ಪಿಟೀಲು ವಾದನದಲ್ಲಿ ದೇಶದಲ್ಲಿ ಕಂಡುಬರುವ ಪ್ರಧಾನ ಹೆಸರುಗಳಲ್ಲಿ ಕುನ್ನುಕ್ಕುಡಿ ವೈದ್ಯನಾಥನ್ ಒಬ್ಬರು.
ಈ ಮಹಾನ್ ಸಂಗೀತ ವಿದ್ವಾಂಸ ವೈದ್ಯನಾಥನ್ ಅವರು ಮಾರ್ಚ್ 2, 1935ರ ವರ್ಷದಲ್ಲಿ ಮುರುಗನ್ ದೇವಾಲಯದ ಊರಾದ ಕುನ್ನುಕ್ಕುಡಿಯಲ್ಲಿ ವಿದ್ವಾನ್ ರಾಮಸ್ವಾಮಿ ಶಾಸ್ತ್ರಿ ಮತ್ತು ಮೀನಾಕ್ಷಿ ದಂಪತಿಗಳ ಸುಪುತ್ರರಾಗಿ ಜನಿಸಿದರು. ತಂದೆ ರಾಮಸ್ವಾಮಿ ಶಾಸ್ತ್ರಿಗಳು ಸಂಸ್ಕೃತ ಮತ್ತು ತಮಿಳಿನ ಮಹಾನ್ ವಿದ್ವಾಂಸರೆಂದು ಪಡೆದ ಖ್ಯಾತಿಯ ಜೊತೆಗೆ ಕರ್ನಾಟಕ ಸಂಗೀತ ಮತ್ತು ಕಥಾಕಾಲಕ್ಷೇಪಗಳಿಗೂ ಹೆಸರಾಗಿದ್ದರು. ತಮ್ಮ ತಂದೆಯವರಿಂದ ವೈದ್ಯನಾಥನ್ ಅವರು ಬಾಲ್ಯದಿಂದಲೇ ಸಂಗೀತಾಭ್ಯಾಸವನ್ನು ಕೈಗೊಂಡರು.
ಹಣೆಯಲ್ಲಿ ದೊಡ್ಡ ವಿಭೂತಿ, ಹಸನ್ಮುಖದೊಂದಿಗೆ ಸಂಗೀತದ ಸ್ವಾದವನ್ನು ಸಂತಸದಿಂದ ಅನುಭಾವಿಸುತ್ತಾ, ಪ್ರೇಕ್ಷಕ ಶ್ರೋತೃವಿಗೆ ಅಪ್ಯಾಯಮಾನತೆ ಹುಟ್ಟುವ ರೀತಿಯಲ್ಲಿ ಪಿಟೀಲು ನುಡಿಸುತ್ತಾ ಸಂಭ್ರಮಿಸುವುದು.... ಇದು ಕುನ್ನುಕ್ಕುಡಿ ವೈದ್ಯನಾಥನ್ ಎಂದರೆ ನಮಗೆ ನೆನಪಿಗೆ ಬರುವ ಚಿತ್ರ. ವಯಲಿನ್ ವಾದ್ಯದಲ್ಲಿ ಅವರಿಂದ ಹೊರಹೊಮ್ಮುತ್ತಿದ್ದ ವೈವಿಧ್ಯತೆ, ಬಿರುಸು, ಮೃದುತ್ವ, ನಾಜೂಕು, ನಾವೀನ್ಯತೆ, ಮನರಂಜನೆ ಇವೆಲ್ಲಾ ಸಂಗೀತ ಪಂಡಿತರಿಂದ ಪಾಮರರವರೆಗೆ ತರುತ್ತಿದ್ದ ಅನುಭಾವ ಅಪ್ರತಿಮವಾದದ್ದು.
ತಮ್ಮ ಹನ್ನೆರಡನೆಯ ವಯಸ್ಸಿನಿಂದಲೇ ಕುನ್ನುಕ್ಕುಡಿ ವೈದ್ಯನಾಥನ್ ಅವರು ಸಂಗೀತದ ಘಟಾನುಘಟಿಗಳೆಂದು ಹೆಸರಾದ ಅರೈಯಕುಡಿ ರಾಮಾನುಜೈಂಗಾರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಮಹಾರಾಜಪುರಂ ಸಂತಾನಂ ಮುಂತಾದವರ ಕಚೇರಿಗಳಿಗೆ ಪಿಟೀಲು ವಾದನ ನೀಡುತ್ತಿದ್ದರು. ನಾದಸ್ವರ ವಿದ್ವಾಂಸರಾದ ಟಿ ಎನ್ ರಾಜರತ್ನಂ ಪಿಳ್ಳೈ ಮತ್ತು ತಿರುವೆಂಕಾಡು ಸುಬ್ರಮಣ್ಯಂ ಪಿಳ್ಳೈ ಅವರೊಂದಿಗೆ ಸಹಾ ಕುನ್ನುಕ್ಕುಡಿ ವೈದ್ಯನಾಥನ್ ಅವರ ಪಿಟೀಲು ವಾದನ ಜನಪ್ರಿಯತೆ ಪಡೆದಿತ್ತು.
1976ರ ವರ್ಷದಿಂದ ಮೊದಲ್ಗೊಂಡು ಸಂಗೀತ ಕಚೇರಿಗಳಲ್ಲಿ ಪಕ್ಕವಾದ್ಯಗಾರರಾಗಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದ ಕುನ್ನುಕ್ಕುಡಿಯವರು, ತಮ್ಮದೇ ಕಚೇರಿಗಳತ್ತ ಹೆಚ್ಚು ಗಮನಹರಿಸತೊಡಗಿದರು. ತಮ್ಮ ಸಂಗೀತ ಕಚೇರಿಗಳಲ್ಲಿ ನಿರಂತರವಾಗಿ ಹೊಸತನ ತುಂಬುವತ್ತ ಉತ್ಸುಕರಾಗಿದ್ದ ಅವರನ್ನು, ವಲಯಪಟ್ಟಿ ಸುಬ್ರಮಣ್ಯಂ ಅವರ ಡೋಲುವಾದನದ ಸಂಯೋಗವನ್ನು ತಮ್ಮ ಕಚೇರಿಗಳೊಡನೆ ಬೆಸೆಯುವತ್ತ ಪ್ರೇರೇಪಿಸಿತು. ಸುಬ್ರಮಣ್ಯಮ್ ಅವರ ಡೋಲು ವಾದನದೊಡನೆ ಕುನ್ನುಕ್ಕುಡಿಯವರು ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದರು. ಸಂಗೀತದಲ್ಲಿ ಆರೋಗ್ಯ ಉತ್ತಮಪಡಿಸುವ ಗುಣವಿದೆ ಎಂಬುದು ಕುನ್ನುಕ್ಕುಡಿ ವೈದ್ಯನಾಥನ್ ಅವರಲ್ಲಿದ್ದ ಅಚಲ ನಂಬಿಕೆ.
ಭಕ್ತಿ ಸಂಗೀತ ಮತ್ತು ಸಿನಿಮಾ ಸಂಗೀತಗಳಲ್ಲಿ ಸಹಾ ಕುನ್ನುಕ್ಕುಡಿ ವೈದ್ಯನಾಥನ್ ಅವರು ಪ್ರಸಿದ್ಧರು. ಹಲವಾರು ಪ್ರಸಿದ್ಧ ತಮಿಳು ಚಿತ್ರಗಳಿಗೆ ಸಂಗೀತ ನೀಡಿದುದೇ ಅಲ್ಲದೆ, ಕೆಲವೊಂದು ಚಿತ್ರಗಳಲ್ಲಿ ಅವರು ಪಾತ್ರನಿರ್ವಹಣೆಯನ್ನೂ ಮಾಡಿದ್ದರು. ಒಂದು ಚಿತ್ರವನ್ನೂ ನಿರ್ಮಿಸಿದ್ದರು. ತಿರುವಯ್ಯಾರ್ ಕ್ಷೇತ್ರದಲ್ಲಿ ನಡೆಯುವ ತ್ಯಾಗರಾಜ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು ಮತ್ತು ಹಲವಾರು ಸಾಂಸ್ಕೃತಿಕ ವೇದಿಕೆಗಳ ಸಂಘಟಕರಾಗಿ ಸಹಾ ಅವರು ಉತ್ತಮ ಕಾರ್ಯನಿರ್ವಾಹಕರೆಂದು ಹೆಸರು ಪಡೆದಿದ್ದರು.
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯೇ ಅಲ್ಲದೆ, ಕಲೈಮಾಮಣಿ, ಸಂಗೀತ ನಾಟಕ ಅಕಾಡೆಮಿ ಗೌರವ, ಚಿತ್ರ ಸಂಗೀತಕ್ಕಾಗಿನ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿಗಳು ಮುಂತಾದ ಅಸಂಖ್ಯಾತ ಗೌರವಗಳಿಗೆ ಕುನ್ನುಕ್ಕುಡಿ ವೈದ್ಯನಾಥನ್ ಅವರು ಪಾತ್ರರಾಗಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ಕುನ್ನುಕ್ಕುಡಿ ವೈದ್ಯನಾಥನ್ ಕಚೇರಿ ಎಂದರೆ ತುಂಬಿತುಳುಕುತ್ತಿದ್ದ ಜನಸಂದಣಿ. ಶ್ರೇಷ್ಠ ಸಂಗೀತಜ್ಞರಿಗೆ ಸಂಗೀತ ವಿದ್ವತ್ತನ್ನುಭಿತ್ತರಿಸುತ್ತಲೇ, ಜನಸಾಮಾನ್ಯನಿಗೂ ಅಪ್ಯಾಯಮಾನವಾಗುವ ರೀತಿಯಲ್ಲಿ ನಾದ ಹೊಮ್ಮಿಸುತ್ತಾ, ಸಂಗೀತ ಕ್ಷೇತ್ರಕ್ಕೆ ಹೊಸ ಹೊಸ ಶ್ರೋತೃಗಳನ್ನು ನಿರಂತರವಾಗಿ ಸೇರಿಸುತ್ತಾ ನಡೆದ ಕುನ್ನುಕ್ಕುಡಿ ವೈದ್ಯನಾಥನ್ ಅವರ ಸಾಮರ್ಥ್ಯ ಅದ್ವಿತೀಯವಾದದ್ದು.
ಈ ಮಹಾನ್ ಸಂಗೀತ ವಿದ್ವಾಂಸರು ಸೆಪ್ಟೆಂಬರ್ 8, 2008ರಂದು ಈ ಲೋಕವನ್ನಗಲಿದರು.
No comments:
Post a Comment