WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Sunday, February 17, 2013

ಎಂ. ಗೋಪಾಲಕೃಷ್ಣ ಅಡಿಗ

ಡಾ. ಎಂ. ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರಿ ಎಂಬ ಹಳ್ಳಿಯಲ್ಲಿ 18 ಫೆಬ್ರವರಿ 1918ರಲ್ಲಿ. ಮನೆಯ ಮುಂಜಗಲಿಯ ಮೇಲೆ ಕುಳಿತರೆ ದೂರದಲ್ಲಿ ಮೋಡಗಳಾಚೆ ಕಾಣುವ ಪಶ್ಚಿಮ ಘಟ್ಟಗಳ ಸಾಲು; ಹಿಂಬಾಗಿಲಿನ ಹಿತ್ತಲಿಗೆ ಬಂದರೆ ಅಡಿಕೆ, ಬಾಳೆ, ಸೀಬೆ, ನಿಂಬೆ, ಮಾವು, ಹಲಸು – ಈ ಸಸ್ಯಲೋಕ; ಅಕ್ಕಪಕ್ಕ ತೋಟ ಗದ್ದೆಗಳಲ್ಲಿ ಬೆಳೆದುನಿಂತ ಮರ ಗಿಡ ಪೈರು; ಅಂಗಳದಲ್ಲಿ ನಿಂತು ಕಣ್ಣು ಹಾಯಿಸಿದರೆ ಮೇಲೆ ಕಾಣುವ ಆ ನೀಲ ಲೋಕ; ಅನತಿ ದೂರದಲ್ಲೇ ಪ್ರಕೃತಿ ಚೇಷ್ಟೆಗಳಿಗೆಲ್ಲ ಶೃತಿ ಹಿಡಿದಂತೆ ಸದಾ ಭೋರ್ಗರೆಯುತ್ತ, ಸದಾ ತುಡಿಯುತ್ತ ಸ್ಥಾಯಿಯಾಗಿ ಇರುವ ಸಮುದ್ರ – ಈ ಎಲ್ಲ ವಿಸ್ಮಯ, ವಿಚಿತ್ರ ವೈಭವಗಳ ನಡುವೆ ಅಡಿಗರ ಬಾಲ್ಯ ಕಳೆಯಿತು. ಚಿಕ್ಕಂದಿನ ಎಳೆಯ ಮನಸ್ಸಿನಲ್ಲಿ ಈ ಎಲ್ಲವೂ ಒತ್ತಿ ಮುದ್ರೆ, ಬೀರಿದ ಪ್ರಭಾವ ಮುಂದೆ ಅವರ ಕಾವ್ಯಪ್ರಪಂಚಕ್ಕೆ ಸೂಕ್ತ ಹಿನ್ನೆಲೆಯನ್ನೂ ಅಗತ್ಯ ಪರಿಸರವನ್ನೂ ಒದಗಿಸಿವೆ.

ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ಅವರ ಹತ್ತಿರದ ಬಂಧುಗಳೊಬ್ಬರು ಅವರ ಮನೆಯಲ್ಲೇ ಇದ್ದು ಯಕ್ಷಗಾನ ಪ್ರಸಂಗಗಳನ್ನು ಬರೆಯುತ್ತಿದ್ದರಂತೆ. ಮನೆಯಲ್ಲಿ ಪದ್ಯ ರಚನೆ, ವಾಚನಗಳ ವಾತಾವರಣವಿತ್ತು. ಪ್ರತಿರಾತ್ರಿಯೂ ಅವರ ಸೋದರತ್ತೆ ನಾರಣಪ್ಪನ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇವುಗಳನ್ನು ರಾಗವಾಗಿ ಓದಿ ಹೇಳುತ್ತಿದ್ದರೆಂದು ಅಡಿಗರು ನೆನೆಸಿಕೊಳ್ಳುತ್ತಿದ್ದರು. 

ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ.

“ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲಿ ಪದ್ಯರಚನೆಗೆ ಕೈಹಾಕಿದೆನೆಂದು ತೋರುತ್ತದೆ. ಭಾಮಿನಿಷಟ್ಪದಿ, ವಾರ್ಧಕ ಷಟ್ಪದಿ ಕಂದ ಪದ್ಯಗಳನ್ನು ರಚಿಸುತ್ತಿದ್ದೆ” ಎಂದು ಅಡಿಗರೇ ಹೇಳಿದ್ದಾರೆ. ಅಂದರೆ ಸುಮಾರು 1931-32ರ ವೇಳೆಗೆ ಅಡಿಗರು ಕಾವ್ಯರಚನೆ ಆರಂಭಿಸಿದಂತೆ ತೋರುತ್ತದೆ.

ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ. ಎ (ಆನರ್ಸ್), ಎಂ.ಎ (ಇಂಗ್ಲಿಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರಿನ ಶಾರದಾ ವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮುಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿ ತಮ್ಮ ವಿಶ್ರಾಂತ ಬದುಕನ್ನು ಬೆಂಗಳೂರಿನಲ್ಲಿ ಕಳೆದು, ದಿನಾಂಕ 14-11-1992ರಲ್ಲಿ ನಿಧನರಾದರು.

ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಆಸಾನ್ ಪ್ರಶಸ್ತಿ, ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದರು. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದ ಅಡಿಗರು “ತಮ್ಮ ಕಿರಿಯ ತಲೆಮಾರಿನವರ ಮೇಲೆ ಬೀರಿದ ಪ್ರಭಾವ, ಅವರ ಓರಗೆಯ ಮತ್ತು ಹಿರಿಯ ತಲೆಮಾರಿನವರಿಗೆ ಒಡ್ಡಿದ ಸವಾಲುಗಳು ಕನ್ನಡ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸಂಗತಿಯಾಗಿದೆ.

ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ ಪ್ರಕಟವಾದದ್ದು 1946ರಲ್ಲಿ. ನಂತರದಲ್ಲಿ ಅವರ ಹನ್ನೊಂದು ಕವನ ಸಂಕಲನಗಳು ಪ್ರಕಟವಾದವು. ಕಟ್ಟುವೆವು ನಾವು (1948), ನಡೆದು ಬಂದ ದಾರಿ (1952), ಚಂಡೆಮದ್ದಳೆ (1954), ಭೂಮಿಗೀತ (1959), ವರ್ಧಮಾನ (1972), ಇದನ್ನು ಬಯಸಿರಲಿಲ್ಲ (1975), ಮೂಲಕ ಮಹಾಶಯರು (1981), ಬತ್ತಲಾರದ ಗಂಗೆ (1983), ಚಿಂತಾಮಣಿಯಲ್ಲಿ ಕಂಡ ಮುಖ (1987), ಸುವರ್ಣ ಪುತ್ಥಳಿ (1990) ಹಾಗೂ ಬಾ ಇತ್ತ ಇತ್ತ (1993) ಪ್ರಕಟವಾಗಿವೆ. 1937ರಿಂದ 1976ರವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ 1987ರಲ್ಲಿ ಪ್ರಕಟವಾಗಿದೆ. ಅಡಿಗರು ಅನಾಥೆ, ಆಕಾಶದೀಪ ಎಂಬ ಎರಡು ಕಾದಂಬರಿಗಳನ್ನೂ ಬರೆದಿದ್ದಾರೆ. ಅನೇಕ ಅನುವಾದ ಕೃತಿಗಳೂ ಪ್ರಕಟವಾಗಿವೆ.

ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಈ ಎಲ್ಲ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’ ಎಂಬ ಸಂಪುಟವೊಂದರಲ್ಲಿ ಪ್ರಕಟವಾಗಿದೆ. ಅವರ ಗದ್ಯಬರಹಗಳನ್ನು ಕುರಿತು ಅವರೇ ಹೀಗೆ ಹೇಳುತ್ತಾರೆ: “ವಿಚಾರ ಪ್ರಧಾನವಾದ ಈ ಪ್ರಬಂಧಗಳಲ್ಲಿ ನಾನು ನನ್ನ ಕಾವ್ಯಗಳಲ್ಲಿ ಹೇಳದೆ ಇರುವುದು ಯಾವುದೂ ವ್ಯಕ್ತಗೊಂಡಿಲ್ಲ. ಅಲ್ಲಿ ಅನುಭವ ಚಿತ್ರಗಳಾಗಿ ವ್ಯಕ್ತಗೊಂಡ ವಿಚಾರಗಳು, ಕಲ್ಪನೆಗಳು ಇಲ್ಲಿ ಪ್ರಜ್ಞೆಯ ಸ್ತರದಲ್ಲಿ ಶುದ್ಧ ಗದ್ಯದಲ್ಲಿ ಸ್ಪಷ್ಟತೆ, ಸ್ಪುಟತೆ, ಅಸಂದಿಗ್ಧತೆಗಳನ್ನೇ ಗುರಿಯಾಗಿಟ್ಟುಕೊಂಡು ಪ್ರಕಟವಾಗಿವೆ”. ಅಡಿಗರು ಕೆಲವು ಸಣ್ಣಕಥೆಗಳನ್ನೂ ಬರೆದಿದ್ದಾರೆ. ಒಮ್ಮೆ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.

ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ‘ಆಧುನಿಕ ಮಹಾಕಾವ್ಯ’ವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಇಪ್ಪತ್ತನೇ ಶತಮಾನದ ಸ್ವಾತಂತ್ರೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಾಸ್ತವ ಅಡಿಗರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲವೆನ್ನಬಹುದು. ಅಡಿಗರ ಕಾವ್ಯನಾಯಕನ ಕೆಲವು ಲಕ್ಷಣಗಳನ್ನೂ ಹೀಗೆ ಗುರುತಿಸಬಹುದು: ಸಾಂಪ್ರದಾಯಿಕವಾದ ಒಪ್ಪಿತ ಮೌಲ್ಯಗಳ ಬಗ್ಗೆ ಈತನಿಗೆ ಆರಾಧಕ ಮನೋಭಾವವಿಲ್ಲ. ಹಾಗೆಂದು ಅವುಗಳನ್ನು ಈತ ಸಾರಾಸಗಟಾಗಿ ತಿರಸ್ಕರಿಸುವಂಥವನೂ ಅಲ್ಲ. ಚಿಕಿತ್ಸಕ ಮನೋಭಾವದ ಈತನಿಗೆ ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ಪರಂಪರೆಯನ್ನು ಸೂಕ್ತವಾಗಿ ಒಗ್ಗಿಸಿಕೊಳ್ಳುವುದರ ಬಗ್ಗೆ ಆಸಕ್ತಿ. ಅನೇಕ ನವ್ಯಕೃತಿಗಳಲ್ಲಿ ಕಾಣಿಸುವಂತೆ ಅಡಿಗರ ನಾಯಕ ಸೂಕ್ಷ್ಮ ಮನಸ್ಸಿನ ದುರ್ಬಲ ವ್ಯಕ್ತಿಯಲ್ಲ. ಈತನೊಬ್ಬ ಹೋರಾಟಗಾರ. ಎಲ್ಲ ಬಗೆಯ ಸರ್ವಾಧಿಕಾರೀ ಶಕ್ತಿಗಳ ವಿರುದ್ಧವೂ ಈತ ಪ್ರತಿಭಟಿಸುತ್ತಾನೆ. ಈ ಪ್ರತಿಭಟನೆ ಆತ್ಮ ವಿಶ್ಲೇಷಣೆಯ ಪ್ರಕ್ರಿಯೆಯೂ ಆಗುತ್ತದೆ. ಎಲ್ಲ ರೀತಿಯ ಆಕ್ರಮಣಗಳನ್ನೂ ಎದುರಿಸಿ ವ್ಯಕ್ತಿವಿಶಿಷ್ಟತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಈತನ ತುಡಿತ. 

ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ದ ಮುನ್ನುಡಿಯಲ್ಲಿ ಬೇಂದ್ರೆಯವರು ಹೀಗೆ ಹೇಳಿದ್ದಾರೆ: “ನಾನು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಾಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟುಮಟ್ಟಿಗೆ ಇಲ್ಲ. ಒಂದು ಬಗೆಯ ಸಿದ್ಧ ಶೈಲಿಯಿಂದ ನವಕವಿಗಳು ಹೊರಡುತ್ತಾರೆ. ಗೆಳೆಯ ಗೋಪಾಲಕೃಷ್ಣರಿಗೆ ಅವರ ವಯಸ್ಸಿಗಿದ್ದ ಶೈಲಿಯ ಪಾಕ ನನಗೆ ಆ ವಯಸ್ಸಿಗೆ ಇರಲಿಲ್ಲ. ಆದರೆ ನಮಗೆ ಆ ಕಾಲಕ್ಕೆ ಇದ್ದ ನಾವೀನ್ಯದ ಅನುಕೂಲ ಈಗಿನವರಿಗಿಲ್ಲ”. ಬೇಂದ್ರೆಯವರು ಹೇಳುವಂತೆ ಆ ಕಾಲಕ್ಕಾಗಲೇ ಕನ್ನಡ ಕಾವ್ಯ ಸಂದರ್ಭದಲ್ಲಿ ಸಿದ್ಧಶೈಲಿಯೊಂದು ರೂಪುಗೊಂಡಿತ್ತು. ನವೋದಯ ಕಾವ್ಯ ಸಂಪ್ರದಾಯದ ಅತ್ಯುತ್ತಮ ಕಾವ್ಯ ಸೃಷ್ಟಿಯಾಗಿತ್ತು. 1926ರ ವೇಳೆಗೆ ಬಿ.ಎಂ.ಶ್ರೀ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮನ್ನಡೆದ ಕನ್ನಡ ಕಾವ್ಯ ಒಂದು ಸ್ಪಷ್ಟ ರೂಪ ಪಡೆದು ಮಹತ್ವದ ಸಂಕಲನಗಳು ಆ ವೇಳೆಗಾಗಲೇ ಪ್ರಕಟವಾಗಿದ್ದವು. ಹೊಸದಾಗಿ ಬರೆಯಲು ಆರಂಭಿಸುವ ತರುಣರಿಗೆ ಒಂದು ಕಾವ್ಯ ಮಾದರಿ ಕಣ್ಣೆದುರಿಗಿತ್ತು. ಈ ಮಾದರಿಯನ್ನು ಬಿಟ್ಟು ಹೊಸದಾರಿ ಕಂಡುಕೊಳ್ಳುವುದು, ತನ್ನತನವನ್ನು ರೂಪಿಸಿಕೊಳ್ಳುವುದು ಅಡಿಗರು ಕಾವ್ಯರಚನೆಯ ಆರಂಭದಲ್ಲಿ ಎದುರಿಸಿದ ಬಹುಮುಖ್ಯ ಸಮಸ್ಯೆಯಾಗಿದ್ದಂತೆ ತೋರುತ್ತದೆ.

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ (ನನ್ನ ನುಡಿ)

“ಭಾವತರಂಗದ ಮೊದಲ ಕವಿತೆಯಲ್ಲಿಯೇ ತನ್ನತನವನ್ನು ಕಂಡುಕೊಳ್ಳುವ ಮನೋಭಾವವನ್ನು ಅಡಿಗರು ಸ್ಪಷ್ಟವಾಗಿ ಸೂಚಿಸಿದ್ದಾರೆ. ಇಲ್ಲಿ ಎರಡು ಮುಖ್ಯ ಅಂಶಗಳನ್ನು ನಾವು ಗಮನಿಸಬೇಕು. (೧) ಬಗೆಯೊಳಗನೇ ತೆರೆದು, (೨) ನನ್ನ ನುಡಿಯೊಳೆ. ಅಡಿಗರು ಹೇಳುವ ಈ ಎರಡು ಸಂಗತಿಗಳು ಅವರ ಇಡೀ ಕಾವ್ಯದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಬೀಜರೂಪದ ಮಾತುಗಳಾಗಿವೆ. ವಸ್ತು ಹಾಗೂ ಅಭಿವ್ಯಕ್ತಿ ಎರಡರಲ್ಲೂ ಹೊಸದನ್ನು ಸಾಧಿಸಬೇಕೆಂಬ ಹಂಬಲವನ್ನು ನಾವಿಲ್ಲಿ ಕಾಣಬಹುದಾಗಿದೆ.


ಅಡಿಗರ ಆರಂಭದ ಕವಿತೆಗಳ ಮುಖ್ಯಗುಣ-ಭಾವತೀವ್ರತೆ. “ಮಹಾರಾಜ ಕಾಲೇಜು ಆ ಕಾಲದ ಸಂಸ್ಕೃತಿಯ ಒಂದು ಮುಖ್ಯ ಕೇಂದ್ರವಾಗಿ ಎಲ್ಲ ಸೃಜನಾತ್ಮಕ ಚಟುವಟಿಕೆಗಳಿಗೂ ಮಾತೃಸ್ಥಾನವಾಗಿತ್ತು. ಅಲ್ಲಿದ್ದಾಗಲೇ ನಾನು ನಿಜವಾದ ಭಾವಪ್ರಧಾನ ಕವನಗಳನ್ನು ರಚಿಸತೊಡಗಿದ್ದು.” ಎಂದು ಅಡಿಗರು ಹೇಳಿದ್ದಾರೆ. ಭಾವತರಂಗದ ಹೆಸರೇ ಸೂಚಿಸುವಂತೆ ಅಡಿಗರ ಕಾವ್ಯ ಇಲ್ಲಿ ಭಾವದ ಅಲೆಯ ಮೇಲೆ ನಿರಾಯಾಸ ತೇಲಿದೆ.


ವಿಧಿಯೇ ನಿನ್ನಿದಿರು ಮಾರಾಂತು ಹೋರಾಡಿ ಕೆ
ಚ್ಚೆದೆತನದ ಬಲ್ಮೆಯನು ಬಿತ್ತರಿಪೆನು
ಪದವನಿಡುತೆನ್ನೆದೆಯ ಮೇಲೆ ತಾಂಡವವೆಸಗು
ಬೆದರುವೆನೆ ಬೆಚ್ಚುವೆನೆ ನಿನಗೆ ನಾನು (ವಿಧಿಗೆ)


ಈ ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವಾವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು ವಿರೋಧಿಸಿದ್ದು ಇಂಥ ರೀತಿಯನ್ನೇ. ದ್ವಿತೀಯ ಪ್ರಾಸ, ಮಾರಾಂತು, ಬಿತ್ತರಿಪೆನು, ಎಸಗು ಮೊದಲಾದ ಪದಪ್ರಯೋಗಗಳ ಬಳಕೆಯನ್ನು ನಾವಿಲ್ಲಿ ಗಮನಿಸಬೇಕು.


ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ
ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ
ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ
ಮಂಜುತರ ಸೃಷ್ಟಿಗಾನದಲಿ ಮೈಮೆರೆಯೆ
ಎಂಜಲಾಗದ ಮಧುರ ಮಧುರಸವ ಸವಿಯೆ
ರಂಜಿಸುವ ಕಾಡುಮೇಡುಗಳನಂಡಲೆಯೆ (ಹೊಸಹಾದಿ)


ಹೊಸ ಹಾದಿಯನ್ನು ಹಿಡಿಯಬೇಕೆಂಬ ಹಂಬಲವನ್ನು ವ್ಯಕ್ತಪಡಿಸುವ ಈ ಮಾತುಗಳು ಸಹ ಭಾವಾವೇಶದ ಮನೋಭಾವದ ನೆಲೆಯಿಂದಲೇ ಮೂಡಿಬಂದಿವೆ. ಅಡಿಗರ ಈ ಆವೇಶ ಉತ್ಸಾಹ ಕ್ರಮೇಣ ವ್ಯಾವಹಾರಿಕ ಜಗತ್ತಿನ ಆಕ್ರಮಣದಿಂದಾಗಿ ಆಘಾತಕ್ಕೊಳಗಾಗದಂತೆ ಕಂಡುಬರುತ್ತದೆ. ಬಾಲ್ಯದ ಮುಗ್ಧಲೋಕ, ಹದಿಹರಯದ ಹೊಂಗನಸಿನ ಜಗತ್ತು ಒಡೆದು ಛಿದ್ರವಾಗಿ ಕವಿಮನಸ್ಸು ವ್ಯಗ್ರವಾಗುತ್ತದೆ, ದಿಕ್ಕೆಡುತ್ತದೆ.


ಇಂಥ ಬಾಲ್ಯ ಕಳೆದ ಬಳಿಕ ಬಂದಾ ಹರೆಯ
ದುಲ್ಕೆಯಿದು ಥಟ್ಟನೆ ಪಳಂಚಲೆದೆಗೆ
ಅಲೆಅಲೆಗಳೆದ್ದು ಬಗೆ ಕದಡಿ ಹೋದುದು ಶಾಂತ
ಸರದೊಳಾವುದೋ ಕಲ್ಲು ಬಿದ್ದ ಹಾಗೆ

ಹಲವು ತಾನಗಳ ಸಂತಾನವಾದುದು ಮಧುರ
ನೊಳಬಾಳು; ಹರಯದೊಡ್ದೋಲಗದಲಿ
ತನೆಗೆಲ್ಲಿ ನೆಲೆ? ಬಾಳಹಾಡಿಗೆಲ್ಲಿಹುದು ಬೆಲೆ?
ಎಂದು ಮುರುಟಿದನು ತನುಮನಗಳಲ್ಲಿ (ಒಳತೋಟಿ)


ಅತ್ಯುತ್ಸಾಹ ಇಲ್ಲಿ ತಲ್ಲಣದ ದನಿಯಾಗುತ್ತದೆ. ಆವೇಶ ಹದಗೊಂಡು ನೋವು ಮನಸ್ಸನ್ನು ಆಕ್ರಮಿಸುತ್ತದೆ. ‘ತನ್ನನೆಲೆ’ಯನ್ನು ಹುಡುಕಿಕೊಳ್ಳುವ ತವಕದಲ್ಲಿ ಕವಿಮನಸ್ಸು ಅಸ್ವಸ್ಥಗೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ಸಹಜವಾಗಿ ತಂಪೆದೆಗೆ ಸಮಾಧಾನ ನೀಡಬಹುದಾದ ಪ್ರೀತಿ ಸ್ನೇಹಗಳಿಂದಲೂ ಕವಿ ವಂಚಿತರಾದಂತೆ ತೋರುತ್ತದೆ.


ಕಂಡು ಮಾತನಾಡಿ ಮೈ
ದಡವಿ ನಗಿಸಿ ನಲಿವರಿಲ್ಲ
ಬೆಂದ ಬಗೆಗೆ ಸೊದೆಯನೆರೆದು
ಕಂಬನಿಯ ತೊಡೆವರಿಲ್ಲ (ಗಾಳಿಯೊಡನೆ)


ಮಾನವ ಸಹಜ ಸಂಬಂಧಗಳಿಂದ ದೊರಕಬಹುದಾಗಿದ್ದ ಪ್ರೀತಿಯಿಂದ ವಂಚಿತರಾದ ಕವಿ ಹೇಳುತ್ತಾರೆ:


ಕಲ್ಲಾಗು ಕಲ್ಲಾಗು ಬಾಳ ಬಿರಿಗಾಳಿಯಲ್ಲಿ 
ಅಲ್ಲಾಡದೆಯೆ ನಿಲ್ಲು ಜೀವ (ಕಲ್ಲಾಗು ಕಲ್ಲಾಗು)


ಹತಾಶೆಯ ಸ್ಥಿತಿಯಲ್ಲಿ ಕವಿ ಮನಸ್ಸು ನಿಷ್ಟುರವಾಗಲು ಪ್ರಯತ್ನಿಸುತ್ತದೆ. ಇಂಥ ಸ್ಥಿತಿಯಲ್ಲಿ ಹರಯದ ಮನಸ್ಸನ್ನು ಸಹಜವಾಗಿ ಸೆಳೆಯಬಹುದಾಗಿದ್ದ ಹೆಣ್ಣಿನ ಸ್ನೇಹ ಕವಿಗೆ ಕಪಟವೆನಿಸುತ್ತದೆ. ಕವಿ ಅನುಭವಿಸುವ ಈ ಹತಾಶ ಸ್ಥಿತಿ ಸ್ವಾನುಕಂಪೆಯಾಗಿ ಕರುಣಾಜನಕ ಸ್ಥಿತಿ ತಲುಪದೆ, ತನ್ನನ್ನು ತಾನು ಅರ್ಥಮಾಡಿಕೊಳ್ಳುವ ಸಾಧನವಾಗಿ, ಏಕಾಗ್ರತೆಗೆ ಧ್ಯಾನಕ್ಕೆ ಹಿನ್ನೆಲೆಯಾಗಿ ನಿಲ್ಲುವಲ್ಲಿ ಅಡಿಗರ ಕಾವ್ಯದ ಸತ್ವವಿದೆ. ಈ ಹಂತದಲ್ಲಿ ಅಡಿಗರ ಕಾವ್ಯ ‘ಬಗೆಯೋಳಗನೇ ತೆರೆದು ನೋಡುವ’ ರೀತಿಯದಾಗುತ್ತದೆ.


ಒಲವೆಯೆಂದು ನಲವೆಯೆಂದು ನಾವು ಹುಸಿಯ ಮುಸುಕನು
ತೊಡಿಸಿ ನಿಜಕೆ ಮೆರೆವೆವು
ಒಲವು ಸುಳ್ಳು ನಲವು ಜಳ್ಳು ನಮ್ಮ ನಾವೆ ವಂಚಿಸುವೆವು
ಇಲ್ಲದುದನೆ ಹೊರೆವೆವು
ನಾನೆ ನನ್ನ ನಲ್ಲ ನಲ್ಲೆ ಒಲುಮೆ ಸಂಭ್ರಮ
ಉಳಿದುದೆಲ್ಲ ವಿಭ್ರಮ (ಬಿಡುಗಡೆಯ ಹಾಡು)


ಎಂದು ಹೇಳುವಲ್ಲಿ ಕವಿ ಪ್ರೀತಿ-ಸ್ನೇಹಗಳ ಬದುಕನ್ನು ಭ್ರಮೆಯೆಂದು ಕರೆದು ಅದನ್ನು ನಿರಾಕರಿಸುತ್ತಾರೆ. ಅಷ್ಟೇ ಅಲ್ಲ ಇವುಗಳಿಂದೆಲ್ಲ ದೂರ ಹೋಗಲು ಬಯಸುತ್ತಾರೆ:

ಓಡಲೆಳಸುತಿಹುದು ಜೀವ ದೂರ ದೂರ ಜನವಿದೂರ
ವಿಪಿನದೆಡೆಗೆ (ಓಡಲೆಳಸುತಿಹುದು)


ಸ್ನೇಹ-ಪ್ರೀತಿ, ಕೋಪ-ತಾಪ, ಅಳು-ನಗು ಎಲ್ಲವನ್ನೂ ನಿರಾಕರಿಸಿ ಜನವಿದೂರ ಹೋಗಬಯಸುವ ಈ ಕಾವ್ಯ ಬದುಕನ್ನೇ ನಿರಾಕರಿಸುವಂಥದಾಗಿ ತೋರುವುದು ಮೇಲ್ನೋಟಕ್ಕೆ ಸಹಜ. ಆದರೆ ಮೇಲ್ಪದರದ ಈ ಆಕ್ರೋಶದ ಹಿಂದಿನ ಆಳವಾದ ವಿಷಾದ ವಾಸ್ತವ ಬದುಕಿನ ಸ್ವೀಕರಣೆಯ ಕಡೆ ಮುಖಮಾಡಿದೆ. ಬದುಕಿನಲ್ಲಿ ಹಿರಿಯಾಸೆ ಹೊತ್ತ ಮಹತ್ವಾಕಾಂಕ್ಷೆಯ ಕವಿ ಮೋಹದ ಸುಳಿಯೊಳಗೆ ಸಿಲುಕಬಾರದೆಂಬ ಎಚ್ಚರದಿಂದ ಇವೆಲ್ಲವನ್ನೂ ಮೀರಲು ಬಯಸುತ್ತಾರೆ. ಕವಿಯ ಈ ಮಹತ್ವಾಕಾಂಕ್ಷೆ ಉನ್ನತವಾದುದ್ದನ್ನು ತನ್ನದಾಗಿರಿಸಿಕೊಳ್ಳಬೇಕೆಂಬ ಬಯಕೆ – ಇದರಿಂದಾಗಿ ಅಡಿಗರ ಕಾವ್ಯ ದೈನಿಕ ಸಹಜ ವಿವರಗಳಿಂದ, ಬದುಕಿನ ವೈವಿಧ್ಯದಿಂದ, ಕೌಟುಂಬಿಕ ಜಗತ್ತಿನಿಂದ ವಂಚಿತವಾಗುತ್ತದೆ. ದಿನನಿತ್ಯದ ನೋವು, ನಲಿವು, ಉತ್ಸಾಹ, ಚೆಲುವು ಇವೆಲ್ಲವೂ ಅವರ ಕಾವ್ಯದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಕವಿ ಬದುಕಿನ ಸ್ನೇಹ, ಪ್ರೀತಿ, ಚೆಲುವು, ಒಲವುಗಳಿಗೆ ಜಡರೇನೂ ಅಲ್ಲ. ಅವರ ಮನಸ್ಸು ಅದರಿಂದ ಮುದಗೊಳ್ಳುತ್ತದೆ. ಆದರೆ ಒಟ್ಟು ಕಾವ್ಯದ ಸಂದರ್ಭದಲ್ಲಿ ಅಂಥ ಕವಿತೆಗಳು ಅಮುಖ್ಯವಾಗುತ್ತವೆ. ಅಡಿಗರದು ಮುಖ್ಯವಾಗಿ ಧ್ಯಾನರೂಪೀ ಮನಸ್ಸು. ಅವರದೇ ಮಾತಿನಲ್ಲಿ ಹೇಳುವುದಾದರೆ – ‘ಹುತ್ತಗಟ್ಟಿದ ಚಿತ್ತ’.

ಬದುಕಿನಲ್ಲಿ ತಾನು ಅನುಭವಿಸಿದ ನೋವು, ಅಪಮಾನ, ಪ್ರೀತಿಯ ಕೊರತೆ-ಸ್ವಭಾವತಃ ಅಂತರ್ಮುಖಿಯಾದ ಕವಿಯನ್ನು ಮತ್ತಷ್ಟು ಅಂತರ್ಮುಖಿಯಾಗುವಂತೆ ಮಾಡುತ್ತವೆ. ಆದರೆ ಈ ಅಂತರ್ಮುಖತೆ ಹೊರಜಗತ್ತಿನ ಜೊತೆ ಸಂಪರ್ಕ ಕಡಿದುಕೊಳ್ಳದೆ, ಅದನ್ನು ಅರ್ಥಮಾಡಿಕೊಳ್ಳುವ ಸಮರ್ಥ ರೀತಿಯಲ್ಲಿ ಅಡಿಗರ ಕಾವ್ಯ ರೂಪುಗೊಳ್ಳುತ್ತದೆ. ಆದ್ದರಿಂದಲೇ ಅಡಿಗರ ನಂತರದ ಕಾವ್ಯ ಏಕಕಾಲಕ್ಕೆ ವೈಯಕ್ತಿಕವೂ ಸಾಮಾಜಿಕವೂ ಆಗಿಬಿಡುತ್ತದೆ.

ಅನ್ಯರೊಳು ಲೋಪದೋಷಗಳ ಬೆದಕಲು ಬೆದರಿ
ತನ್ನೆದೆಯನೇ ಗುಡಿಸಲನುವಾದನು (ಒಳತೋಟಿ)

ಈ ಸ್ವವಿಮರ್ಶೆ ಅಡಿಗರ ಕಾವ್ಯದ ಪ್ರಧಾನವಾದ ಅಂಶ. ತನ್ನನ್ನು ಅರ್ಥಮಾಡಿಕೊಳ್ಳುತ್ತಲೇ ಸಮಾಜವನ್ನೂ, ಬದುಕನ್ನೂ ಅರ್ಥಮಾಡಿಕೊಳ್ಳುವ ಕ್ರಮ-ಅಡಿಗರ ಕಾವ್ಯರೀತಿ. ಅವರ ಆರಂಭದ ಕವಿತೆಗಳನ್ನು ವೈಯಕ್ತಿಕ-ಸಾಮಾಜಿಕ ಕವಿತೆಗಳೆಂದು ಸರಳವಾಗಿ ವಿಭಾಗಿಸುವುದು ಸಾಧ್ಯ. ಆದರೆ ನಂತರದ ಕವಿತೆಗಳು ಈ ರೀತಿಯ ಸರಳ ವಿಂಗಡಣೆಗೆ ಸಿಕ್ಕದಂಥವು.


ಮರೆತುಬಿಡಲೊ ಮಗುವೆ ನಿನ್ನ ಒಲವಿನಂಗಭಂಗವ
ತೆರೆಯೋ ಅಂತರಂಗವ

ಅಲ್ಲಿ ಹುಡುಕು ಕಳಚಿಬಿದ್ದ ನಿನ್ನ ಜೀವರತ್ನವ
ತನ್ನತನದ ಸತ್ವವ

ಸಿಕ್ಕಿರಬಹುದು, ಸಿಕ್ಕದಿದ್ದರೇನು? ಹುಡುಕಾಟವೇ
ಅದರ ದಿವ್ಯಪಾರವೇ

ಎದೆಗೆ ಬಲವ ಮಾತೆಗೆ ಧೃತಿಯ ಬಾಳಿಗೊಂದು ಶಾಂತಿಯ
ನೀಡಬಹುದು ಕಾಂತಿಯ (ಬಿಡುಗಡೆಯ ಹಾಡು)

ಬಗೆ ತೆರೆದು ನೋಡುವ, ತನ್ನತನದ ಸತ್ವವನ್ನು ಕಂಡುಕೊಳ್ಳುವ ಮನೋಭಾವ ಮೊದಲ ಕವಿತೆ ‘ನನ್ನ ನುಡಿ’ಯಲ್ಲಿಯೇ ಪ್ರಕಟವಾಗಿದ್ದರೂ, ಇಲ್ಲಿ ಅದು ಹರಳುಗಟ್ಟುತ್ತದೆ. ಕವಿಗೆ ಇಲ್ಲಿ ಗುರಿಯ ಜೊತೆಗೆ ಪ್ರಕ್ರಿಯೆಯೂ ಮುಖ್ಯ. ಗುರಿಯತ್ತ ಸಾಗುವುದೇ, ಆ ಹುಡುಕಾಟವೇ ಅರ್ಥಪೂರ್ಣವಾದುದೆಂದು ಕವಿ ನಂಬುತ್ತಾರೆ. ಅಡಿಗರ ಮುಂದಿನ ಕಾವ್ಯವೆಲ್ಲ ಆ ‘ಹುಡುಕಾಟವೇ’ ಆಗಿದೆ. ಹೀಗಾಗಿ ಅವರ ಕಾವ್ಯದಲ್ಲಿ ವೈವಿಧ್ಯ ವಿಸ್ತಾರ ಇಲ್ಲದಂತಾಯಿತು. ಆದರೆ ಆಳ ಲಭ್ಯವಾಯಿತು. ಈ ಹಂತದಲ್ಲಿ ಅವರ ಅಂತರಂಗದಲ್ಲಿ ಒಂದು ಬಗೆಯ ಕ್ರಾಂತಿ ನಡೆದು ಅವರ ಕಾವ್ಯ ಸಂಪೂರ್ಣವಾಗಿ ಹೊಸ ರೂಪ ತಾಳಿತು. ಈ ಹಂತದ ಅವರ ಕಾವ್ಯಕಲ್ಪನೆಯನ್ನು ಅಡಿಗರೇ ಹೀಗೆ ವಿವರಿಸಿದ್ದಾರೆ.

೧ ಮೇಲ್ಪದರುಗಳನ್ನಷ್ಟೇ ಒಳಗೊಳ್ಳುವ ಹಾಗೆ ಕಾವ್ಯರಚನೆಯಾದರೆ ಉತ್ತಮ ಕಾವ್ಯ ಸಿದ್ಧಿಸುವುದಿಲ್ಲ. ಪ್ರಜ್ಞೆಯ ಜೊತೆಗೆ ಪ್ರಜ್ಞೆಯ ತಳದಲ್ಲಿ ಅಥವಾ ಅದರ ಮೇಲಕ್ಕೆ ಇರುವ ಎಲ್ಲ ಒಳ ಅಂಶಗಳೂ ಹಠಾತ್ತಾಗಿ ಸೇರಿದರೆ ಉತ್ತಮ ಕಾವ್ಯ ಆಗುತ್ತದೆ. ಇದಕ್ಕೆ ನಿರಂತರ ಶ್ರಮ ಹೇಗೋ ಹಾಗೇ ಅಸಾಧಾರಣವಾದ ತಾಳ್ಮೆಯೂ ತಕ್ಕ ಮುಹೂರ್ತಕ್ಕಾಗಿ ಕಾಯುವುದೂ ಅಗತ್ಯ.

೨. ಸಾಧಿಸಬೇಕಾದದ್ದು ಇತರರಿಗೆ ಮನೋರಂಜಕವಾಗುವ ಅಭಿವ್ಯಕ್ತಿಯನ್ನಲ್ಲ. ತನಗೆ ಅತ್ಯಂತ ಸಜವಾದುದನ್ನು, ಆಡುವ ಮಾತು ಅಂತರನುಭವಾದ ತದ್ರೂಪು ಆಗುವ ಹಾಗೇ, ಕವಿಯ ವ್ಯಕ್ತಿ ವಿಶೇಷವನ್ನು ತೆರೆಯುವ ಹಾಗೆ. 

ಈ ಹಿನ್ನೆಲೆಯಲ್ಲಿ ಕವಿ ವ್ಯಕ್ತಿತ್ವದ ಒಳಹೊರಗುಗಳನ್ನು ಒಂದೇ ಬಿಂದುವಿನಲ್ಲಿ ಹಿಡಿಯುವ ಪ್ರಯತ್ನಕ್ಕೆ ತೊಡಗುತ್ತಾರೆ. 

ಅಡಿಗರ ಕಾವ್ಯದುದ್ದಕ್ಕೂ ಕಂಡುಬರುವ ಪ್ರಧಾನ ಅಂಶಗಳಲ್ಲೊಂದು ಭೂಮಿ ಆಕಾಶಗಳ ಸೆಳೆತಕ್ಕೆ ಸಿಕ್ಕ ಮಾನವನ ಸ್ಥಿತಿ. ಇದು ದೇಹ-ಮನಸ್ಸುಗಳ ಸಂಘರ್ಷವೂ ಹೌದು; ಆದರ್ಶ ವಾಸ್ತವಗಳ ನಡುವಿನ ತಿಕ್ಕಾಟವೂ ಹೌದು. “ಇಲ್ಲಿ ಭೂಮಿಯೆಂದರೆ ಪ್ರಥ್ವಿ ಎಂದಷ್ಟೇ ತಿಳಿಯಬಾರದು. ಇಹ ಇಲ್ಲಿಯದು, ಈ ನಾಗರೀಕತೆ, ಈ ನಾಗರೀಕತೆಯ ಎಲ್ಲ ವಿಪರ್ಯಾಸಗಳನ್ನೂ ಒಳಗೊಂಡದ್ದು ಎಂದು ತಿಳಿಯಬೇಕು.”

ಎತ್ತರೆತ್ತರಕ್ಕೆ ಏರುವ ಮನಕೂ
ಕೆಸರ ಲೇಪ ಲೇಪ
ಕೊಳೆಯ ಕೊಳಚೆಯಲ್ಲಿ ಮುಳುಗಿ ಕಂಡನೋ
ಬಾನಿಗೊಂದು ಪೆಂಪ (ಇದು ಬಾಳು)

ಆದರ್ಶ ಸಾಧನೆಯ ಧ್ರುವತಾರೆಯೊಂದು ಬಾ
ನಂಗಳದಿ ನಿಂತು ಕೈಮಾಡಿ ಕರೆಯುತಿಹುದು
ವಿಷಯ ಸುಖದಾಸೆ ಕಾರ್ಮುಗಿಲಾಗಿ ಹಗೆಯಾಗಿ
ದೃಷ್ಟಿಯನು ನೆಲದೆಡೆಗೆ ದೂಡುತಿಹುದು (ಒಳತೋಟಿ)

ಅನೇಕ ಕವಿತೆಗಳಲ್ಲಿ ಮತ್ತೆ ಮತ್ತೆ ವ್ಯಕ್ತವಾಗುವ ಈ ಸಂಘರ್ಷ, ನೆಲಮುಗಿಲಿನ ಸೆಳೆತ ಸೇ೦ದ್ರಿಯವಾಗಿ ಅಭಿವ್ಯಕ್ತಿ ಪಡೆಯುವುದು ‘ಮೋಹನ ಮುರಲಿ’ ಕವಿತೆಯಲ್ಲಿ. ಅಡಿಗರ ಕಾವ್ಯ ಬೆಳವಣೆಗೆಯಲ್ಲಿ ಇದು ಮುಖ್ಯ ಕವಿತೆ. ಲೌಕಿಕ ಸುಖದಲ್ಲಿ ತೃಪ್ತಿ ಪಡೆದಿದ್ದ ಮನಸ್ಸು ಅಲೌಕಿಕದ ಸೆಳೆತಕ್ಕೆ ಒಳಗಾಗಿರುವ ಚಿತ್ರವನ್ನು ಈ ಕವಿತೆ ಸೊಗಸಾಗಿ ಚಿತ್ರಿಸುತ್ತದೆ. ಇದಿಷ್ಟೇ ಕವಿತೆಯ ಆಶಯವಾಗಿದ್ದರೆ ‘ಮೋಹನ ಮುರಲಿ’ ಮಹತ್ವದ್ದಾಗುತ್ತಿರಲಿಲ್ಲ.

ಇರುವುದೆಲ್ಲವ ಬಿಟ್ಟು ಇರದುರೆಡೆಗೆ ತುಡಿವುದೆ ಜೀವನ 
(ಮೋಹನ ಮುರಲಿ)

ಅಲೌಕಿಕ ಹಂಬಲದ ಉತ್ಕಟ ಕ್ಷಣದಲ್ಲಿಯೇ ಕವಿಗೆ ಈ ಪ್ರಶ್ನೆಯೂ ಮೂಡುತ್ತದೆ. ಇಹದ ಬಿಡುಗಡೆಯ ಸುಖದ ಹಂಬಲವನ್ನು ತೀವ್ರವಾಗಿ ಚಿತ್ರಿಸುವಂತೆಯೇ ಇಲ್ಲಿಯ ‘ಬಂಧನ’ದ ಪ್ರಿಯ ಅನುಭವವನ್ನೂ ಕವಿತೆ ದಟ್ಟವಾಗಿ ಚಿತ್ರಿಸುತ್ತದೆ. ಇವೆರಡರ ಸಂಘರ್ಷದಲ್ಲಿ ಕವಿತೆ ಪ್ರಾಮಾಣಿಕವೂ, ಶೋಧಕವೂ ಆಗುತ್ತದೆ.

ಮುಗಿಲಿನ ಹಂಬಲ ಸಹಜ ನಿಜ. ಈ ಹಂಬಲ ಬದುಕಿನಾಚೆ ಫಲಿಸುವಂಥದಲ್ಲ; ಈ ಬದುಕಿನಲ್ಲೇ ಆವಿಷ್ಕಾರವಾಗಬೇಕಾದುದು-ಇದು ಅಡಿಗರ ನಿಲುವು.

ಮರ್ತ್ಯಜೀವದ ತರುವೊಳುಮರತೆಯ ಫಲ ತನಗೆ
ಸಿಕ್ಕಬೇಕೆಂದವನು ಭಾವಿಸಿದನು (ಒಳತೋಟಿ)

ಮರ್ತ್ಯದಲ್ಲಿಯೇ ಅಮರತೆಯ ಫಲಿಸಬೇಕೆಂಬುದು ಅಡಿಗರ ಕಾವ್ಯದರ್ಶನ. ಆದ್ದರಿಂದಲೇ ಕವಿ ಬಾನಿನೂರಿನಲ್ಲಿ ನೆಲಸಿರುವ ಒಕ್ಕಲನು ಈ ನೆಲಕ್ಕೆ ಆಹ್ವಾಸಿಸುತ್ತಾರೆ (ಅತಿಥಿಗಳು). ಕ್ಷಣ ಬಂದು ಮಿಂಚಿ ಮರೆಯಾಗುವ ಅನೂಹ್ಯ ಅತಿಥಿಗಳನ್ನು ಇಲ್ಲೇ ನೆಲೆನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಈ ಮಣ್ಣಿನ ಮನದಲ್ಲಿ ಹೊನ್ನನ್ನು ಬೆಳೆಯಬಲ್ಲಂಥ ಅಪೂರ್ವ ತೇಜದ ಮಾಂತ್ರಿಕರನ್ನು ಕವಿ ಆಹ್ವಾನಿಸುತ್ತಾರೆ.

ಅಡಿಗರ ಈ ಶೋಧನೆ – ಮರ್ತ್ಯದಲ್ಲಿಯೇ ಅಮರತೆಯ ಫಲ ಸಾಧಿಸುವ ಶೋಧನೆ-ಉದ್ದಕ್ಕೂ ಆತ್ಮಶೋಧನೆಯಾಗಿಯೇ ಬೆಳೆಯುತ್ತ ಹೋಗುತ್ತದೆ. ಈ ನೆಲದಲ್ಲಿಯೇ ಹುಟ್ಟಿದ ರಾಮ, ಕೃಷ್ಣ, ಬುದ್ಧ, ಗಾಂಧಿ ದೊಡ್ಡವರಾದರು, ಮಹಾತ್ಮರಾದರು. ನಾನು ಮಾತ್ರ ಹಾಗೆಯೇ ಉಳಿದೆನೇಕೆ?

ನಾನು ಅವನು ಒಂದೆ ಲೋಹ
ಕಬ್ಬಿಣ-ಕರಿ ಕಬ್ಬಿಣ
ಯಾವ ರಸವು ಸೋಂಕಿತವನ?
ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ;
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ (ನನ್ನ ಅವತಾರ)

ಕಬ್ಬಿಣ್ಣ ಚಿನ್ನವಾಗಿ ರೂಪುಗೊಂಡ ಬಗೆ ವ್ಯಕ್ತಿತ್ವ ಮಾಗಬೇಕಾದ ರೀತಿಯನ್ನು ಹೇಳುತ್ತದೆ. ಇದು ಹೇಗೆ ಸಾಧ್ಯ? ಯಾವ ಸಿದ್ಧ ಮಾರ್ಗದರ್ಶನವೂ ಈತನ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಈತನನ್ನು ಕರೆದುಕೊಂಡು ಹೋಗಬೇಕಾಗಿದ್ದ ರೈಲು ಈತ ಕಾಯುತ್ತಿದ್ದ ನಿಲ್ದಾಣಕ್ಕೆ ಬರುವುದೇ ಇಲ್ಲ. (ಹಿಮಗಿರಿಯ ಕಂದರ) ನಿಲ್ದಾಣಕ್ಕೂ, ರೈಲಿಗೂ ನಡುವೆ ಬಿರುಕು ಬಿಟ್ಟಿದೆ. ಇಂದ್ರಿಯ ಜೀವನಕ್ಕೂ, ಅಲೌಕಿಕದ ಆಕರ್ಷಣೆಗೂ ನಡುವೆ ಬಿರುಕು ಉಂಟಾದ ಸ್ಥಿತಿಯಲ್ಲಿ ಅವನಿಗನ್ನಿಸುತ್ತದೆ –

ಇವಳೆದೆಗೆ ಬೇರಿಳಿದ ಕಾಲು ನನ್ನದು
ಬರಿದೆ ನಕ್ಷತ್ರ ಲೋಕಕ್ಕೂ ರೈಲುಬಿಟ್ಟೆ (ಭೂಮಿಗೀತ)

ಹಿಡಿದ ಗುರಿ ಸಾಧಿಸಬೇಕೆಂಬ ಹಟದಲ್ಲಿ ಕವಿ ಮನಸ್ಸು ಮತ್ತೆ ಮತ್ತೆ ಜಿಜ್ಞಾಸೆಗೊಳಗಾಗುತ್ತದೆ. ತನ್ನ ಇಡೀ ವ್ಯಕ್ತಿತ್ವವನ್ನು ಪಣಕ್ಕೊಡಿ ಕವಿ ಶೋಧನೆಗೆ ತೊಡಗುತ್ತಾರೆ. ಗುರಿ ಸಾಧಿಸಬೇಕಾದರೆ ತನ್ನ ಒಟ್ಟು ವ್ಯಕ್ತಿತ್ವದಲ್ಲೇ, ಒಟ್ಟು ಜೀವನದಲ್ಲೇ ಸಾರ್ಥಕ ಮಾರ್ಪಾಟಾಗಬೇಕು ಎಂಬ ಅರಿವು ಮೂಡುತ್ತದೆ. ಅದಕ್ಕಾಗಿ ಕವಿ ಪ್ರಾರ್ಥಿಸುತ್ತಾರೆ:

ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು
ಹೊತ್ತಿನ ಮುಖಕ್ಕೆ ಶಿಖೆ ಹಿಡಿವುದನ್ನು, ಹಾಗೇ
ಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನೂ
ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದು
ಬರಲಿ ಪರಿಪೂರ್ಣಾವತಾರಿ ವಿನತ ಪುತ್ರ (ಪ್ರಾರ್ಥನೆ)

ವಿನತೆಯ ಅವಸರದಲ್ಲಿ ತೊಡೆ ಹೊರೆಯದೆ ಹುಟ್ಟಿದ ಅರ್ಧಾವತಾರಿ ಅರುಣನಂತಾಗದೆ ಪರಿಪೂರ್ಣಾವತಾರಿ ಗರುಡನಂತಾಗಬೇಕೆಂದು ಕವಿಯ ಪ್ರಾರ್ಥನೆ. ಈ ವಿವೇಕದ ಪ್ರಾರ್ಥನೆ ಜೀವನತತ್ವವೂ ಹೌದು; ಕಾವ್ಯ ದರ್ಶನವೂ ಹೌದು. ಅನಂತಮೂರ್ತಿಯವರು ಹೇಳುವ ಹಾಗೆ ‘ಪ್ರಾರ್ಥನೆ’ ಅಡಿಗರ ಒಟ್ಟು ಕಾವ್ಯದ ಮ್ಯಾನಿಫೆಸ್ಟೋ ಎನ್ನಬಹುದು.

ಈ ಪ್ರಾರ್ಥನೆ ಸಾಕಾರವಾಗಲು, ಬದುಕನ್ನು ನಿಜವಾಗಲು – ಪರಂಪರೆಯ ಸತ್ವವನ್ನೂ, ಅಂತಃಶಕ್ತಿಯನ್ನೂ, ಕನಸು-ವಾಸ್ತವಗಳ ಹಠಾತ್ ಸಂಯೋಗವನ್ನೂ ವರ್ತಮಾನದಲ್ಲಿ ಸಾರ್ಥಕಪಡಿಸಿಕೊಳ್ಳಬೇಕಾದ ಅಗತ್ಯವನ್ನು ಕವಿ ಮನಗಾಣುತ್ತಾರೆ. 

ಅಗೆವಾಗ್ಗೆ ಮೊದಲ ಕೋಶಾವಸ್ಥೆ ಮಣ್ಣು
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ
ವಿಗ್ರಹಕ್ಕೊಗಿಸುವ ಅಸಲು ಕಸಬು (ಭೂತ)

“ರೂಢಿಯಾದದ್ದರ ಒಳಹೊಕ್ಕು ಸಿಡಿಮದ್ದಿನ ಹಾಗೆ ಸ್ಫೋಟಿಸಿ ಅದನ್ನು ಅಸ್ತವ್ಯಸ್ತಗೊಳಿಸದೆ ಹೊಸ ಕಾಲದ, ಹೊಸ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದಕಾರಣ ಯಾಂತ್ರಿಕ ವ್ಯವಸ್ಥೆಯಲ್ಲಿ ಸೇರಿದ ನಮ್ಮ ಸಂಸ್ಕೃತಿಯ ಮೌಲ್ಯಗಳ ತಿರುಳನ್ನು ಭೇದಿಸಿ ಮೂಲಬೀಜಗಳನ್ನು ಹೊರತೆಗೆದು ಅದಕ್ಕೆ ಇಂದಿನ ತಕ್ಕ ರೂಪಗಳನ್ನು ಸಿದ್ಧಪಡಿಸುವುದೇ ಬುದ್ಧಿಯ ಮೂಲಕ ಕೆಲಸ ಮಾಡುವವನ ಕರ್ತವ್ಯ”

ಹೀಗೆ ತನ್ನ ಇಷ್ಟದೇವತಾ ವಿಗ್ರಹವನ್ನು ರೂಪಿಸಿಕೊಳ್ಳಲು ಸಹಜವಾಗಿಯೇ ವಿಶೇಷ ಸಾಮರ್ಥ್ಯಬೇಕು, ಶ್ರದ್ಧೆಬೇಕು, ಸಂಕಲ್ಪಬಲ ಬೇಕು. ಸಕಲ್ಪಬಲದಿಂದ ಮಾತ್ರ ವ್ಯಕ್ತಿ ಔನ್ನತ್ಯವನ್ನು ಸಾಧಿಸುವುದು ಸಾಧ್ಯ. ಸಾಮಾನ್ಯವಾಗಿ ಹುಟ್ಟಿದ ರಾಮ ಈ ನೆಲದ ಪ್ರಜ್ಞೆಯನ್ನು ಹೀರಿನಿಂತು ಸಂಕಲ್ಪಬಲದಿಂದ ಉನ್ನತ ಚೇತನವಾಗಿ ಬೆಳೆದುನಿಂತ; ಅಂತರಂಗ ಪರಿವೀಕ್ಷಣೆಯ ಅಗ್ನಿದಿವ್ಯದಲ್ಲಿ ತನ್ನನ್ನು ತಾನು ಕಂಡುಕೊಂಡು ಪುರುಷೋತ್ತಮನಾದ.

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪರೇಷೆ (ಶ್ರೀರಾಮನವಮಿಯ ದಿವಸ)

ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಪುರುಷೋತ್ತಮನಾಗಿ ಬೆಳೆದ ರಾಮನ ಬದುಕಿನಲ್ಲಿ, ಆತನ ವ್ಯಕ್ತಿತ್ವ ವಿಕಾಸ ಕ್ರಮದಲ್ಲಿ ಅಡಿಗರಿಗೆ ಆಸಕ್ತಿ; ಕಪಿಚೇಷ್ಟೆಯ ವ್ಯಕ್ತಿ ತನ್ನಲ್ಲೇ ಹತ್ತಿ ಉರಿದು ಹನುಮನ ಚೇತನವನ್ನು ಒಳಗೊಳ್ಳುವುದು ಸಾಧ್ಯವೆಂದು ಅವರ ನಂಬುಗೆ (ವರ್ಧಮಾನ) . ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸವಾಗಬೇಕು. ಉನ್ನತ ಚೇತನವಾಗಿ ರೂಪುಗೊಳ್ಳಬೇಕು – ಇದೇ ಅಡಿಗರ ದರ್ಶನ.

“ಅಡಿಗರ ದೃಷ್ಟಿಯಲ್ಲಿ ಸಮಾಜದ ಮೂಲ ಘಟಕ ವ್ಯಕ್ತಿ. ಯಾವ ಬಂಡಾಯವಾಗುವುದಿದ್ದರೂ ಅದು ವ್ಯಕ್ತಿಯಲ್ಲಿ. ಈ ಬಂಡಾಯದ ಕಲ್ಪನೆ ಕೂಡ ವಿಶಿಷ್ಟವಾದದ್ದು. ಸೃಷ್ಟಿಯಲ್ಲಿನ ಪ್ರತಿಯೊಂದು ಚೇತನವೂ ಬೆಲೆಯುಳ್ಳದ್ದು, ಮುಂದೆ ವಿಕಾಸಗೊಂಡು ಪರಿಪೂರ್ಣಾವಸ್ಥೆಗೆ ಸಲ್ಲಬಹುದು ಸ್ವವಿಶಿಷ್ಟವಾದ ಶೀಲದ್ರವ್ಯವೇನನ್ನೋ ಪಡೆದು ಬಂದಿರುವಂಥದ್ದು. ಅದನ್ನು ಕಂಡುಕೊಳ್ಳುವುದೇ, ಬೆಳೆಸಿಕೊಳ್ಳುವುದೇ, ಫಲಾವಸ್ಥೆಗೆ ಮುಟ್ಟಿಸುವುದೇ ಬದುಕಿನ ಗುರಿ. ಅದೇ ನಿಜವಾದ ಸ್ವಸ್ವರೂಪ ದರ್ಶನ, ಆತ್ಮ ಸಾಕ್ಷಾತ್ಕಾರ.”

“ಮಾನವನ ಹೆಚ್ಚಳ ಅವನ ವ್ಯಕ್ತಿತ್ವದ ವಿಕಾಸದಲ್ಲಿದೆ. ಪ್ರತಿಯೊಬ್ಬರ ವ್ಯಕ್ತಿತ್ವ ಬದುಕಲ್ಲಿ ಪ್ರತ್ಯಕ್ಷವಾದರೆ, ಬದುಕಿಗೆ ವಿವಿಧತೆ ಬರುತ್ತದೆ. ಸಮಾಜ ಈ ವ್ಯಕ್ತಿತ್ವದ ಪ್ರತ್ಯಕ್ಷತೆಗೆ ವಿರೋಧವಾಗಿ ಅಡಚಣೆಗಳನ್ನು ಒಡ್ಡುತ್ತಲೇ ಇರುತ್ತದೆ. ಅದಕ್ಕಾಗಿ ಸತತ ಬಂಡಾಯ ಮಾಡಬೇಕು. ಅಲ್ಲದೆ, ಅಡಿಗರ ಮಾಗಿದ ದೃಷ್ಟಿಯಲ್ಲಿ ಕ್ರಾಂತಿ ವೈಯಕ್ತಿಕವಾಗಿಯೇ ಆಗಬೇಕು. ಮಂದೆ ಜೊತೆ-ಕ್ರಾಂತಿ ಮಾಡುವುದು ನಿರರ್ಥಕವಷ್ಟೇ ಅಲ್ಲ, ಅದು ಬೇಕು – ಬೇಡಗಳನ್ನು ದಾಟಿ, ದಬ್ಬಾಳಿಕೆಯಲ್ಲಿ, ಪೀಡಕ ರಾಜ್ಯದಲ್ಲಿ ಕೊನೆಯಾಗುತ್ತದೆ. ಈ ಸತ್ಯ ನಮಗೆ ಕಾಣುವ ಹಾಗೆ, ಸ್ಪರ್ಶದ ಅನುಭವಕ್ಕೆ ಬರುವ ರೀತಿಯಲ್ಲಿ ಅಡಿಗರ ರೂಪಕಗಳಲ್ಲಿ ಅವತರಿಸುತ್ತದೆ. ನಿಜವಾದ ಪ್ರಜಾರಾಜ್ಯದಲ್ಲಿ ಪ್ರತಿಯೊಬ್ಬನಿಗೂ ತನಗೆ ಸಿಕ್ಕ ಸಿಂಹಾಸನವಿದೆ. ಅದನ್ನು ದೊರಕಿಸಿಕೊಳ್ಳಬೇಕು, ದಂಗೆ ಮಾಡಿ, ಚಿನ್ನ, ಮಣ್ಣು ಮರದ್ದಾಗಬಹುದು ಸಿಂಹಾಸನ – ಡೆಮಾಕ್ರಸಿಯಲ್ಲಿ ಪ್ರತಿ ಪ್ರಜೆಯೂ ರಾಜ. ಈ ಅರ್ಥವನ್ನು ಅಡಿಗರು ಎಷ್ಟು ಸೊಗಸಾಗಿ ಚಿತ್ರಿಸುತ್ತಾರೆ.”

ದಂಗೆಯೇಳಬೇಕಾಗುತ್ತಲೇ ಇರುತ್ತದೆ
ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ (ಬಂಡಾಯ)

ವ್ಯಕ್ತಿತ್ವದ ಸಿದ್ಧಿ ಸಿದ್ಧಿಸುವವರೆಗೆ ಈ ಬಂಡಾಯ ನಿರಂತರ, ಹೋರಾಟ ಅನಿವಾರ್ಯ.

ಅಂತರಂಗದ ಶೋಧನೆಯಂತೆಯೇ ಬಹಿರಂಗದ ತಿಳುವಳಿಕೆಯೂ ವ್ಯಕ್ತಿತ್ವ ವಿಕಾಸದ ಮುಖ್ಯ ಆಯಾಮ. ‘ಪರಿಪೂರ್ಣತೆ’ ಒಳಹೊರಗು’ಗಳ ಸಂಯೋಗದಲ್ಲಿ. ಈ ವೈಯಕ್ತಿಕ – ಸಾಮಾಜಿಕ ಏಕತ್ರ ಬಿಂದುವಿನ ಮತ್ತೊಂದು ಮಜಲು – ‘ಚಿಂತಾಮಣಿಯಲ್ಲಿ ಕಂಡ ಮುಖ’. ‘ಕೂಪ ಮಂಡೂಕ’ದಲ್ಲಿ ತನ್ನೊಳಗಿನ ಚೇತನವನ್ನು ಗೆಳೆಯನೆಂದು ಕರೆದ ಅಡಿಗರು ಅದೇ ಚೇತನವನ್ನು ಇಲ್ಲಿ ಸಭೆಯ ಮಧ್ಯೆ ಸಾಮಾಜಿಕವಾಗಿ ಗುರುತಿಸುತ್ತಾರೆ. ವ್ಯಕ್ತಿತ್ವ ವಿಕಾಸದ ಹಾದಿಯಲ್ಲಿ ತನ್ನ ಮುಖವನ್ನೂ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ದರ್ಶನ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮುಖ್ಯ ಹಂತವೆನ್ನಬಹುದು. 

ಇಡೀ ಮಾನವ ಜನಾಂಗದ ಇತಿಹಾಸವನ್ನೂ ಸಮಕಾಲೀನ ಸ್ಥಿತಿಯನ್ನೂ ಭಿತ್ತಿಯಾಗುಳ್ಳ ಅಡಿಗರ ಕಾವ್ಯ ‘ವ್ಯಕ್ತಿತ್ವ ವಿಕಾಸದ ಹೋರಾಟ’ವನ್ನು ಚಿತ್ರಿಸುವ ಮಹಾಕಾವ್ಯವಾಗಿದೆ.
ನರಹಳ್ಳಿ ಬಾಲಸುಬ್ರಮಣ್ಯ

No comments:

Post a Comment