ನು ತಮ್ಮ ಕಚೇರಿಗಳೊಡನೆ ಬೆಸೆಯುವತ್ತ ಪ್ರೇರೇಪಿಸಿತು. ಸುಬ್ರಮಣ್ಯಮ್ ಅವರ ಡೋಲು ವಾದನದೊಡನೆ ಕುನ್ನುಕ್ಕುಡಿಯವರು ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದರು. ಸಂಗೀತದಲ್ಲಿ ಆರೋಗ್ಯ ಉತ್ತಮಪಡಿಸುವ ಗುಣವಿದೆ ಎಂಬುದು ಕುನ್ನುಕ್ಕುಡಿ ವೈದ್ಯನಾಥನ್ ಅವರಲ್ಲಿದ್ದ ಅಚಲ ನಂಬಿಕೆ.

ಭಕ್ತಿ ಸಂಗೀತ ಮತ್ತು ಸಿನಿಮಾ ಸಂಗೀತಗಳಲ್ಲಿ ಸಹಾ ಕುನ್ನುಕ್ಕುಡಿ ವೈದ್ಯನಾಥನ್ ಅವರು ಪ್ರಸಿದ್ಧರು. ಹಲವಾರು ಪ್ರಸಿದ್ಧ ತಮಿಳು ಚಿತ್ರಗಳಿಗೆ ಸಂಗೀತ ನೀಡಿದುದೇ ಅಲ್ಲದೆ, ಕೆಲವೊಂದು ಚಿತ್ರಗಳಲ್ಲಿ ಅವರು ಪಾತ್ರನಿರ್ವಹಣೆಯನ್ನೂ ಮಾಡಿದ್ದರು. ಒಂದು ಚಿತ್ರವನ್ನೂ ನಿರ್ಮಿಸಿದ್ದರು. ತಿರುವಯ್ಯಾರ್ ಕ್ಷೇತ್ರದಲ್ಲಿ ನಡೆಯುವ ತ್ಯಾಗರಾಜ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು ಮತ್ತು ಹಲವಾರು ಸಾಂಸ್ಕೃತಿಕ ವೇದಿಕೆಗಳ ಸಂಘಟಕರಾಗಿ ಸಹಾ ಅವರು ಉತ್ತಮ ಕಾರ್ಯನಿರ್ವಾಹಕರೆಂದು ಹೆಸರು ಪಡೆದಿದ್ದರು.

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯೇ ಅಲ್ಲದೆ, ಕಲೈಮಾಮಣಿ, ಸಂಗೀತ ನಾಟಕ ಅಕಾಡೆಮಿ ಗೌರವ, ಚಿತ್ರ ಸಂಗೀತಕ್ಕಾಗಿನ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿಗಳು ಮುಂತಾದ ಅಸಂಖ್ಯಾತ ಗೌರವಗಳಿಗೆ ಕುನ್ನುಕ್ಕುಡಿ ವೈದ್ಯನಾಥನ್ ಅವರು ಪಾತ್ರರಾಗಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ಕುನ್ನುಕ್ಕುಡಿ ವೈದ್ಯನಾಥನ್ ಕಚೇರಿ ಎಂದರೆ ತುಂಬಿತುಳುಕುತ್ತಿದ್ದ ಜನಸಂದಣಿ. ಶ್ರೇಷ್ಠ ಸಂಗೀತಜ್ಞರಿಗೆ ಸಂಗೀತ ವಿದ್ವತ್ತನ್ನುಭಿತ್ತರಿಸುತ್ತಲೇ, ಜನಸಾಮಾನ್ಯನಿಗೂ ಅಪ್ಯಾಯಮಾನವಾಗುವ ರೀತಿಯಲ್ಲಿ ನಾದ ಹೊಮ್ಮಿಸುತ್ತಾ, ಸಂಗೀತ ಕ್ಷೇತ್ರಕ್ಕೆ ಹೊಸ ಹೊಸ ಶ್ರೋತೃಗಳನ್ನು ನಿರಂತರವಾಗಿ ಸೇರಿಸುತ್ತಾ ನಡೆದ ಕುನ್ನುಕ್ಕುಡಿ ವೈದ್ಯನಾಥನ್ ಅವರ ಸಾಮರ್ಥ್ಯ ಅದ್ವಿತೀಯವಾದದ್ದು.

ಈ ಮಹಾನ್ ಸಂಗೀತ ವಿದ್ವಾಂಸರು ಸೆಪ್ಟೆಂಬರ್ 8, 2008ರಂದು ಈ ಲೋಕವನ್ನಗಲಿದರು.