WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Wednesday, January 30, 2013

ಮಾತು ಮುತ್ತು -ಕೆ. ಎಸ್. ನರಸಿಂಹಸ್ವಾಮಿ

ಮಾತು ಬರುವುದು ಎಂದು ಮಾತಾಡುವುದು ಬೇಡ;
ಒಂದು ಮಾತಿಗೆ ಎರಡು ಅರ್ಥವುಂಟು. 
ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;
ಬರಿದೆ ಆಡುವ ಮಾತಿಗರ್ಥವಿಲ್ಲ.

ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ;
ಮೀನು ಬೀಳುವ ತನಕ ಕಾಯ ಬೇಕು.
ಮೀನ ಹೊರೆಯನು ಹೊತ್ತು ಮನೆಗೆ ಬಂದಿದ್ದಾನೆ;
ಹುಡುಕುತ್ತಲಿಹನವನು ಮುತ್ತಿಗಾಗಿ.

ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.
ಮೀನಿನಿಂದಲು ನಮಗೆ ಲಾಭವುಂಟು.
ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ.
ಅವನ ದುಡಿಮೆಗೆ ಕೂಡ ಅರ್ಥವುಂಟು.

ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು
ಮುತ್ತಕೊಟ್ಟಳು ಅವನ ಹಸಿದ ತುಟಿಗೆ.
ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.
ಮುತ್ತು ಸಿಕ್ಕಿತು ಎಂದು ನಕ್ಕವನು. 

Saturday, January 26, 2013

ನಡೆ ಮುಂದೆ, ನಡೆ ಮುಂದೆ - ಕುವೆಂಪು

ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ, ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!

ಬೆಚ್ಚ ಬಿಡು, ನೆಚ್ಚ ನೆಡು
ಕೆಚ್ಚದೆಯ ಗುಡಿಯಲ್ಲಿ;
ಸೆರೆಯ ಹರಿ, ಅರಿಯನಿರಿ,
ಹುಟ್ಟಳಿಸು ಹುಡಿಯಲ್ಲಿ!
ನಾನಳಿವೆ, ನೀನಳಿವೆ,
ನಮ್ಮೆಲುಬುಗಳ ಮೇಲೆ
ಮೂಡುವುದು, ಮೂಡುವುದು
ನವಭಾರತದ ಲೀಲೆ!
ನೊಂದ ದನಿ, ಕಣ್ಣಪನಿ,
ಬರಿದೆ ಎಂದೊರೆಯದಿರು!
ತೆತ್ತ ಹಣ, ಸತ್ತ ಹೆಣ
ಹೋಯ್ತೆಂದು ಮೊರೆಯದಿರು!
ಪೊಡವಿಯೊಳಡಗಿರುವ
ತಳಹದಿಯ ತೆಗಳುವರೆ?
ಮೆರೆಯುತಿರುವರಮನೆಯ
ಸಿರಿಯೊಂದ ಹೊಗಳುವರೆ?
ಎಲ್ಲ ಇದೆ, ಎಲ್ಲ ಇದೆ
ನಿತ್ಯತೆಯ ಗಬ್ಬದಲಿ;
ಮುಂದೆಯದು ತೋರುವುದು
ಬಿಡುಗಡೆಯ ಹಬ್ಬದಲಿ!
ನೆಚ್ಚುಗೆಡಬೇಡ ನಡೆ,
ಕೆಚ್ಚದೆಯ ಕಲಿಯೆ!
ಬೆಚ್ಚಿದರೆ, ಬೆದರಿದರೆ,
ಕಾಳಿಗದು ಬಲಿಯೆ?

ಭರತಖಂಡದ ಹಿತವೆ
ನನ್ನ ಹಿತ ಎಂದು,
ಭರತಮಾತೆಯ ಮತವೆ
ನನ್ನ ಮತ ಎಂದು.
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ತಿ ನನಗದೆಂದು,
ನುಗ್ಗು ಮುಂದಕೆ, ಧೀರ,
ಕಾಳೆಗದ ಕೊಲೆಗೆ!
ನುಗ್ಗು ಮರಣಕೆ, ವೀರ,
ಸಗ್ಗದಾ ನೆಲೆಗೆ!

ನೋಡದೋ ನೋಡಲ್ಲಿ:
ದರ್ಪರಥದಡಿಯಲ್ಲಿ
ಹೊರಳುತಿರುವಳು ತಾಯಿ
ನೆತ್ತರಿನ ಪುಡಿಯಲ್ಲಿ!
ಬಾಳನೊರೆಯಿಂದ ಹಿರಿ!
ನುಗ್ಗು, ನಡೆ, ಕಟ್ಟ ಹರಿ!
ತಡೆಯ ಬಂದವರ ಇರಿ!
ಒಲಿಯುವಳು ಜಯದ ಸಿರಿ!
ಜನ್ಮವೊಂದಳಿದರೇಂ?
ನೂರಿಹವು ಬಲಿಗೆ!
ಕಾಳೆಗದೊಳಳಿಯಲೇಂ? |
ಸಾವೆ ಸಿರಿ ಕಲಿಗೆ!

ನಿಂತೇನು ನೋಡುತಿಹೆ?
ಹದುಗುವರೆ ಇಲ್ಲಿ?
ಮಸಣವಾಗಲಿ ಎದೆಯು
ರಣರಂಗದಲ್ಲಿ!
ನೆತ್ತರನು ನೋಡುವೆಯ?
ಸತ್ತವರ ನೋಡುವೆಯ?
ಕಂಕಾಲಗಳ ಗೂಡೆ?
ಮರಳುಗಳ ನೆಲೆಬೀಡೆ?
ಕಾಳಿಯಳಕುವಳೇನು
ರಕ್ಕಸರ ಬಲಿಗೆ?
ಸಮರ ರಂಗದ ನಡುವೆ
ಬೆದರಿಕೆಯೆ ಕಲಿಗೆ?

ಹಾ ನೋವು! ಹಾ ನೋವು!
ಎಂದೆಲ್ಲ ಕೂಗುವರೆ?
ಹಾ ನೀರು! ಹಾ ನೀರು!
ಎಂದಸುವ ನೀಗುವರೆ?
ಕೂಗಿಗೆದೆಗರಗದಿರು!
ಬೇನೆಯಿರೆ ಮರುಗದಿರು!
ಕಂಬನಿಯ ಕರೆಯದಿರು,
ಗುರಿಯ ಮರೆಯದಿರು,
ಕಲಿಯೆ, ಹಿಂಜರಿಯದಿರು,
ತಾಯ ತೊರೆಯದಿರು!
ಎಲುಬುಗಳ ತೊಲೆಗಳಲಿ
ಮಾಂಸದಾ ಮಣ್ಣಿನಲಿ
ನೆತ್ತರಿನ ನೀರಿನಲಿ
ಬೇನೆ ಬಿಸುಸುಯ್ಲಿನಲಿ
ಬಿಡುಗಡೆಯ ಸಿರಿಗುಡಿಯ
ಮಸಣದಲಿ ಕಟ್ಟು!
ಪಾವನದ ತಾಯಡಿಯ
ಬಲ್ಮೆಯಲಿ ಮುಟ್ಟು!
ಅತ್ಮವಚ್ಯುತವೆಂದು
ಜನ್ಮಗಳು ಬಹವೆಂದು
ಮೃತ್ಯ ನಶ್ವರವೆಂದು
ಭಾರತಿಗೆ ಜಯ ಎಂದು
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!

ಸಾಹಿತ್ಯ: ಕುವೆಂಪು
ಸಂಕಲನ: ಪಾಂಚಜನ್ಯ

ತಾಯಿ ಶಾರದೆ ಲೋಕ ಪೂಜಿತೆ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ..

ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್
ಅಭಿನಯ: ಪ್ರಸಿದ್ಧ ನಿರ್ದೇಶಕ ಎನ್ ಲಕ್ಷ್ಮೀನಾರಾಯಣ್ ಮತ್ತು ಬಾಲನಟನಾಗಿದ್ದ ಪುನೀತ್ ರಾಜ್ ಕುಮಾರ್ ಮತ್ತು ಇತರ ಮಕ್ಕಳು.

ಜಯ ಭಾರತ ಜನನಿಯ ತನುಜಾತೆ - ಕುವೆಂಪು

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೇ, ಜಯ ಹೇ ರಸ ಋಷಿಗಳ ಬೀಡೇ
ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !

ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ !

ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !

ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ !

ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ದೇಹ, ಕನ್ನಡ ತಾಯಿಯ ಮಕ್ಕಳ ಗೇಹ
ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ

Friday, January 25, 2013

ಗಣರಾಜ್ಯೋತ್ಸವ

ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರ೦ದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತ ಗಣರಾಜ್ಯವಾದದ್ದು [[ಜನವರಿ ೨೬]], ೧೯೫೦ ರ೦ದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯ೦ತ ಸರ್ಕಾರಿ ರಜಾ ದಿನ. ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಪೆರಿ ನಡೆಯುತ್ತದೆ.

ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು [[ಡಾ.
ಅಂಬೇಡ್ಕರ್]] ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು. ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೩೦ ರ೦ದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ [[ಪೂರ್ಣ ಸ್ವರಾಜ್ಯ]]ದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎ೦ದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದ೦ದೇ ಜಾರಿಗೆ ತರಲಾಯಿತು.

ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು

ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು 
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು, ಕಣ್ಣ ಹಾಡಂತೆ ಕಾಯುವೆನು

ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ, ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ, ತಂಪು ಗಾಳಿ, ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ, ಅಲ್ಲಿ ನನ್ನ ಇಂಚರ ಅಮರ

ಚೆಲುವನೆ ನಿನ್ನ ಮುಗುಳುನಗೆ, ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ, ಮದನನು ಮರುಗಿ ಸೊರಗುವನು
ತಾಯಿ ತಂದೆ, ಎಲ್ಲಾ ನೀನೆ, ಯಾಕೆ ಬೇರೆ ನಂಟು?
ಸಾಕು ಎಲ್ಲ, ಸಿರಿಗಳ ಮೀರೊ, ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೇ
ನನ್ನ ಎದೆಯಾಳೊ ಧಣಿ ನೀನೇ, ನಿನ್ನ ಸಹಚಾರಿಣಿ ನಾನೇ

ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ದೇವ
ಗಾಯನ: ಚಿತ್ರ

ಬಿ. ಜಯಶ್ರೀ

ಬಿ. ಜಯಶ್ರೀ ಅವರು ಹುಟ್ಟಿದ್ದು ಜೂನ್ 9, 1950ರಂದು. ತಂದೆ ಬಸವರಾಜ್, ತಾಯಿ ಜಿ.ವಿ. ಮಾಲತಮ್ಮ. ಗುಬ್ಬಿ ವೀರಣ್ಣನವರ ಮೊಮ್ಮಗಳಾದ ಬಿ. ಜಯಶ್ರೀ ಅವರು ನಾಲ್ಕು ವರ್ಷದ ವಯಸ್ಸಿನಲ್ಲೇ ನಾಟಕ ರಂಗಕ್ಕೆ ಬಂದವರು. ಮೊದಲು ವೃತ್ತಿ ರಂಗಭೂಮಿ, ನಂತರದಲ್ಲಿ ಹವ್ಯಾಸಿ ರಂಗಭೂಮಿಗೆ ಬಂದು, ಮುಂದೆ ಸಿನಿಮಾ ಮತ್ತು ದೂರದರ್ಶನದಲ್ಲೂ ತಮ್ಮ ಪ್ರತಿಭೆ ಮಾತ್ರದಿಂದ ಪ್ರಕಾಶಿಸುತ್ತಿರುವ ಬಿ. ಜಯಶ್ರೀ ಅವರು ಪ್ರಸಕ್ತದಲ್ಲಿ ರಾಜ್ಯಸಭಾ ಸದಸ್ಯರೂ ಹೌದು. 

ದೆಹಲಿಯ ರಾಷ್ಟ್ರೀಯ ನಾಟಕಶಾಲೆಯಲ್ಲಿ ತರಬೇತು ಪಡೆದ ಜಯಶ್ರೀ ಅವರು ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಪ್ರಧಾನ ಹೆಸರು ಮಾಡಿರುವ ‘ಸ್ಪಂದನ’ ನಾಟಕ ತಂಡವನ್ನು ಹುಟ್ಟುಹಾಕಿದವರು. ಅವರು ಆದರ್ಶ ಫಿಲಂ ಇನ್‌ಸ್ಟಿಟ್ಯೂಟಿನ ಉಪನ್ಯಾಸಕಿಯಾಗಿ ಸಹಾ ಜವಾಬ್ಧಾರಿ ನಿರ್ವಹಿಸಿದ್ದಾರೆ. ಬಾಲಭವನದಂತಹ ಕೇಂದ್ರಗಳಲ್ಲಿ ಕ್ರಿಯಾತ್ಮಕವಾಗಿ ದುಡಿದಿದ್ದಾರೆ.

ನಾಟಕಗಳಲ್ಲಿ ಅಭಿನಯ, ನಿರ್ದೇಶನಗಳನ್ನು ಒಳಗೊಂಡಂತೆ ಎಲ್ಲ ರೀತಿಯಲ್ಲಿ ಸಕ್ರಿಯರಾಗಿದ್ದ ಜಯಶ್ರೀ ಅವರ ಕಂಚುಕಂಠ ಮೋಹಕವಾದದ್ದು. ಉತ್ತಮ ಪ್ರತಿಭೆಗಳನ್ನು ಬಳಸುವುದರಲ್ಲಿ ವಿಳಂಭ ಮಾಡುವ ಚಿತ್ರರಂಗ ಬಿ. ಜಯಶ್ರೀ ಅವರ ವಿಚಾರದಲ್ಲೂ ಹಾಗೆಯೇ ಮಾಡಿತು. ಎಂ. ಎಸ್. ಸತ್ಯು, ನಾಗಾಭರಣ ಅಂತಹವರ ಕೆಲವು ಚಿತ್ರಗಳಲ್ಲಿ ಅಲ್ಲಲ್ಲಿ ಮಾತ್ರ ನಟಿಸಿದ ಜಯಶ್ರೀ ಅವರು ಹಾಡಿರುವ ಚಿತ್ರಗೀತೆಗಳಲ್ಲಿ ಚಕ್ಕೋತ ಚಕ್ಕೋತ, ಕಾರ್ ಕಾರ್ ಕಾರ್ ಮುಂತಾದ ಹಾಡುಗಳು ಅಪಾರ ಜನಪ್ರಿಯವಾಗಿವೆ.

ನಾಗಮಂಡಲ, ತಾಯಿ, ಬ್ಯಾರಿಸ್ಟರ್, ಕರಿಮಾಯಿ, ಲಕ್ಷಾಪತಿ ರಾಜನ ಕತೆ, ವೈಶಾಖ ಮುಂತಾದ ಹಲವಾರು ನಾಟಕಗಳು ಬಿ. ಜಯಶ್ರೀ ಅವರ ಅನನ್ಯ ಕಲಾಸೇವೆಯನ್ನು ನಿರಂತರ ಸ್ಮರಿಸುವಂತೆ ಮಾಡಿವೆ. ಗುಬ್ಬೀ ಕಂಪೆನಿಯ ಪ್ರಸಿದ್ಧ ನಾಟಕವಾದ ‘ಸದಾರಮೆ’ಗೆ ಕೂಡಾ ಅವರು ಇತ್ತೀಚಿನ ದಿನಗಳಲ್ಲಿ ಪುನರ್ಜೀವ ಕೊಟ್ಟರು. ದೇಶ ವಿದೇಶಗಳಲ್ಲಿ ಅವರ ನಿರ್ಮಾಣ, ನಿರ್ದೇಶನ, ಅಭಿನಯಗಳು ಜನಮೆಚ್ಚುಗೆ ಪಡೆದಿವೆ.

1996ರ ವರ್ಷದ ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವದ ಪುರಸ್ಕಾರದೊಡನೆ ಜಯಶ್ರೀ ಅವರಿಗೆ ವಿವಿಧ ರೀತಿಯ ಗೌರವಗಳು ಸಂದಿವೆ. ರಂಗಭೂಮಿಯಲ್ಲಿ ಅಪಾರ ಸೇವೆ ಸಲ್ಲಿಸುವುದರ ಮೂಲಕ ರಂಗಾಯಣದ ನಿರ್ದೇಶಕಿಯಾಗಿ ಸಹಾ ಕೆಲವು ಕಾಲ ಕೆಲಸ ಮಾಡಿ ಹೊರಬಂದ ಜಯಶ್ರೀ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದಾಗ ಇಡೀ ಕನ್ನಡ ನಾಡೇ ಸಂತಸಪಟ್ಟಿತು. ಇದೀಗ ಅವರಿಗೆ ಪದ್ಮಶ್ರೀ ಗೌರವ ಸಂದಿರುವುದು ಕನ್ನಡಿಗರ ಸಂತಸವನ್ನು ಇಮ್ಮಡಿಸಿದೆ. 

ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ

ಕಟ್ಟುವೆವು ನಾವು ಹೊಸ ನಾಡೊಂದನು, -ರಸದ
ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

ನಮ್ಮೆದೆಯ ಕನಸುಗಳೆ ಕಾಮಧೇನು
ಆದಾವು, ಕರೆದಾವು ವಾಂಛಿತವನು;
ಕರೆವ ಕೈಗಿಹುದಿದೋ ಕನಸುಗಳ ಹರಕೆ;
ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿಮತಭೇದಗಳ ಕಂದಕವು ಸುತ್ತಲೂ,
ದುರ್ಭೆದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೋಳ್ತಟ್ಟಿ
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!

ನಾವು ಹಿಂದೆಗೆವೆವೇ? ವೀರ ತರುಣರು ನಾವು!
ಒಂದೆ ನೆಗೆತಕೆ ನೆಗೆವೆವೋ ಕಂದಕವನು,
ಕುಟ್ಟಿ ಪುಡಿಮಾಡುವೆವು ಕೋಟೆಗಳನು,
ಎದೆಯ ಮೆಟ್ಟಿ ಮುರಿಯುವೆವಸುರ ರಟ್ಟೆಗಳನು!

ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!


ಎಡರುಗಳ ಕಡಲುಗಳನೀಸಿ ಬರುವೆವು, ಘೋರ
ನೈರಾಶದಗ್ನಿಮುಖದಲ್ಲು ಕೂಡ
ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೋ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯ ದಾವಾಗ್ನಿಯಲ್ಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು!


ಇಲ್ಲೆ ಈ ಎಡೆಯಲ್ಲಿ ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದು ಕಾದು ನೋಡು!


ಉತ್ಸಾಹ ಉದ್ವೇಗ ಉದ್ರೇಕಗಳ ವೀರ
ಯುವಜನದ ನಾಡ ಗುಡಿಯು;
ಅದರ ಹಾರಾಟಕ್ಕೆ ಬಾನೆ ಗಡಿಯು,
ಬರಲು ಬಿಡೆವೆಂದಿಗೂ ಅದಕೆ ತಡೆಯು!
ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ,
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
ಕೊಟ್ಟೆವಿದೊ ವೀಳೆಯವನು;
ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
ಬೀಡೊಂದನು!

Thursday, January 24, 2013

ಭಾರತೀಯ ಪುರಾತತ್ವ ಸಂಶೋಧನಾ ಪಿತಾಮಹ ಕನ್ನಿಂಗ್ ಹ್ಯಾಮ್.

ಬೆಂಗಳೂರಿನಲ್ಲಿ ಕನ್ನಿಂಗ್ ಹ್ಯಾಮ್ ರಸ್ತೆ ಎಂಬುದು ಒಂದು ಪ್ರಸಿದ್ಧ ರಸ್ತೆ. ಯಾರು ಈ ಕನ್ನಿಂಗ್ ಹ್ಯಾಮ್?

ಜನವರಿ 23 ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ (1814-1893) ಅವರು ಹುಟ್ಟಿದ ದಿನ. 

ಬ್ರಿಟಿಷರ ಕಾಲದಲ್ಲಿ ಭಾರತಕ್ಕೆ ಬಂದ ವಿದ್ವಾಂಸರು, ಪ್ರತಿಭಾವಂತರು ಅನೇಕರು. ಹೀಗೆ ಬಂದವರಲ್ಲಿ ಕೆಲವರು ಭಾರತಕ್ಕೆ ವಿಶೇಷವಾದ ಕೊಡುಗೆ ನೀಡಿದರು. ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ ಅಂತಹವರಲ್ಲಿ ಒಬ್ಬರು. ಭಾರತದ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಹರಪ್ಪದ ಕುರುಹುಗಳನ್ನು ಪತ್ತೆ ಮಾಡಿ ಭಾರತೀಯ ಪುರಾತತ್ವ ಶೋಧನೆಗೆ ಹೊಸ ಮಾರ್ಗವನ್ನು ನಿರ್ಮಿಸಿಕೊಟ್ಟ ಮಹಾನ್ ಸಾಧಕರು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಅವರಲ್ಲಿ ಇತಿಹಾಸದ ಬಗ್ಗೆ ಅತೀವ ಆಸಕ್ತಿ. ಹಾಗಾಗಿ ಏಷ್ಯಾಟಿಕ್ ಸೊಸೈಟಿಯ ಕಾರ್ಯದರ್ಶಿಯಾಗಿದ್ದ ಜೇಮ್ಸ್ ಪ್ರಿನ್ಸೆಪ್ ಅವರೊಂದಿಗೆ ಸಕ್ರಿಯವಾಗಿ ಅಧ್ಯಯನದಲ್ಲಿ ತೊಡಗಿದರು. ಅಂದಿನ ವೈಸರಾಯ್ ಅವರೊಂದಿಗೆ ಅವರು ನಡೆಸಿದ ನಿರಂತರ ಸಂಪರ್ಕದ ಮೇರೆಗೆ, 1862ರಲ್ಲಿ ಭಾರತ ಸರ್ಕಾರದ ಪುರಾತತ್ವ ಸಂಶೋಧನಾ ಇಲಾಖೆಯನ್ನು ಸ್ಥಾಪಿಸಿ ಅದರ ಸರ್ವೇಯರ್ ಆಗಿ ಕಾರ್ಯ ನಿರ್ವಹಿಸಿದರು. ಸುಮಾರು 23 ವರ್ಷಗಳ ಕಾಲ ಪುರಾತತ್ವ ಸಂಶೋಧನೆಯಲ್ಲಿ ಅವಿರತ ದುಡಿದರು. 1871ರ ವರ್ಷದಿಂದ 1885ರ ಅವಧಿಯವರೆಗೆ ಅವರು ಭಾರತೀಯ ಪುರಾತತ್ವ ಸಂಶೋಧನಾ ಇಲಾಖೆಯ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದರು. ಜತೆಗೆ ಅನೇಕ ಆಸಕ್ತ ಸಂಶೋಧಕರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು.

ಹೆಚ್ಚಿನ ಸೌಕರ್ಯಗಳಿಲ್ಲದ ಕಾಲದಲ್ಲೇ ಸಂಶೋಧನೆಯಲ್ಲಿ ತೊಡಗಿಕೊಂಡ ಕನ್ನಿಂಗ್ ಹ್ಯಾಮ್ ಅಪೂರ್ವವಾದ ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸಿದರು. ಅವರು ಸ್ವಯಂ ಪುರಾತತ್ವ ಸಂಶೋಧನೆಯ ಹನ್ನೊಂದು ಬೃಹತ್ ಸಂಪುಟಗಳ ಲೇಖಕರಾಗಿ ದುಡಿದರು. 1885ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ ನಂತರ ಸಹಾ ಬೌದ್ಧ ಸ್ಥಳಗಳ ಉತ್ಖನನ ಮತ್ತು ಪ್ರಾಚೀನ ನಾಣ್ಯಗಳ ಸಂಗ್ರಹದ ಕುರಿತಾಗಿ ಪುಸ್ತಕಗಳನ್ನು ಬರೆದರು.

ಕನ್ನಿಂಗ್ ಹ್ಯಾಮ್ ಅವರ ಪ್ರಸಿದ್ಧ ಪುಸ್ತಕಗಳಲ್ಲಿ ಲಡಕ್ ಕುರಿತಾದ ಪುಸ್ತಕ, ಬಿಲ್ಸಾ ಟೋಪ್ಸ್, ದಿ ಏನ್ಷಂಟ್ ಜಿಯಾಗ್ರಫಿ ಆಫ್ ಇಂಡಿಯಾ, ದಿ ಬುಕ್ ಆಫ್ ಇಂಡಿಯನ್ ಎರಾಸ್, ಕಾಯಿನ್ಸ್ ಆಫ್ ಏನ್ಷಂಟ್ ಇಂಡಿಯಾ, ದಿ ಸ್ತೂಪ ಆಫ್ ಭಾರಹತ್ ಮುಂತಾದವು ಅವರು ಭಾರತೀಯ ಪ್ರಾಚ್ಯ ಸಂಶೋಧನೆಯ ಕುರಿತಾಗಿ ನೀಡಿರುವ ಅಮೂಲ್ಯ ಕೊಡುಗೆಗಳೆನಿಸಿವೆ.

ಸಂಚಿ, ಸಾರಾನಾಥ, ಮಹಾಬೋಧಿ ದೇಗುಲ ಮುಂತಾದ ಪ್ರಸಿದ್ಧ ಸ್ಥಳಗಳನ್ನೂ ಒಳಗೊಂಡಂತೆ ಕನ್ನಿಂಗ್ ಹ್ಯಾಮ್ ಅವರು ಭಾರತದ ಅನೇಕ ಐತಿಹಾಸಿಕ ಸ್ಥಳಗಳ ಉತ್ಖನನದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಈ ಮಹಾನ್ ಸಾಧಕ ಕನ್ನಿಂಗ್ ಹ್ಯಾಮ್ ಅವರು ನವೆಂಬರ್ 28, 1893ರಲ್ಲಿ ಲಂಡನ್ನಿನಲ್ಲಿ ನಿಧನರಾದರು. ಅವರ ಅಮೂಲ್ಯವಾದ ಪ್ರಾಚೀನ ಭಾರತೀಯ ನಾಣ್ಯಗಳ ಸಂಗ್ರಹವನ್ನು ಬ್ರಿಟಿಷ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

Tuesday, January 22, 2013

ಓದುಗರ ಚಾವಡಿ

ಮೊನ್ನೆ (ಭಾನುವಾರ) ಹುಂಚ(ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ)ಕ್ಕೆ ಹೋಗಿದ್ದೆ. ನಮ್ಮ ಶಾಲೆಯ ಕನ್ನಡ ಶಿಕ್ಷಕರು ಅಲ್ಲಿ 'ಓದುಗರ ಚಾವಡಿ' ಕಾರ್ಯಕ್ರಮ ನಡೆಯುವುದಾಗಿ ತಿಳಿಸಿದ್ದರು. ಅದು ಆರೆಸ್ಸೆಸ್ಸಿನ ಒಂದು ಉಪಶಾಖೆ ಎಂಬುದು ಅಲ್ಲಿಗೆ ಹೋದ ಮೇಲಷ್ಟೇ ತಿಳಿಯಿತು. ತಿಂಗಳಿಗೆ ಒಮ್ಮೆ ಒಂದು ಸ್ಥಳದಲ್ಲಿ ಇಂಥ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಸದಸ್ಯರು ಒಂದು ಪುಸ್ತಕವನ್ನು ಕೊಂಡುಕೊಳ್ಳಬೇಕು. ಮುಂದಿನ ಕಾರ್ಯಕ್ರಮದಲ್ಲಿ ಒಂದು ಅಧ್ಯಾಯವನ್ನು ಓದಿಕೊಂಡು ಬಂದು ಅದರಲ್ಲಿನ ವಿಚಾರವನ್ನು ಮಂಡಿಸಬೇಕು. ಅಂದು ಆಯ್ದುಕೊಂಡಿದ್ದ ಪುಸ್ತಕ ......ಶಾಸ್ತ್ರಿಯವರ 'ಯಾವುದು ಚರಿತ್ರೆ?' (ಅನು: ಬಾಬು ಕೃಷ್ಣಮೂರ್ತಿ). ಪ್ರಕಾಶಕರು: ದ್ರಾವಿಡ ವಿಶ್ವವಿದ್ಯಾಲಯ. ಪುಸ್ತಕದ ಬೆಲೆ 200 ರೂಪಾಯಿಗಳು. ಶಿವಣ್ಣ ಎಂಬುವವರು ಈ ಕಾರ್ಯಕ್ರಮದ ಸಂಘಟಕರು. ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಈ ಪುಸ್ತಕದ 1000 ಪ್ರತಿಗಳನ್ನು ಮಾರಾಟ ಮಾಡಿದ್ದಾರಂತೆ. ಇದರಿಂದ ಹೈದರಾಬಾದಿನಲ್ಲಿರುವ ಮೂಲ ಲೇಖಕರಿಗೇ ಆಶ್ಚರ್ಯವಾಗಿದೆಯಂತೆ! ನಾನು ಆ ಪುಸ್ತಕವನ್ನು ಹಾಗೇ ಕಣ್ಣಾಡಿಸಿದೆ. ಭಾರತದ ಚರಿತ್ರೆಯನ್ನು ತಿರುಚಲಾಗಿದೆ ಎಂಬುದು ಲೇಖಕರ ಅಂಬೋಣ. ಮ್ಯಾಕ್ಸ್ ಮುಲ್ಲರ್ ಬಗ್ಗೆ ಒಂದು ಅಧ್ಯಾಯವಿದೆ. ಮ್ಯಾಕ್ಸ್ ಮುಲ್ಲರ್ ಅವರು ಬರೆದಿರುವ ಒಂದೆರಡು ಪತ್ರಗಳಿಂದ ಅವರ ಅಗಾಧ ಕಾರ್ಯವನ್ನು ಅಳೆಯಲಾಗಿದೆ! ಮ್ಯಾಕ್ಸ್ ಮುಲ್ಲರ್ ಮಾಡಿದ್ದು ಕೂಲಿ ಕೆಲಸವಂತೆ! ಇಷ್ಟು ಪುಟ ಅಚ್ಚಿಗೆ ಸಿದ್ಧಪಡಿಸಿದರೆ ಇಷ್ಟು ಸಂಭಾವನೆ ಎಂದು ನಿಗದಿಪಡಿಸಲಾಗಿತ್ತಂತೆ! ಬ್ರಿಟಿಷರು ವೇದ ಉಪನಿಷತ್ತುಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿಸಿದ್ದರ ಹಿಂದೆ ಅವುಗಳಲ್ಲಿರುವ ಹುಳುಕುಗಳನ್ನು ಬಯಲಿಗೆಳೆಯುವ ಉದ್ದೇಶವಿತ್ತಂತೆ! ಪುಸ್ತಕದ ತುಂಬ ಇಂಥ ಅಸಂಬದ್ಧಗಳೇ ತುಂಬಿದ್ದಂತೆ ಕಂಡಿತು. 

ಭಾಳ ಒಳ್ಳೇವ್ರು ನಮ್ ಮಿಸ್ಸು

ಭಾಳ ಒಳ್ಳೇವ್ರು ನಮ್ ಮಿಸ್ಸು
ಏನ್ ಹೇಳಿದ್ರೂ ಎಸ್ಸೆಸ್ಸು
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲ ಫೇಮಸ್ಸು

ಜಾಣಮರಿ ಅಂತಾರೆ
ಚಾಕ್ಲೇಟಿದ್ರೆ ಕೊಡ್ತಾರೆ
ಬೆನ್ನು ತಟ್ಟಿ ಕೆನ್ನೆ ಸವರಿ
ಬೆಣ್ಣೆ ಕಂದ ಅಂತಾರೆ!

ಆಟಕ್ ಬಾ ಅಂತಾರೆ
ಆಟದ್ ಸಾಮಾನ್ ಕೊಡ್ತಾರೆ,
ಗೊತ್ತಿಲ್ದಂಗೆ ಆಟದ್ ಜೊತೆ
ಪಾಠಾನೂ ಕಲಿಸ್ತಾರೆ!

ನಮ್ಜೊತೇನೇ ಆಡ್ತಾರೆ
ಕೈ ಕೈ ಹಿಡಿದು ಹಾಡ್ತಾರೆ,
ಕೋತಿ ಕರಡಿ ಕಥೆ ಹೇಳಿ
ಸಿಕ್ಕಾಪಟ್ಟೆ ನಗಿಸ್ತಾರೆ

ನಮ್ ಸ್ಕೂಲಂಥ ಸ್ಕೂಲಿಲ್ಲ
ನಮ್ ಮಿಸ್ಸಂಥ ಮಿಸ್ಸಿಲ್ಲ
ಅಮ್ಮನ್ ಹಾಗೇ ಅವ್ರೂನೂ
ಬಿಟ್ ಬರಕ್ಕೆ ಮನಸಿಲ್ಲ.

ಸಾಹಿತ್ಯ: ಎನ್. ಎಸ್. ಲಕ್ಸ್ಮೀನಾರಾಯಣ ಭಟ್ಟ

Monday, January 21, 2013

ಗುಡಿಯ ನೋಡಿರಣ್ಣಾ -ಸಂತ ಶಿಶುನಾಳ ಷರೀಫ್

ಗುಡಿಯ ನೋಡಿರಣ್ಣಾ ದೇಹದ 
ಗುಡಿಯ ನೋಡಿರಣ್ಣಾ 

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ

Saturday, January 19, 2013

ಸ್ತ್ರೀ - ಜಿ. ಎಸ್. ಶಿವರುದ್ರಪ್ಪ

ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -

ಹಸಿರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ -

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ -

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ?

Thursday, January 17, 2013

ಕೊರಗರು



'ಕೊರ್ರು'ಗಳು 'ಕೊರಗ'ರಾದ ಕಥೆ!

- ಏನಿದು 'ಕೊರ್ರು'..?! ಇದೊಂದು ಅವಿಭಜಿತ ಜಿಲ್ಲೆಯ ಪ್ರಾಚೀನ ಆದಿವಾಸಿ - ಬುಡಕಟ್ಟು ಪಂಗಡ. 'ಕೊರ' ಎಂದರೆ ಸೂರ್ಯ ಎಂಬರ್ಥವಿದೆ. ಕೊರ್ರು ಸಮುದಾಯದವರು ಸೂರ್ಯೋಪಾಸಕರೂ ಹೌದು. ಆದ್ದರಿಂದ ಈ ಸಮುದಾಯದವರನ್ನು 'ಸೂರ್ಯವಂಶಸ್ಥ'ರೆನ್ನುತ್ತಾರೆ. ಇತರ ಜನ ವರ್ಗದವರು ಈ ಆದಿವಾಸಿ ಪಂಗಡದ ಜನರನ್ನು ,ತುಳುವಿನಲ್ಲಿ 'ಕೊರ್ರು-ನಕುಲು' (ಕೊರ್ರುಗಳು ಎಂದು ಅರ್ಥ), 'ಕೊರ್ರುಗೆರ್' (ಕೊರ್ರುಗರು) ಎಂದು ಕರೆದು - ಕರೆದು, ಕಾಲಕ್ರಮೇಣ 'ಕೊರ್ರು' ಎಂಬುದು 'ಕೊರಗ' ಎಂದಾಯಿತು. ಇದು 'ಮಾತನಾಡುವ ಶೈಲಿ'ಯಿಂದಾಗಿ ಜನಾಂಗವೊಂದರ ಮೂಲ ಹೆಸರೇ ಬದಲಾದ ಕಥೆ!! 1907ರಲ್ಲಿ ಇಂಗ್ಲೇಡ್ ಮೂಲದ 'ಥರ್ಸಟನ್' ಎನ್ನುವ ಇತಿಹಾಸಕಾರ, ತನ್ನ 'Ethngraphic Notes in Southern India' ಅನ್ನೋ ಅಧ್ಯಾಯನ ವರದಿಯಲ್ಲಿ (ಭಾಗ-3 ಮತ್ತು 7ರಲ್ಲಿ) 'ಕೊರ್ರು ಸಮುದಾಯ'ವನ್ನು 'ಕೊರಗ ಸಮುದಾಯ'ವೆಂದು ಸ್ಪಷ್ಟಪಡಿಸಿ - ಅಂದಿನ, 'ಮದ್ರಾಸ್ ಸರಕಾರ'ಕ್ಕೆ ಸಲ್ಲಿಸಿದನು. ಅದು, 'ಕೊರ್ರು' ಸಮುದಾಯದ ಕುರಿತಾದ ಪ್ರಪ್ರಥಮ ಸಮಗ್ರ ಅಧ್ಯಯನ ವರದಿಯಾಗಿತ್ತು. ತದಾನಂತರ 'ಕೊರ್ರು' ಎಂಬುದು 'ಕೊರಗ' ಎಂದೇ ಎಲ್ಲಾ ಸರಕಾರಿ ದಾಖಲೆಗಳಲ್ಲೂ ನಮುದಾಯಿತು ಎಂದರೆ ಆಶ್ಚರ್ಯವಾದರೂ ಸತ್ಯ! ಈಗಲೂ ಕೊರಗ ಸಮುದಾಯದ ಹಿರಿಯ ಜೀವಿಗಳು ತಮ್ಮನ್ನು ತಾವು - ಕೊರ್ರು, ಕಾಡಿ (ಎಂದರೆ ಕಾಡಿನವರು; ಕಾಡಿನ ಜನರು) ಎಂದು ವಿನಮ್ರತೆಯಿಂದಲೇ ಒಪ್ಪಿಕೊಳ್ಳುತ್ತಾರೆ.

ಸಮಾಜದ 'ವಿಭಾಜಕ ದೃಷ್ಠಿ'ಯಿಂದಾಗಿ ಪ್ರತ್ಯೇಕಿಸಲ್ಪಟ್ಟ ಕೊರಗರು...
- ಕೊರಗರು ಮೂಲತಃ ಅರಣ್ಯವಾಸಿಗಳು. ಪೂರ್ವಕಾಲದಲ್ಲಿ ದಟ್ಟಾರಣ್ಯದಲ್ಲಿ ವಾಸಿಸುತ್ತಿದ್ದರು. ಕಾಡಿನಲ್ಲಿ ದೊರೆಯುವ ಬಿದಿರು, ಬಿಳಲುಗಳಿಂದ - ತಮ್ಮ ನೈಪುಣ್ಯತೆಯನ್ನು ಬಳಸಿ, ವಿವಿಧ ರೀತಿಯ ಪರಿಕರಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಬುಟ್ಟಿ ಹೆಣೆಯುವುದು, ಬೇಟೆಯಾಡುವುದು ಮತ್ತು ಅರಣ್ಯೊತ್ಪನ್ನಗಳನ್ನು ಸಂಗ್ರಹಿಸುವುದು ಕುಲ ಕಸುಬಾಗಿತ್ತು. ಸುಶ್ರಾವ್ಯವಾಗಿ ಡೋಲು ಬಾರಿಸುವುದು, ಕೊಳಲು ಊದುವುದು ಸಾಂಸ್ಕ್ರತಿಕ ಮತ್ತು ಮನೋರಂಜನಾತ್ಮಕ ಕಲೆಯಾಗಿತ್ತು. ತನ್ನದೇ ಆದ ಶ್ರೇಷ್ಠ ಸಂಪ್ರದಾಯ ಮತ್ತು ಜೀವನ ಕ್ರಮಗಳನ್ನು ಮೈಗೂಡಿಸಿಕೊಂಡಿದ್ದರು. ವಿಶಿಷ್ಟ 'ಕೊರ್ರು' (ಕೊರಗ) ಭಾಷೆ ಮತ್ತು ಕಾಡಿನ ಸಂಸ್ಕ್ರತಿಯಿಂದಾಗಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದ್ದರು. ಮೈಯನ್ನು ಪ್ರಾಣಿಗಳ ಚರ್ಮ ಮತ್ತು ಸೊಪ್ಪಿನಿಂದ ಮುಚ್ಚಿಕೊಳ್ಳುತ್ತಿದ್ದರು (ಆ ಕಾಲದಲ್ಲಿ ಕಾಡಿನಲ್ಲಿ ಕೊರಗರಿಗೆ ಮಾನ ಮುಚ್ಚಿಕೊಳ್ಳಲು ಅದೊಂದೇ ಆಧಾರವಾಗಿತ್ತು) ಕುಳ್ಳಗಿನ ಧೃಡಕಾಯ ದೇಹ, ಭೀತಿ ಹುಟ್ಟಿಸುವ ಮೈಯ ಕಪ್ಪು ಬಣ್ಣ, ಮೂಗು - ತುಟಿ - ಕಣ್ಣಿನ ವಿಭಿನ್ನ ಆಕೃತಿ ಮತ್ತು ಇತರ ಜನವರ್ಗದವರು ಅರ್ಥೈಸಿಕೊಳ್ಳಲಾಗದ ಕ್ಲಿಷ್ಟ ಭಾಷಾ ಭಿನ್ನತೆಯಿಂದಾಗಿ ಕೊರಗರನ್ನು ದೂರವೇ ಇರಿಸಲಾಗಿತ್ತು. ದೂರವೇ ಇದ್ದ ಕೊರಗರು ನಿಧಾನವಾಗಿ ತಮ್ಮ ವೇಷಭೂಷಣಗಳಿಂದಾಗಿ ಅಸ್ಪ್ರಷ್ಯರೇ ಆಗಿಬಿಟ್ಟರು. ವೇದಗಳ ಕಾಲದಿಂದಲೂ ಅಸ್ಪ್ರಶ್ಯರಾಗಿದ್ದವರ ಸಾಲಿಗೆ ಕೊರಗರನ್ನೂ ಸೇರಿಸಲಾಯಿತು ಹೀಗೆ ಸ್ಪರ್ಶ ವರ್ಣಗಳ ಅರಿವೇ ಇಲ್ಲದ ಪ್ರತ್ಯೇಕ ಬುಡಕಟ್ಟು ಪಂಗಡವೊಂದು ಸಮಾಜದ 'ವಿಭಾಜಕ ದೃಷ್ಟ'ಯಿಂದಾಗಿ ಅಸ್ಪ್ರಶ್ಯರಾಗಿಬಿಟ್ಟಿರು ಮತ್ತು ಸಮಾಜದ ಮೇಲಿನ ಭಯದಿಂದಾಗಿ ಮುಗ್ಧ ಕೊರಗರು ತಮ್ಮನ್ನು ತಾವು ಅಸ್ಪ್ರಶ್ಯರೆಂದು ಒಪ್ಪಿಕೊಂಡುಬಿಟ್ಟರು!

ಡೋಲಿನ ಸುಶ್ರಾವ್ಯಕ್ಕೆ ಮನ ಸೋತವರ ವ್ಯಭಿಚಾರ...
- ಕೊರಗರು ಬೇಟೆಯಾಡಿ ಬಂದ ನಂತರ, ಧಣಿವಾರಿಸಲು ಡೋಲು ಬಾರಿಸಿ, ಕೊಳಲು ಊದಿ ಮನಃ ಶಾಂತಿಯನ್ನು ಪಡೆಯುತ್ತಿದ್ದರು. ಕಾಡಿನಲ್ಲಿ ಕೊರಗರ ಅಬ್ಬರದ ಡೋಲಿನ ಧ್ವನಿಗೆ ಊರ ಅರಸರೂ (ತುಂಡರಸರು ಮತ್ತು ಪಟೇಲರು) ಮನಸೋತರು. ನಿಧಾನವಾಗಿ ಕೊರಗರ ಡೋಲಿನ ಧ್ವನಿ ಕಾಡಿನ ಬದಲು ಪಟೇಲರ ಕಟ್ಟಅಪ್ಪಣೆಯ ಮೇರೆಗೆ ಗುತ್ತಿನ ಮನೆಯ ಹಿತ್ತಲ ಬದಿಯಲ್ಲಿ ಕೇಳಿ ಬರತೊಡಗಿತು. ಊರ ಹಬ್ಬ ಹರಿದಿನಗಳಲ್ಲಿ, ಊರಿನಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೊರಗರಿಗೆ ಡೋಲು ಬಾರಿಸಲು ಅನುವು ಮಾಡಿಕೊಡಲಾಯಿತು. ಗುತ್ತುಬರ್ಕೆಯವರ ಕಂಬಳವೂ ಕೊರಗರ ಡೋಲು ಬಡಿತದಿಂದಲೇ ಆರಂಭವಾಗತೊಡಗಿತು. ತಲೆತಲಾಂತರಗಳಿಂದ ಕೃಷಿಕರು ಬೀಜ ಬಿತ್ತುವುದಕ್ಕೂ ಕೊರಗರ ಡೋಲಿನ ಶಬ್ಧದಿಂದಲೇ ಚಾಲನೆ ನೀಡಲು ಆರಂಭಿಸಿದರು. ಅದರಿಂದ ದೊರೆತ ಬಿಟ್ಟಿ ಸಂಬಳವೂ ಕೊರಗರಿಗೆ ವ್ಯವಹಾರದ ಅರಿವಿಲ್ಲದ್ದರಿಂದ ಅಪ್ಯಾಯಮಾನವಾಗತೊಡಗಿತು. ಸಂಖ್ಯಾಬಲದ ಕೊರತೆಯಿಂದ ಕೊರಗರು ಪ್ರತಿರೋಧ ತೋರುವುದನ್ನು ಯಾವತ್ತು ಬಿಟ್ಟರೋ, ಅದಾಗಲೇ ಬಲಿಷ್ಠರ ಅಡಿಯಾಳಾಗಬೇಕಾಯಿತು ಮತ್ತು ಕೊರಗರ 'ಮುಗ್ಧತೆಯನ್ನು ದೌರ್ಬಲ್ಯ'ವೆಂಬಂತೆ ಬಲಿಪಶುಗೊಳ್ಳಲಾಯಿತು. ಅವರನ್ನು ಜೀತಕ್ಕೆ ನೇಮಿಸಿಕೊಳ್ಳಲಾಯಿತು. ಅದನ್ನು ಪ್ರಾದೇಶಿಕವಾಗಿ 'ಅಜಲು ಚಾಕರಿ' ಎನ್ನುತ್ತಾರೆ ವಿಶಾಲಾರ್ಥದಲ್ಲಿ ಹೇಳುವುದಾದರೆ, 'ಊಳಿಗಮಾನ್ಯ ಪದ್ಧತಿ' ಎನ್ನಬಹುದು.

ಅಂಡೆ, ಕುಂಟು, ಸೊಪ್ಪು ಎಂಬ ವಿಂಗಡನೆ...
- ಅಸ್ಪ್ರಶ್ಯತೆ ತಾರತಮ್ಯದ ಪಿಡುಗಿಗೆ ಅಂಟಿಕೊಂಡ ಕೊರಗ ಸಮುದಾಯವು ಅಕ್ಷರ ಕಲಿಯುವಂತಿರಲಿಲ್ಲ. ದೇವಸ್ಥಾನಗಳಿಗೆ ಪ್ರವೇಶಿಸುವುದನ್ನು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮತ್ತು ಕಾಡಿನಿಂದ ಊರಿಗೆ ಬಂದಾಗ ಉಗುಳುವುದನ್ನೂ ನಿಷೇಧಿಸಲಾಗಿತ್ತು!! ಹೀಗಾಗಿ, ಕೊರಗರು ಕಾಡಿನಿಂದ ಊರಿಗೆ ಬಂದಾಗ ಎಂಜಲು ಉಗುಳಲು ತಮ್ಮ ಸೊಂಟಕ್ಕೆ ಬಿದಿರಿನ ಬೊಂಬನ್ನು (ತುಳುವಿನಲ್ಲಿ ಅಂಡೆ ಎನ್ನುತ್ತಾರೆ) ಕಟ್ಟಕೊಳ್ಳುತ್ತಿದ್ದರು. ಇದಕ್ಕೆ ಇವರನ್ನು ಊರಿನ ಇತರ ಜನವರ್ಗದವರು 'ಅಂಡೆ ಕೊರಗರು' ಎಂದು ಕರೆದರು.
ಕಾಡಿನಿಂದ ಊರಿಗೆ ಬಂದು ಅಜಲು ಸೇವೆ ಮಾಡುತ್ತಿದ್ದ ಕೊರಗರಿಗೆ ಸೊಪ್ಪಿನ ಬದಲು ಮಾನ ಮುಚ್ಚಿಕೊಳ್ಳಲು ಊರಿನವರು ಬಟ್ಟೆಯನ್ನು ಕೊಡುತ್ತಿದ್ದರು. ಹೀಗೆ ಬಟ್ಟೆ ತೊಟ್ಟುಕೊಂಡ ಕೊರಗರನ್ನು ಊರಿನ ಇತರ ಜನವರ್ಗದವರು 'ಕುಂಟು ಕೊರಗರು' ಎಂದು ಕರೆದರು (ಕುಂಟು ತುಳು ಪದ; ಬಟ್ಟೆ ಎಂದರ್ಥ). ಕಾಡಿನಲ್ಲಿಯೇ ಇದ್ದು ತನ್ನ ಕೆಲಸವನ್ನು ನಿರ್ವಹಿಸಿಕೊಂಡು, ಬರೇ ಸೊಪ್ಪು ಅಥವಾ ಪ್ರಾಣಿಗಳ ಚರ್ಮವನ್ನು ಸುತ್ತಿ ಬದುಕುತ್ತಿದ್ದವರು 'ಸೊಪ್ಪು ಕೊರಗರು' ಎಂದು ಕರೆಯಲ್ಪಟ್ಟರು. ಕೊರಗರನ್ನು 'ಅಂಡೆ, ಕುಂಟು, ಸೊಪ್ಪು' ಎಂದು ಗುರುತಿಸಿ ಕರೆದದ್ದು ಇತರ ಜನ ವರ್ಗದವರೇ ಹೊರತು, ಸ್ವತಃ ಕೊರಗರಲ್ಲ! ಸಮಾನತೆ ಬಯಸುತ್ತಿದ್ದ ಕೊರಗರು ತಮ್ಮನ್ನು ತಾವು ಈ ರೀತಿ ಎಂದೂ ಗುರುತಿಸಿದ್ದಿಲ್ಲ ಮತ್ತು ಪ್ರತ್ಯೇಕ ಪಂಗಡಗಳನ್ನ ಕಟ್ಟಿಕೊಂಡವರೇ ಅಲ್ಲ. ಇದು ಕೂಡಾ ಸಮಾಜದ ವಿಭಾಜಕ ದೃಷ್ಠಿಯಿಂದಾಗಿ ಉಂಟಾದ ಗೊಂದಲ! ದುರಾದೃಷ್ಟವಶಾತ್, ಎಲ್ಲಾ ಇತಿಹಾಸಕಾರರು, ಸಂಶೋಧಕರು, ಚಿಂತಕರು ಮತ್ತು ಬರಹಗಾರರೂ - ನೈಜತೆಯನ್ನು ವಿಮರ್ಶಿಸದೆ ಕೊರಗರಲ್ಲಿ ಮೂರು ಒಳಪಂಗಡಗಳು ಇದ್ದವೆಂದು, ಹಾಗೆಯೇ ಬರೆದುಬಿಟ್ಟಿದ್ದಾರೆ!

- ಜಿ. ಭವಾನಿ ಶಂಕರ ಕೊರಗ, ಬೆಳುವಾಯಿ

Tuesday, January 15, 2013

ಹೊಲದ ಹುಡುಗಿ

ಹೊಲದೊಳಗೊಬ್ಬಳೆ ಹಳದಿಯ ಪಯಿರನು
ಕೊಯ್ಯುವ ಬಾಲೆಯ ನೋಡಲ್ಲಿ.
ತನ್ನೊಳು ತಾನೇ ಹಾಡುತ ನಲಿವಳು
ಮೆಲ್ಲಡಿಯಿಡು,ಬಾ,ನಿಲ್ಲಿಲ್ಲಿ.

ಒಬ್ಬಳೆ ಕೊಯ್ವಳು ಹೊರೆಯನು ಮಾಡಿ
ಎದೆಯನು ಸೆಳೆಯುವ ಹಾಡನು ಹಾಡಿ;
ಆಲಿಸು! ಸದ್ದಿಲಿ ಕಣಿವೆಯ ಪೆಂಪು
ಹೆಚ್ಚಲು ಹರಿವುದು ಗಾನದ ಇಂಪು.

-ಕುವೆಂಪು

ಪಯಣಿಸುವ ವೇಳೆಯಲಿ - ಕೆ. ಎಸ್. ನರಸಿಂಹಸ್ವಾಮಿ

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು

ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ
ವೇಣಿಯಿರಲು ವಸಂತ ಪುಷ್ಪವನದಂತೆ
ಮನಸು ಬಾರದು ನನಗೆ ಅಡಿಯನಿಡೆ ಮುಂದೆ

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ
ದಾರಿಯಲೆ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋದುದು ಬಂಡಿ ಎಂದು ಹೇಳಿದನು

ಹಿಂದಿರುಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೆ ಎಂದಳೆನ್ನ ಹೊಸ ಹುಡುಗಿ

ಶಾಂತಕವಿ

ಆಧುನಿಕ ಕನ್ನಡದ ಪ್ರಥಮ ನಾಟಕಕಾರ, ಕೀರ್ತನಕಾರರೆಂದು ಮಾನ್ಯರಾದ ಶಾಂತಕವಿಗಳ ನಿಜನಾಮ ಸಕ್ಕರಿ ಬಾಳಾಚಾರ್ಯ. ಅವರು ಹುಟ್ಟಿದ್ದು ಜನವರಿ 15, 1856ರಂದು ಧಾರವಾಡ ಜಿಲ್ಲೆಯ ಸಾತೇನಹಳ್ಳಿಯಲ್ಲಿ. ಅಂದಿನ ಸಂಸ್ಕೃತದ ಓದಿಗೆ ಅವರು ಹೆಚ್ಚು ಗಮನ ಕೊಡಲಿಲ್ಲ. ಅದೇ ಹಾಡು, ಕುಣಿತ ಅಂದ್ರೆ ಎಲ್ಲಿ ಅಂದ್ರೆ ಅಲ್ಲಿ ಹಾಜರು. ಹಾಡಿನ ರಚನೆಗೂ ಕೈ ಹಾಕಿದರು. ತಮ್ಮ ಮನೆತನದ ದೇವರು ಶಾಂತೇಶ ಎಂಬುದನ್ನೇ ಕಾವ್ಯನಾಮ ಮಾಡಿಕೊಂಡು ಶಾಂತಕವಿ ಆದರು. ಹಾಗೆಯೇ ನಾಟಕರಚನೆಯ ಗೀಳು ಹತ್ತಿತು. 

1870ರ ಸುಮಾರಿನಲ್ಲಿ ಶಾಂತಕವಿಗಳ ಜೀವನದ ಆರಂಭದ ಕಾಲದಲ್ಲಿ ಕನ್ನಡವನ್ನು ಕೇಳುವವರೇ ಇಲ್ಲ. ಮರಾಠಿ ನಾಟಕಗಳು ಜನಪ್ರಿಯವಾಗಿ ನಾಟಕ ನೋಡಲಿಕ್ಕಾಗಿಯೇ ಜನ ಮರಾಠಿ ಕಲಿಯುವಂತಹ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಕನ್ನಡ ರಂಗಭೂಮಿಯ ಜಾಗೃತಿಯನ್ನು ಕುರಿತು ಶಾಂತಕವಿಗಳು ಗಂಭೀರವಾಗಿ ಚಿಂತಿಸತೊಡಗಿದರು. ಆಗಿನ ಕೃತುಪುರವೆನಿಸಿದ್ದ ಗದಗದಲ್ಲಿ ಕನ್ನಡ ಉದ್ಧಾರಕ್ಕಾಗಿ ಕನ್ನಡ ನಾಟಕದ ಏಳ್ಗೆಗಾಗಿ ಕರ್ನಾಟಕ ಕಂಪನಿಯನ್ನು ಕಟ್ಟುವ, ಕನ್ನಡ ನಾಟಕಗಳನ್ನು ಬರೆದುಕೊಡುವ ನಾಟಕವನ್ನು ಕಲಿಸಿಕೊಡುವ ಕೆಲಸ ಇವರಿಂದ ಆರಂಭವಾಯಿತು. ಈ ನಿಟ್ಟಿನಲ್ಲಿ ಅವರು ರಚಿಸಿದ ಮೊದಲ ನಾಟಕ ‘ಉಷಾಹರಣ’. ಈ ಕಾರಣಕ್ಕಾಗಿ ಇಂದಿಗೂ ಶಾಂತಕವಿಗಳು ಕರ್ನಾಟಕ ನಾಟಕದ ಪ್ರಥಮ ಗುರುವೆಂದು ಗೌರವಿಸಲ್ಪಡುತ್ತಾರೆ.

ವೃತ್ತಿಯಿಂದ ಶಾಂತಕವಿಗಳು ಅಧ್ಯಾಪಕರಾದರು. ಇಂಗ್ಲಿಷ್ ಕಲಿಯದ ಕಾರಣ ಕನ್ನಡ ಶಾಲೆಯ ಅಧ್ಯಾಪಕರಾಗಿ ಉಳಿದರು. ಇವರ ನಾಟಕದ ಕುರಿತ ಆಸಕ್ತಿಯನ್ನು ನೋಡಿ ಒಬ್ಬ ಮರಾಠಿ ಅಧಿಕಾರಿ ಇವರನ್ನು ಗದಗಿನಿಂದ ಹೊಂಬಳಕ್ಕೆ ವರ್ಗ ಮಾಡಿದರು. ಆದರೇನು ಶಾಲೆಯ ಕೆಲಸ ಮುಗಿದ ನಂತರ ಒಂಬತ್ತು ಮೈಲಿ ದೂರದ ಗದಗಿಗೆ ಎಮ್ಮೆಯ ಮೇಲೆ ಕುಳಿತು ಹೋಗಿ ನಟರನ್ನು ತರಬೇತು ಮಾಡುತ್ತಿದ್ದರಂತೆ. ಇವರ ಈ ಉತ್ಸಾಹ ಆಸಕ್ತಿಗಳು ಕನ್ನಡ ರಂಗಭೂಮಿಗೆ ಭದ್ರವಾದ ಅಡಿಪಾಯವನ್ನು ಹಾಕಿದವು.

ಅವರ ಮೊದಲನಾಟಕ ‘ಉಷಾಹರಣ’ ಸಂಗೀತನಾಟಕ. ಪ್ರದರ್ಶನಗೊಂಡ ಪ್ರಥಮ ಕನ್ನಡ ನಾಟಕ. ಇದನ್ನು ನೋಡಿ ಎಲ್ಲರೂ ಮೆಚ್ಚುವವರೇ. ಹೀಗಾಗಿ ನಾಟಕ ಬರೆದುಕೊಡಿ ಎಂದು ಹಲವಾರು ಜನ ದುಂಬಾಲುಬಿದ್ದರು. ಅದರ ಫಲ ಒಂದಾದಮೇಲೊಂದು ಪೌರಾಣಿಕ ನಾಟಕಗಳನ್ನು ರಚಿಸಿದರು. ಸಾಮಾನ್ಯ ಜನತೆಗಾಗಿ ತಮ್ಮ ಕಾವ್ಯ ನಾಟಕಗಳ ರಚನೆಯಾಗಬೇಕೆಂದು ಶಾಂತಕವಿಗಳ ಪ್ರಧಾನ ಗುರಿಯಾಗಿತ್ತು. “ಕನ್ನಡದಲ್ಲಿ ಗ್ರಂಥಗಳು ಹೆಚ್ಚಾಗಬೇಕು, ಅನ್ಯ ಭಾಷೆಗಳಲ್ಲಿ ಇದ್ದ ಉತ್ತಮ ಕೃತಿಗಳನ್ನು ಕನ್ನಡಕ್ಕೆ ತರಬೇಕು. ಎಲ್ಲೆಲ್ಲಿಯೂ ಕನ್ನಡದ ಪ್ರಚಾರವಾಗಬೇಕು” ಎಂಬುದು ಶಾಂತಕವಿಗಳ ನರನಾಡಿಗಳಲ್ಲಿ ಸೇರಿಹೊಗಿದ್ದಿತೆಂದು ಡಾ. ಶ್ರೀನಿವಾಸ ಹಾವನೂರರು ಅಭಿಪ್ರಾಯಪಡುತ್ತಾರೆ. ಕರ್ನಾಟಕ ನಾಟಕ ಕಂಪನಿಯವರಿಗಾಗಿ ಶಾಂತಕವಿಗಳು ಬರೆದ ಕೆಲವು ನಾಟಕಗಳನ್ನು ಹೆಸರಿಸಬಹುದು. ‘ಸೀತಾರಣ್ಯ ಪ್ರವೇಶ’, ‘ಸಿರಿಯಾಳ ಸತ್ವ ಪರೀಕ್ಷೆ’, ‘ಸುಂದೋಪಸುಂದ ವಧೆ’, ‘ವತ್ಸಲಾಹರಣ’, ‘ಕೀಚವಧ’, ‘ಸುಧನ್ವ ವಧೆ’, ‘ಪಾರ್ವತಿ ಪರಿಣಯ’, ‘ಮೇಘದೂತ’, ‘ಶಕುಂತಲೋತ್ಪತ್ತಿ’, ‘ಚಂದ್ರಾವಳಿ ಚರಿತ್ರೆ’ ಇವು ಮುಖ್ಯವಾದವು.

ಜನರಲ್ಲಿ ನಾಟಕ ಕಲೆಯ ಬಗೆಗೆ ಹೊಸ ಅಭಿರುಚಿ ಹುಟ್ಟಿಸುವುದರಲ್ಲಿ ಶಾಂತಕವಿಗಳ ಪಾತ್ರ ಪ್ರಮುಖವಾದುದು. ಶಾಂತಕವಿಗಳ ನಾಟಕಗಳನ್ನು ಆಡಲೆಂದೇ ಕನ್ನಡನಾಡಿನ ಅನೇಕ ಕಡೆಗಳಲ್ಲಿ ನಾಟಕ ಕಂಪನಿಗಳು ಹುಟ್ಟಿಕೊಂಡವೆಂಬುದರಿಂದಲೇ ಇವರ ನಾಟಕಗಳ ಜನಪ್ರಿಯತೆಯ ಅರಿವಾಗುತ್ತದೆ. ಹೀಗೆ ಅವರ ನಾಟಕ ಪತಾಕೆಯು ಊರೂರಲ್ಲಿ ಮೆರೆದು ಹಾರಲಾರಂಭಿಸಿತು. ಇದಕ್ಕೆ ಕಾರಣರಾದ ಕೇವಲ ಇಪ್ಪತೈದು ವರ್ಷದವರಾದ ಶಾಂತಕವಿಗಳನ್ನು ಸನ್ಮಾನಿಸಲು 1881ರಲ್ಲಿ ಬೆಳಗಾವಿ, ಧಾರವಾಡ ಮೊದಲಾದೆಡೆಗಳಲ್ಲಿ ಸಾರ್ವಜನಿಕ ಸತ್ಕಾರ ಸಭೆಗಳು ನಡೆದುವು. ಜನತೆಯಿಂದ ಕನ್ನಡ ನಾಟಕಕಾರರೊಬ್ಬರಿಗೆ ಸಂದ ಈ ಗೌರವ ಪುರಸ್ಕಾರಗಳು ಕನ್ನಡಿಗರ ಅಭಿಮಾನದ ಪೂರಕವಾಗಿವೆ.

ಶಾಂತಕವಿಗಳ ಪ್ರಕಟಿತ ನಾಟಕಗಳನ್ನು ಅವಲೋಕಿಸುವುದರಿಂದ ಅವರ ನಾಟಕಗಳ ಸ್ವರೂಪವನ್ನು ಬಹುಮಟ್ಟಿಗೆ ಅರ್ಥಮಾಡಿಕೊಳ್ಳಬಹುದು. “ಶ್ರೀಮಾನ್ ಶಾಂತಕವಿಗಳ ನಾಟಕಗಳೆಂದರೆ ಸಾಮಾನ್ಯವಾಗಿ ಬಯಲಾಟಗಳಿಗೂ ಮಧ್ಯಸ್ಥವಾಗಿರುವ ರೂಪಗಳೆಂದು ಹೇಳಬಹುದು” ಎಂದು ತ.ಸು. ಶಾಮರಾಯರು ಅಭಿಪ್ರಾಯಪಡುತ್ತಾರೆ. ಚೆಲುವು ರೂಪುಗಳಿದ್ದ, ಚೆಂದಬೇಸಗಳಿದ್ದ, ಲಲಿತಭಾಷಣವಿದ್ದ, ತಿಳಿಗಾನವಿದ್ದ, ಭಕ್ತರ ಕಥೆ, ಹರಿಹರಾದಿ ದೇವತೆಗಳ ಲೀಲೆ ಇದ್ದ ಅವರ ನಾಟಕಗಳು ಜನರಿಗೆ ಹಿಡಿಸಿದವು. ಕನ್ನಡ ಭಾಷೆಯಲ್ಲಿ ಆಡುತಿದ್ದ ಅವರ ನಾಟಕಗಳು ಬೇಗ ಜನತೆಯ ಮನವನ್ನು ಸೂರೆಗೊಂಡು ಪ್ರಸಿದ್ಧವಾದವು.

ಅಂದಿನ ಪೌರಾಣಿಕ ನಾಟಕಕಾರರನ್ನು ಗಮನಿಸಿದಾಗ ಶಾಂತಕವಿಗಳ ಕೊಡುಗೆಯು ಮಹತ್ವಪೂರ್ಣವಾದದ್ದೆಂಬ ಅರಿವು ಯಾರಿಗಾದರೂ ಆಗದಿರದು. ಸಮಗ್ರ ಕರ್ನಾಟಕದ ಸ್ವತಂತ್ರ ನಾಟಕಕಾರರಲ್ಲಿ ಶಾಂತಕವಿಗಳೇ ಮೊದಲಿಗರು. ಅನುವಾದದ ಕಡೆ ಗಮನಹರಿಸದೆ ಪೌರಾಣಿಕ ಕಥಾವಸ್ತುಗಳಿಂದ ಸ್ವಂತವಾಗಿ ನಾಟಕಗಳನ್ನು ರಚಿಸಿ ಕಳೆದ ಶತಮಾನದಲ್ಲಿ ಹಿರಿಯ ಸಾಧನೆಯನ್ನು ಮಾಡಿದ ಕೀರ್ತಿ ಶಾಂತಕವಿಗಳದು. ನವರಸಗಳಿಂದ ಕೂಡಿದ ಅವರ ನಾಟಕಗಳಲ್ಲಿ ಶೃಂಗಾರಕ್ಕೆ ವಿಶೇಷ ಪ್ರಾಧಾನ್ಯತೆಯಿತ್ತು. ಅದರೊಂದಿಗೆ ಭಕ್ತಿ ಹಾಗೂ ಸದಾಚಾರ ಬೋಧನೆಗಳಿಗೂ ಅವಕಾಶ ದೊರೆತಿತ್ತು.

1886ರಲ್ಲಿ ಅಗಡಿಗೆ ವರ್ಗವಾಗಿ ಬಂದ ಶಾಂತಕವಿಗಳು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ಅಗಡಿಯಲ್ಲಿ ಅಗಡಿಯ ಶೇಷಾಚಲ ಸಾಧುಗಳು, ಅಗಡಿಯ ದೇಸಾಯಿ, ಶಿಶುನಾಳ ಶರೀಫ್ ಸಾಹೇಬ ಮತ್ತು ಮೂಡಲಪಾಯದ ಹೆಸರಾಂತ ಶರಣಪ್ಪ ಇವರ ಸಂಪರ್ಕ, ಸಾನ್ನಿಧ್ಯಗಳು ಶಾಂತಕವಿಗಳಲ್ಲಿ ಪರಿಪಕ್ವತೆಯನ್ನು ತಂದುಕೊಡಲು ನೆರವಾದವು. ಮೊದಮೊದಲು ಅನುವಾದದ ಕಡೆ ಅಷ್ಟಾಗಿ ಗಮನ ಕೊಡದಿದ್ದ ಶಾಂತಕವಿಗಳು ಅಗಡಿಯಲ್ಲಿದ್ದಾಗ ‘ಮೇಘದೂತ’, ‘ವಿರಹತರಂಗ’, ಮೊದಲಾದ ಸಂಸ್ಕೃತದಿಂದ ಅನುವಾದ ಕೃತಿಗಳನ್ನು ರಚಿಸಿದರು. ಸಂಸ್ಕೃತದ ಈ ಕಾವ್ಯಗಳನ್ನು ಮೊಟ್ಟಮೊದಲಿಗೆ ಮೆಚ್ಚಿದ ಕನ್ನಡದ ಕವಿಯೆಂದರೆ ಶಾಂತಕವಿಗಳೆಂಬುದು ಗಮನಾರ್ಹ ಸಂಗತಿ. ಶಾಂತಕವಿಗಳು ಅಗಡಿಯನ್ನು ಬಿಡುವಾಗ ಅದ್ಧೂರಿಯಾದ ಬೀಳ್ಕೊಡುಗೆ ಸಮಾರಂಭ ನಡೆದು ರಸಿಕರಾದ ಕನ್ನಡಿಗರಿಂದ ಒಂದು ಮನೆ ಹಾಗೂ ಜಮೀನುಗಳು ಅವರಿಗೆ ದತ್ತಿಯಾಗಿ ದೊರೆಯಿತೆಂದು ತಿಳಿದುಬರುತ್ತದೆ.

ಜೀವನದಲ್ಲಿ ಬಡತನದಲ್ಲಿದ್ದ ಇವರ ಕಷ್ಟಗಳನ್ನು ಅರಿತು ಬೋಧರಾಯಾಚಾರ್ಯ ಸವಣೂರ, ಭಿಷ್ಟೋ ಪದಕಿ, ಬಾಳಾಜಿ ಅಣ್ಣಿಗೇರಿಕಾರ ಮೊದಲಾದವರು ಶಾಂತಕವಿಗಳ ಕೃತಿಗಳ ಮುದ್ರಣ ಮತ್ತು ಮಾರಾಟಗಳ ಕೆಲಸವನ್ನು ತೆಗೆದುಕೊಂಡು ಶಾಂತಕವಿಗಳ ಕಷ್ಟದ ದಿನಗಳಲ್ಲಿ ನೆರವಾದರು.

ಇಳಿಯ ವಯಸ್ಸಿನಲ್ಲೂ ಶಾಂತಕವಿಗಳ ಕವನ ಸ್ಫೂರ್ತಿಯು ಮರಳಿ ಚಿಮ್ಮಲು ‘ಕರ್ನಾಟಕ ಗತವೈಭವ’ದ ಪ್ರಕಟಣೆಗೆ ಪ್ರಧಾನ ಕಾರಣವಾಯಿತು. ಜನಜಾಗೃತಿಯುಂಟುಮಾಡಲು ‘ವಿದ್ಯಾರಣ್ಯ ವಿಜಯ’ವನ್ನು ಊರೂರಲ್ಲಿ ಕೀರ್ತನೆ ಮಾಡಿದರೆಂದು ಕನ್ನಡದ ಪಿತಾಮಹರೆನಿಸಿದ ಆಲೂರು ವೆಂಕಟರಾಯರೇ ತಿಳಿಸಿದ್ದಾರೆ.

ಶಾಂತಕವಿಗಳ ‘ರಕ್ಷಿಸು ಕರ್ನಾಟಕದೇವಿ’ ಎಂಬ ಹಾಡಂತೂ ಮುಂಬಯಿ ಕರ್ನಾಟಕದಲ್ಲಿ ಬಹಳ ವರ್ಷಗಳು ನಾಡಗೀತೆಯಾಗಿತ್ತೆಂದು ತಿಳಿದುಬರುತ್ತದೆ. ಇದಲ್ಲದೆ ಶಾಂತಕವಿಗಳು ಹಲವಾರು ಕನ್ನಡ ಗೀತೆಗಳನ್ನೂ, ಲಾವಣಿಗಳನ್ನೂ ರಚಿಸಿದ್ದರು. ಕಾವ್ಯ ನಾಟಕಗಳಲ್ಲದೆ ಶಾಂತಕವಿಗಳು ‘ಕಾಲಮಹಿಮೆ’, ‘ದಾಸಪ್ಪನಾಯಕನ ಫಾರ್ಸು’, ‘ಕಾಳಾಸುರ’ ಮುಂತಾದ ಹಾಸ್ಯ ಪ್ರಬಂಧಗಳನ್ನು ಕೂಡ ರಚಿಸಿದ್ದಾರೆ.

ಕನ್ನಡಕ್ಕಾಗಿ ಇಳಿಯ ವಯಸ್ಸಿನಲ್ಲೂ ಸಾಕಷ್ಟು ಶ್ರಮಿಸಿದ ಶಾಂತಕವಿಗಳು ತಮ್ಮ ಕೆಲಸ ಫಲಪ್ರದವಾದುದನ್ನು ಕಂಡು ಸಂತೋಷಿಸಿದರು. ಅದನ್ನು ಶಾಂತಕವಿಗಳೇ ಈ ರೀತಿ ಹೇಳಿಕೊಂಡಿದ್ದಾರೆ. “ಈ ಕಾಲವಂ ನೋಡಬಯಬಯಸಿ ಮುದುಕನಾದೆನ್ನ ಸಂಪ್ರಾರ್ಥನೆಗೆ ಪರಮಾತ್ಮನಿಂದೊಲಿದ” ಎಂದು ಸಂತೃಪ್ತಿಯಿಂದಲೇ ‘ಧರೆಯೊಳುದಯಿಸಿದ ಕಾರ್ಯ ಸಫಲವಾಯಿತು’ ಎಂಬ ಧನ್ಯತಾಭಾವದಿಂದಲೇ 1920ರಲ್ಲಿ ಈ ಲೋಕದಿಂದ ದೂರವಾದರು.

ಆಧಾರ: ಸಾಲು ದೀಪಗಳು ಕೃತಿಯಲ್ಲಿ ವಿ. ಗುಂಡಣ್ಣ ಅವರ ಲೇಖನವನ್ನು ಆಧರಿಸಿದೆ.

Monday, January 14, 2013

ಸಗ್ಗದ ಸಿರಿ ಬಂತು -ಕೆ. ಎಸ್. ನಿಸಾರ್ ಅಹಮದ್


ಸಗ್ಗದ ಸಿರಿ ಬಂತೊ ನಮ್ಮೂರಿಗೆ
ಸುಗ್ಗಿಯ ಸೊಬಗಿಂದ ನಮ್ಮೂರಿಗೆ

ಎತ್ತೆತ್ತಲು ತೆನೆ ಚೆಲ್ಲಿ ಹಾಲ
ಚಿಲಿಪಿಲಿ ಹರಿಸಿತು ಹಕ್ಕಿಯ ಮೇಳ;
ಕಣ ಕಣದಲ್ಲಿ ಬಂಗಾರ ಜಾಲ-
ಬೆರಗಾಗಿ ನಿಂತಿತೊ ಚಲಿಸದೆ ಕಾಲ.
ಸಗ್ಗದ ಸಿರಿ...

ಅರಸಿನ ಕುಂಕುಮ ಮೈಗೆಲ್ಲ ಮೆತ್ತಿ
ಹಸುರುಟ್ಟ ನೆಲದವ್ವ ಮದುವಣಗಿತ್ತಿ
ತೊಟ್ಟಿರೆ ಜರತಾರಿ ಮರಗಳ ನೆತ್ತಿ –
ದಿಬ್ಬಣ ಹೊರಟವೋ ಪಾತರಗಿತ್ತಿ
ಸಗ್ಗದ ಸಿರಿ...

ಕೊಟ್ಟಿಗೆ ತುಂಬ ಕರುಗಳ ಅಂಬಾ
ಆಕಳ ಕೆಚ್ಚಲು ಅಮೃತದ ಕುಂಭ!
ಹಟ್ಟಿಯ ಬೆಳಗಿದೆ ತುಂಬಿದ ಚೀಲ-
ತೀರಿತೊ ದೇವರೇ, ಬಡವರ ಸಾಲ.
ಸಗ್ಗದ ಸಿರಿ

ಚಾವಡಿ ಮುಂದಿಗೆ ಚಪ್ಪರವೆದ್ದು
ಸೇರಿತೊ ಊರೆಲ್ಲ – ಗುಜುಗುಜು ಸದ್ದು;
ಬೆಳುದಿಂಗಳಿರುಳಲ್ಲಿ ಬಯಲಾಟವಿದ್ದು –
ಗೌಡರೆ ನೋಡಲು ಬಂದರು ಖುದ್ದು.
ಸಗ್ಗದ ಸಿರಿ...

ಹೂ ಕಾಯಿ ನೀಡುವೆವು ದೀಪವನುರಿಸಿ
ಬಾರಮ್ಮ ಮಾರಮ್ಮ, ಬಾ ಗೌರಿಯರಸಿ;
ಊರಾಚೆ ಹನುಮ, ಬಾ ನಮ್ಮ ಹರಿಸಿ –
ಶರಣು ಶರಣೆಂಬೆವು ತುಂಗೆಗೆ ನಮಿಸಿ.
ಸಗ್ಗದ ಸಿರಿ...

Sunday, January 13, 2013

ಉದಯರಾಗ

ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು;
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.

ಬೆಳಕಿನ ಕಣ್ಣುಗಳಿಂದಾ ಸೂರ್ಯನು; ನೋಡುವನು, ಬಿಸಿಲೂಡುವನು;
ಚಿಳಿಪಿಳಿಹಾಡನು ಹಾಡಿಸಿ ಹಕ್ಕಿಯ, ಗೂಡಿನ ಹೊರ ಹೊರ ದೂಡುವನು.

ಬಂಗಾರದ ಚೆಲು ಬಿಸಿಲ ಕಿರೀಟದ; ಶ್ರಂಗಾರದ ತಲೆ ಎತ್ತುವನು;
ತೆಂಗಿನ ಕಂಗಿನ ತಾಳೆಯ ಬಾಳೆಯ, ಅಂಗಕೆ ರಂಗನು ಮೆತ್ತುವನು.

ಮಾಡಿನ ಹುಲ್ಲಲಿ ಚಿನ್ನದ ಗೆರೆಯನು; ಎಳೆಯುವನು ರವಿ ಎಳೆಯುವನು;
ಕೂಡಲೆ ಕೋಣೆಯ ಕತ್ತಲೆ ಕೊಳೆಯನು, ತೊಳೆಯುವನು ರವಿ ಹೊಳೆಯುವನು.

ಮಲಗಿದ ಕೂಸಿನ ನಿದ್ದೆಯ ಕಸವನು; ಗುಡಿಸುವನು ಕಣ್ ಬಿಡಿಸುವನು;
ಹುಲುಗಿಡ ಹೂವಿಗೆ ಪರಿಪರಿ ಬಣ್ಣವ ಉಡಿಸುವನು ಹನಿ ತೊಡಿಸುವನು.

ಏರುವನು ರವಿ ಏರುವನು; ಬಾನೊಳು ಸಣ್ಣಗೆ ತೋರುವನು;
“ಏರಿದವರು ಚಿಕ್ಕವನಿರಬೇಕೆಲೆ” ಎಂಬಾ ಮಾತನು ಸಾರುವನು.

ಸಾಹಿತ್ಯ: ಪಂಜೆ ಮಂಗೇಶರಾಯರು

Saturday, January 12, 2013

ಸ್ವಾಮಿ ವಿವೇಕಾನಂದರ ನುಡಿಗಳು


  1. ಏಳಿ, ಎಚ್ಚರಗೊಳ್ಳಿ. ಗುರಿ ಮುಟ್ಟುವವರೆಗೆ ನಿಲ್ಲದಿರಿ.
  2. ಅಜ್ಞಾನವೇ ಮೃತ್ಯು; ಜ್ಞಾನವೇ ಬದುಕು.
  3. ವಿಕಾಸವೇ ಜೀವನ; ಸಂಕೋಚವೇ ಮರಣ.
  4. ತನ್ನನ್ನು ಕೆಳಕ್ಕೊತ್ತುತ್ತಿರುವ ಪರಿಸರ, ಪರಿಸ್ಥಿತಿಗಳಲ್ಲಿ ಜೀವಿಯ ವಿಕಸನ, ಮುನ್ನಡೆಗಳೇ ಜೀವನ. 
  5. ಶಕ್ತಿಯೇ ಜೀವನ. ದೌರ್ಬಲ್ಯವೇ ಮರಣ.
  6. ಈ ಪ್ರಪಂಚ ಒಂದು ದೊಡ್ಡ ಗರಡಿಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.
  7. ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.
  8. ಪುರುಷಸಿಂಹರಾಗಿ.
  9. ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ.
  10. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.
  11. ಮಾನವನೇ ಜೀವಂತ ಕಾವ್ಯ.
  12. ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವದ ಪ್ರಕಾಶನವೇ ಧರ್ಮ.
  13. ಯಾವ ವಿದ್ಯಾಭ್ಯಾಸದಿಂದ ನಮ್ಮಲ್ಲಿ ಶೀಲ ಬೆಳೆಯುವುದೋ, ಮಾನಸಿಕ ಶಕ್ತಿ ಹೆಚ್ಚುವುದೋ, ಬುದ್ಧಿ ವಿಶಾಲವಾಗುವುದೋ, ಯಾವುದರ ಸಹಾಯದಿಂದ ವ್ಯಕ್ತಿ ಸ್ವತಃ ತನ್ನ ಕಾಲ ಮೇಲೆ ನಿಲ್ಲಬಲ್ಲನೋ, ಅಂತಹ ವಿದ್ಯೆ ನಮಗೆ ಬೇಕಾಗಿದೆ.
  14. ಐದು ವಿಷಯಗಳನ್ನು ನೀವು ಅರ್ಥಮಾಡಿಕೊಂಡು, ಅದನ್ನು ನಿಮ್ಮ ಜೀವನದಲ್ಲಿ ಕಾರ್ಯರೂಪಕ್ಕೆ ತಂದು, ಅದರಿಂದ ಶೀಲವನ್ನು ರೂಪಿಸಿಕೊಂಡಿದ್ದರೆ, ಒಂದು ಪುಸ್ತಕ ಭಂಡಾರವನ್ನೇ ಕಂಠಪಾಠಮಾಡಿದ ಪಂಡಿತನಿಗಿಂತಲೂ ನೀವು ಮೇಲು. 
  15. ಮನುಷ್ಯನಲ್ಲಿ ಈಗಾಗಲೇ ಅಂತರ್ಗತವಾಗಿರುವ ಪರಿಪೂರ್ಣತೆಯನ್ನು ವ್ಯಕ್ತಗೊಳಿಸುವುದೇ ಶಿಕ್ಷಣ. 
  16. ನೀವು ಒಂದು ಗಿಡವನ್ನು ಬೆಳೆಸುವುದಕ್ಕೆ ನೀಡುವ ಸಹಾಯಕ್ಕಿಂತ ಹೆಚ್ಚಾಗಿ ಮಗುವಿಗೆ ಶಿಕ್ಷಣವನ್ನು ಕೊಡಲಾರಿರಿ. ಬೆಳೆಯುವ ಬೀಜಕ್ಕೆ ಅವಶ್ಯಕವಾದ ಗೊಬ್ಬರ, ನೀರು, ಗಾಳಿ ಮುಂತಾದವುಗಳನ್ನು ನೀವು ಒದಗಿಸಬಹುದು. ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು. ತನಗೆ ಬೇಕಾದ ವಸ್ತುವನ್ನು ತನ್ನ ಸ್ವಭಾವಕ್ಕೆ ಅನುಗುಣವಾಗಿ ತಾನೇ ಹೀರುವುದು. ಇದರಂತೆಯೇ ಮಗುವಿನ ವಿದ್ಯಾಭ್ಯಾಸ ಕೂಡಾ. ಮಗು ತಾನೇ ಶಿಕ್ಷಣವನ್ನು ಪಡೆಯುತ್ತದೆ.
  17. ಜನರೊಡನೆ ಕಲಹ ಬೇಡ. ಯಾರ ಬಳಿಯೂ ದ್ವೇಷ ಕಟ್ಟಿಕೊಳ್ಳಬೇಡ .ಜಾಕ್ ಅಥವಾ ಜಾನ್ ಕ್ರೈಸ್ತ ನಾದನೆಂದು ನಾವೇಕೆ ವ್ಯಥೆ ಪಡಬೇಕು . ಅವರಿಗೆ ಸೂಕ್ತವಾದ ಧರ್ಮವನ್ನು ಅವರು ಅವಲಂಬಿಸಿಲಿ . ಬೇರೆಯವರ ಜೊತೆಗಿನ ಬಿನ್ನಾಭಿಪ್ರಾಯಗಳೊಡನೆ ಸಹನೆಯಿಂದಿರು .
    (ವಿವೇಕಾನಂದರು ತಮ್ಮ ಶಿಷ್ಯ ಕನ್ನಡಿಗ ಅಳಸಿಂಗ್ ಪೆರುಮಾಳ್ ಗೆ ಬರೆದ ಪತ್ರದಿಂದ)
  18. ಹೊಡೆದರೆ ಕುದುರೆಯಾಗುವುದು ಎಂಬ ಸಲಹೆಯನ್ನು ಅನುಸರಿಸಿ ಒಬ್ಬ ವ್ಯಕ್ತಿ ತನ್ನ ಕತ್ತೆಯನ್ನು ಹೊಡೆದಂತೆ ಇದೆ ನಾವು ಮಕ್ಕಳಿಗೆ ಶಿಕ್ಷಣ ನೀಡುವ ವಿಧಾನ. ಇದನ್ನು ವಜಾ ಮಾಡಬೇಕು.
  19. ಜ್ಞಾನವನ್ನು ಸಂಪಾದಿಸುವುದಕ್ಕೆ ಏಕಾಗ್ರತೆ ಎಂಬ ಒಂದೇ ಮಾರ್ಗವಿರುವುದು. ಶಿಕ್ಷಣದ ಸಾರವೇ ಮಾನಸಿಕ ಏಕಾಗ್ರತೆ.




Thursday, January 10, 2013

ಕಾಂತನಿಲ್ಲದ ಮ್ಯಾಲೆ - ಕಂಬಾರ

ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?
ಗಂಧ ಲೇಪನವ್ಯಾತಕೆ? - ಈ ದೇಹಕೆ..

ಮಂದ ಮಾರುತ ಮೈಗೆ ಬಿಸಿಯಾದವೇ ತಾಯಿ?
ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ?
ಹೂಜಾಜಿ ಸೂಜಿಯ ಹಾಗೆ - ಚುಚ್ಚುತಲಿವೆ..

ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ
ಉಸಿರಿನ ಬಿಸಿ ಅವಗೆ ತಾಗದೇ ಹುಸಿ ಹೋಯ್ತೇ?
ಚೆಲುವ ಬಾರದಿರೇನು ಫಲವೇ? - ಈ ಚೆಲುವಿಗೆ..

ಕಾಮನ ಬಾಣ ಹತ್ಯಾವ ಬೆನ್ನ
ಆತುರ ತೀವ್ರ ಕಾಮಾತುರ ತಾಳೆ ನಾ..
ಆರ್ತಳಿಗೆ ಆಶ್ರಯವಿರದೇ - ಒದ್ದಾಡುವೆ..

ಅನ್ಯ ಪುರುಷನು ಮಾರ ಅಂಗನೆಯನೆಳೆದರೆ
ಕೈ ಹಿಡಿದ ಸರಿಪುರುಷ ಸುಮ್ಮನಿರುತಾರೇನೆ?
ಕರುಣೆಯ ತೋರುವರ್ಯಾರೇ? - ಸಣ್ಣವಳಿಗೆ

ಸಾಹಿತ್ಯ: ಚಂದ್ರಶೇಖರ ಕಂಬಾರ