WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Tuesday, January 15, 2013

ಶಾಂತಕವಿ

ಆಧುನಿಕ ಕನ್ನಡದ ಪ್ರಥಮ ನಾಟಕಕಾರ, ಕೀರ್ತನಕಾರರೆಂದು ಮಾನ್ಯರಾದ ಶಾಂತಕವಿಗಳ ನಿಜನಾಮ ಸಕ್ಕರಿ ಬಾಳಾಚಾರ್ಯ. ಅವರು ಹುಟ್ಟಿದ್ದು ಜನವರಿ 15, 1856ರಂದು ಧಾರವಾಡ ಜಿಲ್ಲೆಯ ಸಾತೇನಹಳ್ಳಿಯಲ್ಲಿ. ಅಂದಿನ ಸಂಸ್ಕೃತದ ಓದಿಗೆ ಅವರು ಹೆಚ್ಚು ಗಮನ ಕೊಡಲಿಲ್ಲ. ಅದೇ ಹಾಡು, ಕುಣಿತ ಅಂದ್ರೆ ಎಲ್ಲಿ ಅಂದ್ರೆ ಅಲ್ಲಿ ಹಾಜರು. ಹಾಡಿನ ರಚನೆಗೂ ಕೈ ಹಾಕಿದರು. ತಮ್ಮ ಮನೆತನದ ದೇವರು ಶಾಂತೇಶ ಎಂಬುದನ್ನೇ ಕಾವ್ಯನಾಮ ಮಾಡಿಕೊಂಡು ಶಾಂತಕವಿ ಆದರು. ಹಾಗೆಯೇ ನಾಟಕರಚನೆಯ ಗೀಳು ಹತ್ತಿತು. 

1870ರ ಸುಮಾರಿನಲ್ಲಿ ಶಾಂತಕವಿಗಳ ಜೀವನದ ಆರಂಭದ ಕಾಲದಲ್ಲಿ ಕನ್ನಡವನ್ನು ಕೇಳುವವರೇ ಇಲ್ಲ. ಮರಾಠಿ ನಾಟಕಗಳು ಜನಪ್ರಿಯವಾಗಿ ನಾಟಕ ನೋಡಲಿಕ್ಕಾಗಿಯೇ ಜನ ಮರಾಠಿ ಕಲಿಯುವಂತಹ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಕನ್ನಡ ರಂಗಭೂಮಿಯ ಜಾಗೃತಿಯನ್ನು ಕುರಿತು ಶಾಂತಕವಿಗಳು ಗಂಭೀರವಾಗಿ ಚಿಂತಿಸತೊಡಗಿದರು. ಆಗಿನ ಕೃತುಪುರವೆನಿಸಿದ್ದ ಗದಗದಲ್ಲಿ ಕನ್ನಡ ಉದ್ಧಾರಕ್ಕಾಗಿ ಕನ್ನಡ ನಾಟಕದ ಏಳ್ಗೆಗಾಗಿ ಕರ್ನಾಟಕ ಕಂಪನಿಯನ್ನು ಕಟ್ಟುವ, ಕನ್ನಡ ನಾಟಕಗಳನ್ನು ಬರೆದುಕೊಡುವ ನಾಟಕವನ್ನು ಕಲಿಸಿಕೊಡುವ ಕೆಲಸ ಇವರಿಂದ ಆರಂಭವಾಯಿತು. ಈ ನಿಟ್ಟಿನಲ್ಲಿ ಅವರು ರಚಿಸಿದ ಮೊದಲ ನಾಟಕ ‘ಉಷಾಹರಣ’. ಈ ಕಾರಣಕ್ಕಾಗಿ ಇಂದಿಗೂ ಶಾಂತಕವಿಗಳು ಕರ್ನಾಟಕ ನಾಟಕದ ಪ್ರಥಮ ಗುರುವೆಂದು ಗೌರವಿಸಲ್ಪಡುತ್ತಾರೆ.

ವೃತ್ತಿಯಿಂದ ಶಾಂತಕವಿಗಳು ಅಧ್ಯಾಪಕರಾದರು. ಇಂಗ್ಲಿಷ್ ಕಲಿಯದ ಕಾರಣ ಕನ್ನಡ ಶಾಲೆಯ ಅಧ್ಯಾಪಕರಾಗಿ ಉಳಿದರು. ಇವರ ನಾಟಕದ ಕುರಿತ ಆಸಕ್ತಿಯನ್ನು ನೋಡಿ ಒಬ್ಬ ಮರಾಠಿ ಅಧಿಕಾರಿ ಇವರನ್ನು ಗದಗಿನಿಂದ ಹೊಂಬಳಕ್ಕೆ ವರ್ಗ ಮಾಡಿದರು. ಆದರೇನು ಶಾಲೆಯ ಕೆಲಸ ಮುಗಿದ ನಂತರ ಒಂಬತ್ತು ಮೈಲಿ ದೂರದ ಗದಗಿಗೆ ಎಮ್ಮೆಯ ಮೇಲೆ ಕುಳಿತು ಹೋಗಿ ನಟರನ್ನು ತರಬೇತು ಮಾಡುತ್ತಿದ್ದರಂತೆ. ಇವರ ಈ ಉತ್ಸಾಹ ಆಸಕ್ತಿಗಳು ಕನ್ನಡ ರಂಗಭೂಮಿಗೆ ಭದ್ರವಾದ ಅಡಿಪಾಯವನ್ನು ಹಾಕಿದವು.

ಅವರ ಮೊದಲನಾಟಕ ‘ಉಷಾಹರಣ’ ಸಂಗೀತನಾಟಕ. ಪ್ರದರ್ಶನಗೊಂಡ ಪ್ರಥಮ ಕನ್ನಡ ನಾಟಕ. ಇದನ್ನು ನೋಡಿ ಎಲ್ಲರೂ ಮೆಚ್ಚುವವರೇ. ಹೀಗಾಗಿ ನಾಟಕ ಬರೆದುಕೊಡಿ ಎಂದು ಹಲವಾರು ಜನ ದುಂಬಾಲುಬಿದ್ದರು. ಅದರ ಫಲ ಒಂದಾದಮೇಲೊಂದು ಪೌರಾಣಿಕ ನಾಟಕಗಳನ್ನು ರಚಿಸಿದರು. ಸಾಮಾನ್ಯ ಜನತೆಗಾಗಿ ತಮ್ಮ ಕಾವ್ಯ ನಾಟಕಗಳ ರಚನೆಯಾಗಬೇಕೆಂದು ಶಾಂತಕವಿಗಳ ಪ್ರಧಾನ ಗುರಿಯಾಗಿತ್ತು. “ಕನ್ನಡದಲ್ಲಿ ಗ್ರಂಥಗಳು ಹೆಚ್ಚಾಗಬೇಕು, ಅನ್ಯ ಭಾಷೆಗಳಲ್ಲಿ ಇದ್ದ ಉತ್ತಮ ಕೃತಿಗಳನ್ನು ಕನ್ನಡಕ್ಕೆ ತರಬೇಕು. ಎಲ್ಲೆಲ್ಲಿಯೂ ಕನ್ನಡದ ಪ್ರಚಾರವಾಗಬೇಕು” ಎಂಬುದು ಶಾಂತಕವಿಗಳ ನರನಾಡಿಗಳಲ್ಲಿ ಸೇರಿಹೊಗಿದ್ದಿತೆಂದು ಡಾ. ಶ್ರೀನಿವಾಸ ಹಾವನೂರರು ಅಭಿಪ್ರಾಯಪಡುತ್ತಾರೆ. ಕರ್ನಾಟಕ ನಾಟಕ ಕಂಪನಿಯವರಿಗಾಗಿ ಶಾಂತಕವಿಗಳು ಬರೆದ ಕೆಲವು ನಾಟಕಗಳನ್ನು ಹೆಸರಿಸಬಹುದು. ‘ಸೀತಾರಣ್ಯ ಪ್ರವೇಶ’, ‘ಸಿರಿಯಾಳ ಸತ್ವ ಪರೀಕ್ಷೆ’, ‘ಸುಂದೋಪಸುಂದ ವಧೆ’, ‘ವತ್ಸಲಾಹರಣ’, ‘ಕೀಚವಧ’, ‘ಸುಧನ್ವ ವಧೆ’, ‘ಪಾರ್ವತಿ ಪರಿಣಯ’, ‘ಮೇಘದೂತ’, ‘ಶಕುಂತಲೋತ್ಪತ್ತಿ’, ‘ಚಂದ್ರಾವಳಿ ಚರಿತ್ರೆ’ ಇವು ಮುಖ್ಯವಾದವು.

ಜನರಲ್ಲಿ ನಾಟಕ ಕಲೆಯ ಬಗೆಗೆ ಹೊಸ ಅಭಿರುಚಿ ಹುಟ್ಟಿಸುವುದರಲ್ಲಿ ಶಾಂತಕವಿಗಳ ಪಾತ್ರ ಪ್ರಮುಖವಾದುದು. ಶಾಂತಕವಿಗಳ ನಾಟಕಗಳನ್ನು ಆಡಲೆಂದೇ ಕನ್ನಡನಾಡಿನ ಅನೇಕ ಕಡೆಗಳಲ್ಲಿ ನಾಟಕ ಕಂಪನಿಗಳು ಹುಟ್ಟಿಕೊಂಡವೆಂಬುದರಿಂದಲೇ ಇವರ ನಾಟಕಗಳ ಜನಪ್ರಿಯತೆಯ ಅರಿವಾಗುತ್ತದೆ. ಹೀಗೆ ಅವರ ನಾಟಕ ಪತಾಕೆಯು ಊರೂರಲ್ಲಿ ಮೆರೆದು ಹಾರಲಾರಂಭಿಸಿತು. ಇದಕ್ಕೆ ಕಾರಣರಾದ ಕೇವಲ ಇಪ್ಪತೈದು ವರ್ಷದವರಾದ ಶಾಂತಕವಿಗಳನ್ನು ಸನ್ಮಾನಿಸಲು 1881ರಲ್ಲಿ ಬೆಳಗಾವಿ, ಧಾರವಾಡ ಮೊದಲಾದೆಡೆಗಳಲ್ಲಿ ಸಾರ್ವಜನಿಕ ಸತ್ಕಾರ ಸಭೆಗಳು ನಡೆದುವು. ಜನತೆಯಿಂದ ಕನ್ನಡ ನಾಟಕಕಾರರೊಬ್ಬರಿಗೆ ಸಂದ ಈ ಗೌರವ ಪುರಸ್ಕಾರಗಳು ಕನ್ನಡಿಗರ ಅಭಿಮಾನದ ಪೂರಕವಾಗಿವೆ.

ಶಾಂತಕವಿಗಳ ಪ್ರಕಟಿತ ನಾಟಕಗಳನ್ನು ಅವಲೋಕಿಸುವುದರಿಂದ ಅವರ ನಾಟಕಗಳ ಸ್ವರೂಪವನ್ನು ಬಹುಮಟ್ಟಿಗೆ ಅರ್ಥಮಾಡಿಕೊಳ್ಳಬಹುದು. “ಶ್ರೀಮಾನ್ ಶಾಂತಕವಿಗಳ ನಾಟಕಗಳೆಂದರೆ ಸಾಮಾನ್ಯವಾಗಿ ಬಯಲಾಟಗಳಿಗೂ ಮಧ್ಯಸ್ಥವಾಗಿರುವ ರೂಪಗಳೆಂದು ಹೇಳಬಹುದು” ಎಂದು ತ.ಸು. ಶಾಮರಾಯರು ಅಭಿಪ್ರಾಯಪಡುತ್ತಾರೆ. ಚೆಲುವು ರೂಪುಗಳಿದ್ದ, ಚೆಂದಬೇಸಗಳಿದ್ದ, ಲಲಿತಭಾಷಣವಿದ್ದ, ತಿಳಿಗಾನವಿದ್ದ, ಭಕ್ತರ ಕಥೆ, ಹರಿಹರಾದಿ ದೇವತೆಗಳ ಲೀಲೆ ಇದ್ದ ಅವರ ನಾಟಕಗಳು ಜನರಿಗೆ ಹಿಡಿಸಿದವು. ಕನ್ನಡ ಭಾಷೆಯಲ್ಲಿ ಆಡುತಿದ್ದ ಅವರ ನಾಟಕಗಳು ಬೇಗ ಜನತೆಯ ಮನವನ್ನು ಸೂರೆಗೊಂಡು ಪ್ರಸಿದ್ಧವಾದವು.

ಅಂದಿನ ಪೌರಾಣಿಕ ನಾಟಕಕಾರರನ್ನು ಗಮನಿಸಿದಾಗ ಶಾಂತಕವಿಗಳ ಕೊಡುಗೆಯು ಮಹತ್ವಪೂರ್ಣವಾದದ್ದೆಂಬ ಅರಿವು ಯಾರಿಗಾದರೂ ಆಗದಿರದು. ಸಮಗ್ರ ಕರ್ನಾಟಕದ ಸ್ವತಂತ್ರ ನಾಟಕಕಾರರಲ್ಲಿ ಶಾಂತಕವಿಗಳೇ ಮೊದಲಿಗರು. ಅನುವಾದದ ಕಡೆ ಗಮನಹರಿಸದೆ ಪೌರಾಣಿಕ ಕಥಾವಸ್ತುಗಳಿಂದ ಸ್ವಂತವಾಗಿ ನಾಟಕಗಳನ್ನು ರಚಿಸಿ ಕಳೆದ ಶತಮಾನದಲ್ಲಿ ಹಿರಿಯ ಸಾಧನೆಯನ್ನು ಮಾಡಿದ ಕೀರ್ತಿ ಶಾಂತಕವಿಗಳದು. ನವರಸಗಳಿಂದ ಕೂಡಿದ ಅವರ ನಾಟಕಗಳಲ್ಲಿ ಶೃಂಗಾರಕ್ಕೆ ವಿಶೇಷ ಪ್ರಾಧಾನ್ಯತೆಯಿತ್ತು. ಅದರೊಂದಿಗೆ ಭಕ್ತಿ ಹಾಗೂ ಸದಾಚಾರ ಬೋಧನೆಗಳಿಗೂ ಅವಕಾಶ ದೊರೆತಿತ್ತು.

1886ರಲ್ಲಿ ಅಗಡಿಗೆ ವರ್ಗವಾಗಿ ಬಂದ ಶಾಂತಕವಿಗಳು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ಅಗಡಿಯಲ್ಲಿ ಅಗಡಿಯ ಶೇಷಾಚಲ ಸಾಧುಗಳು, ಅಗಡಿಯ ದೇಸಾಯಿ, ಶಿಶುನಾಳ ಶರೀಫ್ ಸಾಹೇಬ ಮತ್ತು ಮೂಡಲಪಾಯದ ಹೆಸರಾಂತ ಶರಣಪ್ಪ ಇವರ ಸಂಪರ್ಕ, ಸಾನ್ನಿಧ್ಯಗಳು ಶಾಂತಕವಿಗಳಲ್ಲಿ ಪರಿಪಕ್ವತೆಯನ್ನು ತಂದುಕೊಡಲು ನೆರವಾದವು. ಮೊದಮೊದಲು ಅನುವಾದದ ಕಡೆ ಅಷ್ಟಾಗಿ ಗಮನ ಕೊಡದಿದ್ದ ಶಾಂತಕವಿಗಳು ಅಗಡಿಯಲ್ಲಿದ್ದಾಗ ‘ಮೇಘದೂತ’, ‘ವಿರಹತರಂಗ’, ಮೊದಲಾದ ಸಂಸ್ಕೃತದಿಂದ ಅನುವಾದ ಕೃತಿಗಳನ್ನು ರಚಿಸಿದರು. ಸಂಸ್ಕೃತದ ಈ ಕಾವ್ಯಗಳನ್ನು ಮೊಟ್ಟಮೊದಲಿಗೆ ಮೆಚ್ಚಿದ ಕನ್ನಡದ ಕವಿಯೆಂದರೆ ಶಾಂತಕವಿಗಳೆಂಬುದು ಗಮನಾರ್ಹ ಸಂಗತಿ. ಶಾಂತಕವಿಗಳು ಅಗಡಿಯನ್ನು ಬಿಡುವಾಗ ಅದ್ಧೂರಿಯಾದ ಬೀಳ್ಕೊಡುಗೆ ಸಮಾರಂಭ ನಡೆದು ರಸಿಕರಾದ ಕನ್ನಡಿಗರಿಂದ ಒಂದು ಮನೆ ಹಾಗೂ ಜಮೀನುಗಳು ಅವರಿಗೆ ದತ್ತಿಯಾಗಿ ದೊರೆಯಿತೆಂದು ತಿಳಿದುಬರುತ್ತದೆ.

ಜೀವನದಲ್ಲಿ ಬಡತನದಲ್ಲಿದ್ದ ಇವರ ಕಷ್ಟಗಳನ್ನು ಅರಿತು ಬೋಧರಾಯಾಚಾರ್ಯ ಸವಣೂರ, ಭಿಷ್ಟೋ ಪದಕಿ, ಬಾಳಾಜಿ ಅಣ್ಣಿಗೇರಿಕಾರ ಮೊದಲಾದವರು ಶಾಂತಕವಿಗಳ ಕೃತಿಗಳ ಮುದ್ರಣ ಮತ್ತು ಮಾರಾಟಗಳ ಕೆಲಸವನ್ನು ತೆಗೆದುಕೊಂಡು ಶಾಂತಕವಿಗಳ ಕಷ್ಟದ ದಿನಗಳಲ್ಲಿ ನೆರವಾದರು.

ಇಳಿಯ ವಯಸ್ಸಿನಲ್ಲೂ ಶಾಂತಕವಿಗಳ ಕವನ ಸ್ಫೂರ್ತಿಯು ಮರಳಿ ಚಿಮ್ಮಲು ‘ಕರ್ನಾಟಕ ಗತವೈಭವ’ದ ಪ್ರಕಟಣೆಗೆ ಪ್ರಧಾನ ಕಾರಣವಾಯಿತು. ಜನಜಾಗೃತಿಯುಂಟುಮಾಡಲು ‘ವಿದ್ಯಾರಣ್ಯ ವಿಜಯ’ವನ್ನು ಊರೂರಲ್ಲಿ ಕೀರ್ತನೆ ಮಾಡಿದರೆಂದು ಕನ್ನಡದ ಪಿತಾಮಹರೆನಿಸಿದ ಆಲೂರು ವೆಂಕಟರಾಯರೇ ತಿಳಿಸಿದ್ದಾರೆ.

ಶಾಂತಕವಿಗಳ ‘ರಕ್ಷಿಸು ಕರ್ನಾಟಕದೇವಿ’ ಎಂಬ ಹಾಡಂತೂ ಮುಂಬಯಿ ಕರ್ನಾಟಕದಲ್ಲಿ ಬಹಳ ವರ್ಷಗಳು ನಾಡಗೀತೆಯಾಗಿತ್ತೆಂದು ತಿಳಿದುಬರುತ್ತದೆ. ಇದಲ್ಲದೆ ಶಾಂತಕವಿಗಳು ಹಲವಾರು ಕನ್ನಡ ಗೀತೆಗಳನ್ನೂ, ಲಾವಣಿಗಳನ್ನೂ ರಚಿಸಿದ್ದರು. ಕಾವ್ಯ ನಾಟಕಗಳಲ್ಲದೆ ಶಾಂತಕವಿಗಳು ‘ಕಾಲಮಹಿಮೆ’, ‘ದಾಸಪ್ಪನಾಯಕನ ಫಾರ್ಸು’, ‘ಕಾಳಾಸುರ’ ಮುಂತಾದ ಹಾಸ್ಯ ಪ್ರಬಂಧಗಳನ್ನು ಕೂಡ ರಚಿಸಿದ್ದಾರೆ.

ಕನ್ನಡಕ್ಕಾಗಿ ಇಳಿಯ ವಯಸ್ಸಿನಲ್ಲೂ ಸಾಕಷ್ಟು ಶ್ರಮಿಸಿದ ಶಾಂತಕವಿಗಳು ತಮ್ಮ ಕೆಲಸ ಫಲಪ್ರದವಾದುದನ್ನು ಕಂಡು ಸಂತೋಷಿಸಿದರು. ಅದನ್ನು ಶಾಂತಕವಿಗಳೇ ಈ ರೀತಿ ಹೇಳಿಕೊಂಡಿದ್ದಾರೆ. “ಈ ಕಾಲವಂ ನೋಡಬಯಬಯಸಿ ಮುದುಕನಾದೆನ್ನ ಸಂಪ್ರಾರ್ಥನೆಗೆ ಪರಮಾತ್ಮನಿಂದೊಲಿದ” ಎಂದು ಸಂತೃಪ್ತಿಯಿಂದಲೇ ‘ಧರೆಯೊಳುದಯಿಸಿದ ಕಾರ್ಯ ಸಫಲವಾಯಿತು’ ಎಂಬ ಧನ್ಯತಾಭಾವದಿಂದಲೇ 1920ರಲ್ಲಿ ಈ ಲೋಕದಿಂದ ದೂರವಾದರು.

ಆಧಾರ: ಸಾಲು ದೀಪಗಳು ಕೃತಿಯಲ್ಲಿ ವಿ. ಗುಂಡಣ್ಣ ಅವರ ಲೇಖನವನ್ನು ಆಧರಿಸಿದೆ.

No comments:

Post a Comment