WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Thursday, February 28, 2013

ಹೂವಾಡಗಿತ್ತಿ -ಪ್ರೊ. ಎಂ. ವಿ. ಸೀತಾರಾಮಯ್ಯ

ಹೂವನು ಮಾರುತ
ಹೂವಾಡಗಿತ್ತಿ
ಹಾಡುತ ಬರುತಿಹಳು
‘ಘಮಘಮ ಹೂಗಳು
ಬೇಕೇ’ ಎನ್ನುತ
ಹಾಡುತ ಬರುತಿಹಳು

ಬಿಳುಪಿನ ಮಲ್ಲಿಗೆ
ಹಳದಿಯ ಸಂಪಿಗೆ
ಹಸುರಿನ ಹೊಸ ಮರುಗ;
ಹಾಕಿ ಕಟ್ಟಿರುವೆ
ಬೇಕೇ ಎನುತ
ಹಾಡುತ ಬರುತಿಹಳು

ಹೊಸ ಸೇವಂತಿಗೆ
ಹೊಸ ಇರುವಂತಿಗೆ
ಅರಸಿನ ತಾಳೆಯಿದೆ;
ಅಚ್ಚ ಮಲ್ಲೆಯಲಿ
ಪಚ್ಚ ತೆನೆಗಳು
ಸೇರಿದ ಮಾಲೆಯಿದೆ.

ಕಂಪನು ಚೆಲ್ಲುವ
ಕೆಂಪು ಗುಲಾಬಿ
ಅರಳಿದ ಹೊಸ ಕಮಲ;
ಬಿಳುಪಿನ ಜಾಜಿ
ಅರಳಿದ ಬಿಳಿ ಕಮಲ.

ಬಗೆ ಬಗೆ ಹೂಗಳು
ಬೇಕೇ ಎನುತ
ಹಾಡುತ ಬರುತಿಹಳು;
ಹೂವನು ಮಾರುತ
ಹೂವಾಡಗಿತ್ತಿ
ಹಾಡುತ ಬರುತಿಹಳು.

Tuesday, February 26, 2013

ಕೋ ಚೆನ್ನಬಸಪ್ಪ

ನಿವೃತ್ತ ನ್ಯಾಯಾಧೀಶರೂ, ಸ್ವಾತಂತ್ರ್ಯ ಮತ್ತು ಏಕೀಕರಣ ಹೋರಾಟಗಾರರೂ, ಕನ್ನಡದ ಹಿರಿಯ ಬರಹಗಾರರೂ ಹೀಗೆ ವಿವಿಧ ಮುಖೀ ವ್ಯಕ್ತಿತ್ವದ ಕೋ. ಚೆನ್ನಬಸಪ್ಪನವರು ಫೆಬ್ರವರಿ 27, 1922ರಂದು ಬಳ್ಳಾರಿ ಜಿಲ್ಲೆಯ ಆಲೂರಿನ ಸಮೀಪದ ಕಾನಮಡುಗು ಎಂಬಲ್ಲಿ ಜನಿಸಿದರು. ತಂದೆ ವೀರಣ್ಣನವರು ಮತ್ತು ತಾಯಿ ಬಸಮ್ಮನವರು. ಕಾನಮಡುಗು ಮತ್ತು ಬಳ್ಳಾರಿಯಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದ ಚೆನ್ನಬಸಪ್ಪನವರು ಅನಂತಪುರದಲ್ಲಿ ಕಾಲೇಜು ವ್ಯಾಸಂಗ ನಡೆಸಿದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ಚಳುವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು. ಸೆರೆಮನೆಯಿಂದ ಹೊರಬಂದ ನಂತರದಲ್ಲಿ ಬಿ. ಎ ಪದವಿ ಪಡೆದರು. ನಂತರದಲ್ಲಿ ಕಾನೂನು ಪದವಿಯನ್ನೂ ಚರಿತ್ರೆ ಮತ್ತು ರಾಜ್ಯಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿಗಳನ್ನೂ ಪಡೆದರು.

1946ರ ವರ್ಷದಲ್ಲಿ ಮುಂಬೈ ಶ್ರೇಷ್ಠ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸತೊಡಗಿದ ಚೆನ್ನಬಸಪ್ಪನವರು, 1965ರ ವರ್ಷದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡರು. ನಿವೃತ್ತಿಯ ನಂತರದಲ್ಲಿ ಕರ್ನಾಟಕ ಶ್ರೇಷ್ಠ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುವುದರ ಜೊತೆಗೆ ಹಲವಾರು ಕಾರ್ಮಿಕ ಸಂಘಟನೆಗಳ ಮತ್ತು ಭ್ರಷ್ಟಾಚಾರ ನಿರ್ಮೂಲಕ ಸಮಿತಿಯ ಅಧ್ಯಕ್ಷತೆ ಮುಂತಾದ ಹಲವಾರು ಜವಾಭ್ಧಾರಿಗಳನ್ನು ನಿರ್ವಹಿಸಿದರು.

ಅರವಿಂದಾಶ್ರಮದ ನಿಕಟವರ್ತಿಗಳಾದ ಚೆನ್ನಬಸಪ್ಪನವರು ಕರ್ನಾಟಕ ವಿಭಾಗದ ಅರವಿಂದಾಶ್ರಮವನ್ನು ಪ್ರಾರಂಭಿಸಿದರು. ಪ್ರಾರಂಭದಿಂದಲೂ ಸಾಹಿತ್ಯದ ಗೀಳು ಹಚ್ಚಿಕೊಂಡ ಇವರು ನಾಡಿನ ಪ್ರಮುಖ ಪತ್ರಿಕೆಗಳಿಗೆಲ್ಲಾ ಬರೆದ ಲೇಖನಗಳು ಅಪಾರ. ಕನ್ನಡಪ್ರಭ ಪತ್ರಿಕೆಯಲ್ಲಿ ಮೂಡಿಬಂದ ‘ನ್ಯಾಯಾಧಿಶರ ನೆನಪುಗಳು’ ಮತ್ತು ಪ್ರಜಾಮತ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ‘ನ್ಯಾಯಾಲಯದಲ್ಲಿ ಸತ್ಯ ಕಥೆಗಳು’ ಅಂದಿನ ದಿನಗಳಲ್ಲಿ ಪ್ರಖ್ಯಾತಿ ಪಡೆದಿದ್ದವು.

ಎಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಕೋ. ಚೆನ್ನಬಸಪ್ಪನವರ ಕೃತಿಗಳಲ್ಲಿ, ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮುಂತಾದ
ಕವನ ಸಂಕಲನಗಳು; ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ ಕಥಾ ಸಂಕಲನಗಳು; ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ ಕಾದಂಬರಿಗಳು; ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ ಜೀವನಚರಿತ್ರೆಗಳು; ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು; ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಮುಂತಾದ ಸಂಪಾದಿತ ಕೃತಿಗಳು ಪ್ರಮುಖವಾಗಿವೆ. ಚೆನ್ನಬಸಪ್ಪನವರ ’ದಾಸರಯ್ಯನ ಪಟ್ಟಿ’, ’ಹಿಂದಿರುಗಿ ಬರಲಿಲ್ಲ’, ’ಬೇಡಿಕಳಚಿತು ದೇಶ ಒಡೆಯಿತು’, ’ನ್ಯಾಯಾದಿsಶನ ನೆನಪುಗಳು’ ಮುಂತಾದ ಕೃತಿಗಳು ಸಾಮಾನ್ಯರಿಂದ ವಿದ್ವಾಂಸರೆಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ..

ಕೋ. ಚೆನ್ನಬಸಪ್ಪನವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಸಂ.ಶಿ. ಭೂಸನೂರ ಮಠ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವುಗಳು ಸಂದಿವೆ. ಇತ್ತೀಚೆಗೆ ಬಿಜಾಪುರದಲ್ಲಿ ಜರುಗಿದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವವನ್ನು ನೀಡುವುದರ ಮೂಲಕ ನಾಡು ಈ ಹಿರಿಯರನ್ನು ಗೌರವಿಸಿದೆ.

ನಿನಗೆ ನೀನೇ ಗೆಳೆಯಾ - ಗೋಪಾಲಕೃಷ್ಣ ಅಡಿಗ

’ನಿನಗೆ ನೀನೇ ಗೆಳೆಯಾ, ನಿನಗೆ ನೀನೇ..! 
ಅವರಿವರ ನಂಬುಗೆಯ ಮಳಲ ರಾಶಿಯ ಮೇಲೆ
ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?.
ನಿನಗೆ ನೀನೇ.ಗೆಳೆಯಾ, ನಿನಗೆ ನೀನೇ..!.

ಮನ ಸಿಡಿದು ಹೋಳಾಗುತಿರುವ ವೇಳೆ,
ಕನಸುಗಳ ಗುಳ್ಳೆಗಳು ಒಡೆದೊಡೆದು ಬೀಳೆ
ಜನಮದೀ ರಿಂಗಣದಿ ಕಾಲುಗಳು ಸೋಲೆ,
ನಿನಗೆ ನೀನೇ.ಗೆಳೆಯಾ, ನಿನಗೆ ನೀನೇ!

ಚೆಲುವಿಕೆಯ ಹುಚ್ಚೊಳೆದೆ ಕೊಚ್ಚಿ ಹೋಗುತಿರೆ,
ಒಲವು ವಿರಹದ ಬೆಂಕಿಯಲಿ ಬೇಯುತಿರೆ,
ಗೆಳೆತನಕೆ ಹುಳಿಬಂದು ಹೆಪ್ಪುಗಟ್ಟುತಿರೆ
ನಿನಗೆ..ನೀನೇ..ಗೆಳೆಯಾ,ನಿನಗೆ ನೀನೇ!

ನಿನ್ನೆದೆಯ ಮಾತು ನಿನ್ನೆದೆಯೊಳುಳಿದಿರಲು
ಮಾತು ಮಾತಿಗೂ ವಾದ ಹಡೆಯೆತ್ತಿಬರಲು,
ಅದರ ವಿಷಕೀ ಜೀವ ಬೆಂದು ಹೋಗಿರಲು,
ನಿನಗೆ ನೀನೇ, ಗೆಳೆಯ, ನಿನಗೆ ನೀನೇ !’

Sunday, February 24, 2013

ಬಾ ಇಲ್ಲಿ ಸಂಭವಿಸು - ಕುವೆಂಪು

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ.

ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!

Friday, February 22, 2013

ದೇವ, ನಿನ್ನ ಮಾಯೆಗಂಜಿ - ಕೆ. ಎಸ್. ನರಸಿಂಹಸ್ವಾಮಿ

ದೇವ, ನಿನ್ನ ಮಾಯೆಗಂಜಿ
ನಡುಗಿ ಬಾಡೆನು ;
ನಿನ್ನ ಇಚ್ಛೆಯಂತೆ ನಡೆವೆ -
ನಡ್ಡಿ ಮಾಡೆನು.

ಮುಕ್ತಿ ! ಮುಕ್ತಿ ! ನನ್ನ ನಾನು
ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
ಅಡಗಿಕೊಳ್ವುದೋ ?

ಶಕ್ತಿಯಿತ್ತೆ ಮುಕ್ತಿಯನ್ನು
ಗಳಿಸಿಕೊಳ್ಳುಲು ;
ನೀರನೆರೆದೆ ಬಳ್ಳಿಯನ್ನು
ಬೆಳಸಿಕೊಳ್ಳಲು;

ಜ್ಞಾನರವಿಯನಿತ್ತೆ ಎದೆಯ
ನೋಡಿಕೊಳ್ಳಲು ;
ಗೀತೆಯನ್ನು ಕೊಟ್ಟೆ ಕೊಳಲೊ -
ಳೂದಿಕೊಳ್ಳಲು.

ಎಲ್ಲವನ್ನು ಕೊಟ್ಟಿರುವೆ;
ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
ಏಕೆ ಕಾಡಲಿ !

Thursday, February 21, 2013

ಸರ್ವಧರ್ಮ ಪ್ರಾರ್ಥನೆ

ಓಂ ತತ್‌ ಸತ್‌ ಶ್ರೀ ಗುರುನಾರಾಯಣ ನೀ,ಪುರುಷೋತ್ತಮ ಗುರು ನೀ
ಸಿದ್ಧ ಬುದ್ಧ ನೀ ಸ್ಕಂದ ವಿನಾಯಕ, ಸವಿತಾ ಪಾವಕ ನೀ
ಬ್ರಹ್ಮ ಮಜ್ದ್‌ ನೀ ಯಹ್ವ ಶಕ್ತಿ ನೀ, ಈಶು ಪಿತಾ ಪ್ರಭು ನೀ
ರುದ್ರ ವಿಷ್ಣು ನೀ, ರಾಮಕೃಷ್ಣ ನೀ, ರಹೀಮ ತಾಮೋ ನೀ
ವಾಸುದೇವಗೋ ವಿಶ್ವರೂಪನೀ ಚಿದಾನಂದ ಹರಿ ನೀ
ಅದ್ವಿತೀಯ ನೀ ಅಕಾಲ ನಿರ್ಭಯ ಆತ್ಮಲಿಂಗ ಶಿವ ನೀ

Monday, February 18, 2013

ಅಳುವ ಕಡಲೊಳು - ಗೋಪಾಲಕೃಷ್ಣ ಅಡಿಗ

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ
ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆತೆರೆಗಳೋಣಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ

ಆಶೆ ಬೂದಿ ತಳದಲ್ಲು ಕೆರಳುತಿವೆ ಕಿಡಿಗಳೆನಿತೋ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಾಳದಲ್ಲೂ ಕಂಡೀತು ಏಕಸೂತ್ರ
ಕಂಡುದುಂಟು ಬೆಸೆಬೆಸೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಎತ್ತರೆತ್ತರೆಕೆ ಏರುವ ಮನಕೂ ಕೆಸರ ಲೇಪ, ಲೇಪ;
ಕೊಳೆಯು ಕೊಳೆಚೆಯಲಿ ಮುಳುಗಿ ಕಂಡನೋ ಬಾನಿನೊಂದು ಪೆಂಪ
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮದಗಾಧ ಹೊನಲಲ್ಲು ಹೊಳೆಯುತಿದೆ ಸತ್ವವೊಂದಖಂಡ

ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು

ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ

ಬೆಂಗಾಡು ನೋಡು ಇದು ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ
ಅದ ತಿಳಿದೆನೆಂದ ಹಲರುಂಟು ತಣಿದೆನೆಂದವರ ಕಾಣೆನಯ್ಯಾ
ಅರೆಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾವೇಕೋ ಮಲೆತು ಮೆರೆದು
ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆದು

Sunday, February 17, 2013

ಎಂ. ಗೋಪಾಲಕೃಷ್ಣ ಅಡಿಗ

ಡಾ. ಎಂ. ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರಿ ಎಂಬ ಹಳ್ಳಿಯಲ್ಲಿ 18 ಫೆಬ್ರವರಿ 1918ರಲ್ಲಿ. ಮನೆಯ ಮುಂಜಗಲಿಯ ಮೇಲೆ ಕುಳಿತರೆ ದೂರದಲ್ಲಿ ಮೋಡಗಳಾಚೆ ಕಾಣುವ ಪಶ್ಚಿಮ ಘಟ್ಟಗಳ ಸಾಲು; ಹಿಂಬಾಗಿಲಿನ ಹಿತ್ತಲಿಗೆ ಬಂದರೆ ಅಡಿಕೆ, ಬಾಳೆ, ಸೀಬೆ, ನಿಂಬೆ, ಮಾವು, ಹಲಸು – ಈ ಸಸ್ಯಲೋಕ; ಅಕ್ಕಪಕ್ಕ ತೋಟ ಗದ್ದೆಗಳಲ್ಲಿ ಬೆಳೆದುನಿಂತ ಮರ ಗಿಡ ಪೈರು; ಅಂಗಳದಲ್ಲಿ ನಿಂತು ಕಣ್ಣು ಹಾಯಿಸಿದರೆ ಮೇಲೆ ಕಾಣುವ ಆ ನೀಲ ಲೋಕ; ಅನತಿ ದೂರದಲ್ಲೇ ಪ್ರಕೃತಿ ಚೇಷ್ಟೆಗಳಿಗೆಲ್ಲ ಶೃತಿ ಹಿಡಿದಂತೆ ಸದಾ ಭೋರ್ಗರೆಯುತ್ತ, ಸದಾ ತುಡಿಯುತ್ತ ಸ್ಥಾಯಿಯಾಗಿ ಇರುವ ಸಮುದ್ರ – ಈ ಎಲ್ಲ ವಿಸ್ಮಯ, ವಿಚಿತ್ರ ವೈಭವಗಳ ನಡುವೆ ಅಡಿಗರ ಬಾಲ್ಯ ಕಳೆಯಿತು. ಚಿಕ್ಕಂದಿನ ಎಳೆಯ ಮನಸ್ಸಿನಲ್ಲಿ ಈ ಎಲ್ಲವೂ ಒತ್ತಿ ಮುದ್ರೆ, ಬೀರಿದ ಪ್ರಭಾವ ಮುಂದೆ ಅವರ ಕಾವ್ಯಪ್ರಪಂಚಕ್ಕೆ ಸೂಕ್ತ ಹಿನ್ನೆಲೆಯನ್ನೂ ಅಗತ್ಯ ಪರಿಸರವನ್ನೂ ಒದಗಿಸಿವೆ.

ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ಅವರ ಹತ್ತಿರದ ಬಂಧುಗಳೊಬ್ಬರು ಅವರ ಮನೆಯಲ್ಲೇ ಇದ್ದು ಯಕ್ಷಗಾನ ಪ್ರಸಂಗಗಳನ್ನು ಬರೆಯುತ್ತಿದ್ದರಂತೆ. ಮನೆಯಲ್ಲಿ ಪದ್ಯ ರಚನೆ, ವಾಚನಗಳ ವಾತಾವರಣವಿತ್ತು. ಪ್ರತಿರಾತ್ರಿಯೂ ಅವರ ಸೋದರತ್ತೆ ನಾರಣಪ್ಪನ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇವುಗಳನ್ನು ರಾಗವಾಗಿ ಓದಿ ಹೇಳುತ್ತಿದ್ದರೆಂದು ಅಡಿಗರು ನೆನೆಸಿಕೊಳ್ಳುತ್ತಿದ್ದರು. 

ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ.

“ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲಿ ಪದ್ಯರಚನೆಗೆ ಕೈಹಾಕಿದೆನೆಂದು ತೋರುತ್ತದೆ. ಭಾಮಿನಿಷಟ್ಪದಿ, ವಾರ್ಧಕ ಷಟ್ಪದಿ ಕಂದ ಪದ್ಯಗಳನ್ನು ರಚಿಸುತ್ತಿದ್ದೆ” ಎಂದು ಅಡಿಗರೇ ಹೇಳಿದ್ದಾರೆ. ಅಂದರೆ ಸುಮಾರು 1931-32ರ ವೇಳೆಗೆ ಅಡಿಗರು ಕಾವ್ಯರಚನೆ ಆರಂಭಿಸಿದಂತೆ ತೋರುತ್ತದೆ.

ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ. ಎ (ಆನರ್ಸ್), ಎಂ.ಎ (ಇಂಗ್ಲಿಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರಿನ ಶಾರದಾ ವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮುಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿ ತಮ್ಮ ವಿಶ್ರಾಂತ ಬದುಕನ್ನು ಬೆಂಗಳೂರಿನಲ್ಲಿ ಕಳೆದು, ದಿನಾಂಕ 14-11-1992ರಲ್ಲಿ ನಿಧನರಾದರು.

ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಆಸಾನ್ ಪ್ರಶಸ್ತಿ, ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದರು. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದ ಅಡಿಗರು “ತಮ್ಮ ಕಿರಿಯ ತಲೆಮಾರಿನವರ ಮೇಲೆ ಬೀರಿದ ಪ್ರಭಾವ, ಅವರ ಓರಗೆಯ ಮತ್ತು ಹಿರಿಯ ತಲೆಮಾರಿನವರಿಗೆ ಒಡ್ಡಿದ ಸವಾಲುಗಳು ಕನ್ನಡ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸಂಗತಿಯಾಗಿದೆ.

ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ ಪ್ರಕಟವಾದದ್ದು 1946ರಲ್ಲಿ. ನಂತರದಲ್ಲಿ ಅವರ ಹನ್ನೊಂದು ಕವನ ಸಂಕಲನಗಳು ಪ್ರಕಟವಾದವು. ಕಟ್ಟುವೆವು ನಾವು (1948), ನಡೆದು ಬಂದ ದಾರಿ (1952), ಚಂಡೆಮದ್ದಳೆ (1954), ಭೂಮಿಗೀತ (1959), ವರ್ಧಮಾನ (1972), ಇದನ್ನು ಬಯಸಿರಲಿಲ್ಲ (1975), ಮೂಲಕ ಮಹಾಶಯರು (1981), ಬತ್ತಲಾರದ ಗಂಗೆ (1983), ಚಿಂತಾಮಣಿಯಲ್ಲಿ ಕಂಡ ಮುಖ (1987), ಸುವರ್ಣ ಪುತ್ಥಳಿ (1990) ಹಾಗೂ ಬಾ ಇತ್ತ ಇತ್ತ (1993) ಪ್ರಕಟವಾಗಿವೆ. 1937ರಿಂದ 1976ರವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ 1987ರಲ್ಲಿ ಪ್ರಕಟವಾಗಿದೆ. ಅಡಿಗರು ಅನಾಥೆ, ಆಕಾಶದೀಪ ಎಂಬ ಎರಡು ಕಾದಂಬರಿಗಳನ್ನೂ ಬರೆದಿದ್ದಾರೆ. ಅನೇಕ ಅನುವಾದ ಕೃತಿಗಳೂ ಪ್ರಕಟವಾಗಿವೆ.

ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಈ ಎಲ್ಲ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’ ಎಂಬ ಸಂಪುಟವೊಂದರಲ್ಲಿ ಪ್ರಕಟವಾಗಿದೆ. ಅವರ ಗದ್ಯಬರಹಗಳನ್ನು ಕುರಿತು ಅವರೇ ಹೀಗೆ ಹೇಳುತ್ತಾರೆ: “ವಿಚಾರ ಪ್ರಧಾನವಾದ ಈ ಪ್ರಬಂಧಗಳಲ್ಲಿ ನಾನು ನನ್ನ ಕಾವ್ಯಗಳಲ್ಲಿ ಹೇಳದೆ ಇರುವುದು ಯಾವುದೂ ವ್ಯಕ್ತಗೊಂಡಿಲ್ಲ. ಅಲ್ಲಿ ಅನುಭವ ಚಿತ್ರಗಳಾಗಿ ವ್ಯಕ್ತಗೊಂಡ ವಿಚಾರಗಳು, ಕಲ್ಪನೆಗಳು ಇಲ್ಲಿ ಪ್ರಜ್ಞೆಯ ಸ್ತರದಲ್ಲಿ ಶುದ್ಧ ಗದ್ಯದಲ್ಲಿ ಸ್ಪಷ್ಟತೆ, ಸ್ಪುಟತೆ, ಅಸಂದಿಗ್ಧತೆಗಳನ್ನೇ ಗುರಿಯಾಗಿಟ್ಟುಕೊಂಡು ಪ್ರಕಟವಾಗಿವೆ”. ಅಡಿಗರು ಕೆಲವು ಸಣ್ಣಕಥೆಗಳನ್ನೂ ಬರೆದಿದ್ದಾರೆ. ಒಮ್ಮೆ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.

ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ‘ಆಧುನಿಕ ಮಹಾಕಾವ್ಯ’ವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಇಪ್ಪತ್ತನೇ ಶತಮಾನದ ಸ್ವಾತಂತ್ರೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಾಸ್ತವ ಅಡಿಗರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲವೆನ್ನಬಹುದು. ಅಡಿಗರ ಕಾವ್ಯನಾಯಕನ ಕೆಲವು ಲಕ್ಷಣಗಳನ್ನೂ ಹೀಗೆ ಗುರುತಿಸಬಹುದು: ಸಾಂಪ್ರದಾಯಿಕವಾದ ಒಪ್ಪಿತ ಮೌಲ್ಯಗಳ ಬಗ್ಗೆ ಈತನಿಗೆ ಆರಾಧಕ ಮನೋಭಾವವಿಲ್ಲ. ಹಾಗೆಂದು ಅವುಗಳನ್ನು ಈತ ಸಾರಾಸಗಟಾಗಿ ತಿರಸ್ಕರಿಸುವಂಥವನೂ ಅಲ್ಲ. ಚಿಕಿತ್ಸಕ ಮನೋಭಾವದ ಈತನಿಗೆ ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ಪರಂಪರೆಯನ್ನು ಸೂಕ್ತವಾಗಿ ಒಗ್ಗಿಸಿಕೊಳ್ಳುವುದರ ಬಗ್ಗೆ ಆಸಕ್ತಿ. ಅನೇಕ ನವ್ಯಕೃತಿಗಳಲ್ಲಿ ಕಾಣಿಸುವಂತೆ ಅಡಿಗರ ನಾಯಕ ಸೂಕ್ಷ್ಮ ಮನಸ್ಸಿನ ದುರ್ಬಲ ವ್ಯಕ್ತಿಯಲ್ಲ. ಈತನೊಬ್ಬ ಹೋರಾಟಗಾರ. ಎಲ್ಲ ಬಗೆಯ ಸರ್ವಾಧಿಕಾರೀ ಶಕ್ತಿಗಳ ವಿರುದ್ಧವೂ ಈತ ಪ್ರತಿಭಟಿಸುತ್ತಾನೆ. ಈ ಪ್ರತಿಭಟನೆ ಆತ್ಮ ವಿಶ್ಲೇಷಣೆಯ ಪ್ರಕ್ರಿಯೆಯೂ ಆಗುತ್ತದೆ. ಎಲ್ಲ ರೀತಿಯ ಆಕ್ರಮಣಗಳನ್ನೂ ಎದುರಿಸಿ ವ್ಯಕ್ತಿವಿಶಿಷ್ಟತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಈತನ ತುಡಿತ. 

ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ದ ಮುನ್ನುಡಿಯಲ್ಲಿ ಬೇಂದ್ರೆಯವರು ಹೀಗೆ ಹೇಳಿದ್ದಾರೆ: “ನಾನು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಾಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟುಮಟ್ಟಿಗೆ ಇಲ್ಲ. ಒಂದು ಬಗೆಯ ಸಿದ್ಧ ಶೈಲಿಯಿಂದ ನವಕವಿಗಳು ಹೊರಡುತ್ತಾರೆ. ಗೆಳೆಯ ಗೋಪಾಲಕೃಷ್ಣರಿಗೆ ಅವರ ವಯಸ್ಸಿಗಿದ್ದ ಶೈಲಿಯ ಪಾಕ ನನಗೆ ಆ ವಯಸ್ಸಿಗೆ ಇರಲಿಲ್ಲ. ಆದರೆ ನಮಗೆ ಆ ಕಾಲಕ್ಕೆ ಇದ್ದ ನಾವೀನ್ಯದ ಅನುಕೂಲ ಈಗಿನವರಿಗಿಲ್ಲ”. ಬೇಂದ್ರೆಯವರು ಹೇಳುವಂತೆ ಆ ಕಾಲಕ್ಕಾಗಲೇ ಕನ್ನಡ ಕಾವ್ಯ ಸಂದರ್ಭದಲ್ಲಿ ಸಿದ್ಧಶೈಲಿಯೊಂದು ರೂಪುಗೊಂಡಿತ್ತು. ನವೋದಯ ಕಾವ್ಯ ಸಂಪ್ರದಾಯದ ಅತ್ಯುತ್ತಮ ಕಾವ್ಯ ಸೃಷ್ಟಿಯಾಗಿತ್ತು. 1926ರ ವೇಳೆಗೆ ಬಿ.ಎಂ.ಶ್ರೀ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮನ್ನಡೆದ ಕನ್ನಡ ಕಾವ್ಯ ಒಂದು ಸ್ಪಷ್ಟ ರೂಪ ಪಡೆದು ಮಹತ್ವದ ಸಂಕಲನಗಳು ಆ ವೇಳೆಗಾಗಲೇ ಪ್ರಕಟವಾಗಿದ್ದವು. ಹೊಸದಾಗಿ ಬರೆಯಲು ಆರಂಭಿಸುವ ತರುಣರಿಗೆ ಒಂದು ಕಾವ್ಯ ಮಾದರಿ ಕಣ್ಣೆದುರಿಗಿತ್ತು. ಈ ಮಾದರಿಯನ್ನು ಬಿಟ್ಟು ಹೊಸದಾರಿ ಕಂಡುಕೊಳ್ಳುವುದು, ತನ್ನತನವನ್ನು ರೂಪಿಸಿಕೊಳ್ಳುವುದು ಅಡಿಗರು ಕಾವ್ಯರಚನೆಯ ಆರಂಭದಲ್ಲಿ ಎದುರಿಸಿದ ಬಹುಮುಖ್ಯ ಸಮಸ್ಯೆಯಾಗಿದ್ದಂತೆ ತೋರುತ್ತದೆ.

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ (ನನ್ನ ನುಡಿ)

“ಭಾವತರಂಗದ ಮೊದಲ ಕವಿತೆಯಲ್ಲಿಯೇ ತನ್ನತನವನ್ನು ಕಂಡುಕೊಳ್ಳುವ ಮನೋಭಾವವನ್ನು ಅಡಿಗರು ಸ್ಪಷ್ಟವಾಗಿ ಸೂಚಿಸಿದ್ದಾರೆ. ಇಲ್ಲಿ ಎರಡು ಮುಖ್ಯ ಅಂಶಗಳನ್ನು ನಾವು ಗಮನಿಸಬೇಕು. (೧) ಬಗೆಯೊಳಗನೇ ತೆರೆದು, (೨) ನನ್ನ ನುಡಿಯೊಳೆ. ಅಡಿಗರು ಹೇಳುವ ಈ ಎರಡು ಸಂಗತಿಗಳು ಅವರ ಇಡೀ ಕಾವ್ಯದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಬೀಜರೂಪದ ಮಾತುಗಳಾಗಿವೆ. ವಸ್ತು ಹಾಗೂ ಅಭಿವ್ಯಕ್ತಿ ಎರಡರಲ್ಲೂ ಹೊಸದನ್ನು ಸಾಧಿಸಬೇಕೆಂಬ ಹಂಬಲವನ್ನು ನಾವಿಲ್ಲಿ ಕಾಣಬಹುದಾಗಿದೆ.


ಅಡಿಗರ ಆರಂಭದ ಕವಿತೆಗಳ ಮುಖ್ಯಗುಣ-ಭಾವತೀವ್ರತೆ. “ಮಹಾರಾಜ ಕಾಲೇಜು ಆ ಕಾಲದ ಸಂಸ್ಕೃತಿಯ ಒಂದು ಮುಖ್ಯ ಕೇಂದ್ರವಾಗಿ ಎಲ್ಲ ಸೃಜನಾತ್ಮಕ ಚಟುವಟಿಕೆಗಳಿಗೂ ಮಾತೃಸ್ಥಾನವಾಗಿತ್ತು. ಅಲ್ಲಿದ್ದಾಗಲೇ ನಾನು ನಿಜವಾದ ಭಾವಪ್ರಧಾನ ಕವನಗಳನ್ನು ರಚಿಸತೊಡಗಿದ್ದು.” ಎಂದು ಅಡಿಗರು ಹೇಳಿದ್ದಾರೆ. ಭಾವತರಂಗದ ಹೆಸರೇ ಸೂಚಿಸುವಂತೆ ಅಡಿಗರ ಕಾವ್ಯ ಇಲ್ಲಿ ಭಾವದ ಅಲೆಯ ಮೇಲೆ ನಿರಾಯಾಸ ತೇಲಿದೆ.


ವಿಧಿಯೇ ನಿನ್ನಿದಿರು ಮಾರಾಂತು ಹೋರಾಡಿ ಕೆ
ಚ್ಚೆದೆತನದ ಬಲ್ಮೆಯನು ಬಿತ್ತರಿಪೆನು
ಪದವನಿಡುತೆನ್ನೆದೆಯ ಮೇಲೆ ತಾಂಡವವೆಸಗು
ಬೆದರುವೆನೆ ಬೆಚ್ಚುವೆನೆ ನಿನಗೆ ನಾನು (ವಿಧಿಗೆ)


ಈ ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವಾವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು ವಿರೋಧಿಸಿದ್ದು ಇಂಥ ರೀತಿಯನ್ನೇ. ದ್ವಿತೀಯ ಪ್ರಾಸ, ಮಾರಾಂತು, ಬಿತ್ತರಿಪೆನು, ಎಸಗು ಮೊದಲಾದ ಪದಪ್ರಯೋಗಗಳ ಬಳಕೆಯನ್ನು ನಾವಿಲ್ಲಿ ಗಮನಿಸಬೇಕು.


ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ
ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ
ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ
ಮಂಜುತರ ಸೃಷ್ಟಿಗಾನದಲಿ ಮೈಮೆರೆಯೆ
ಎಂಜಲಾಗದ ಮಧುರ ಮಧುರಸವ ಸವಿಯೆ
ರಂಜಿಸುವ ಕಾಡುಮೇಡುಗಳನಂಡಲೆಯೆ (ಹೊಸಹಾದಿ)


ಹೊಸ ಹಾದಿಯನ್ನು ಹಿಡಿಯಬೇಕೆಂಬ ಹಂಬಲವನ್ನು ವ್ಯಕ್ತಪಡಿಸುವ ಈ ಮಾತುಗಳು ಸಹ ಭಾವಾವೇಶದ ಮನೋಭಾವದ ನೆಲೆಯಿಂದಲೇ ಮೂಡಿಬಂದಿವೆ. ಅಡಿಗರ ಈ ಆವೇಶ ಉತ್ಸಾಹ ಕ್ರಮೇಣ ವ್ಯಾವಹಾರಿಕ ಜಗತ್ತಿನ ಆಕ್ರಮಣದಿಂದಾಗಿ ಆಘಾತಕ್ಕೊಳಗಾಗದಂತೆ ಕಂಡುಬರುತ್ತದೆ. ಬಾಲ್ಯದ ಮುಗ್ಧಲೋಕ, ಹದಿಹರಯದ ಹೊಂಗನಸಿನ ಜಗತ್ತು ಒಡೆದು ಛಿದ್ರವಾಗಿ ಕವಿಮನಸ್ಸು ವ್ಯಗ್ರವಾಗುತ್ತದೆ, ದಿಕ್ಕೆಡುತ್ತದೆ.


ಇಂಥ ಬಾಲ್ಯ ಕಳೆದ ಬಳಿಕ ಬಂದಾ ಹರೆಯ
ದುಲ್ಕೆಯಿದು ಥಟ್ಟನೆ ಪಳಂಚಲೆದೆಗೆ
ಅಲೆಅಲೆಗಳೆದ್ದು ಬಗೆ ಕದಡಿ ಹೋದುದು ಶಾಂತ
ಸರದೊಳಾವುದೋ ಕಲ್ಲು ಬಿದ್ದ ಹಾಗೆ

ಹಲವು ತಾನಗಳ ಸಂತಾನವಾದುದು ಮಧುರ
ನೊಳಬಾಳು; ಹರಯದೊಡ್ದೋಲಗದಲಿ
ತನೆಗೆಲ್ಲಿ ನೆಲೆ? ಬಾಳಹಾಡಿಗೆಲ್ಲಿಹುದು ಬೆಲೆ?
ಎಂದು ಮುರುಟಿದನು ತನುಮನಗಳಲ್ಲಿ (ಒಳತೋಟಿ)


ಅತ್ಯುತ್ಸಾಹ ಇಲ್ಲಿ ತಲ್ಲಣದ ದನಿಯಾಗುತ್ತದೆ. ಆವೇಶ ಹದಗೊಂಡು ನೋವು ಮನಸ್ಸನ್ನು ಆಕ್ರಮಿಸುತ್ತದೆ. ‘ತನ್ನನೆಲೆ’ಯನ್ನು ಹುಡುಕಿಕೊಳ್ಳುವ ತವಕದಲ್ಲಿ ಕವಿಮನಸ್ಸು ಅಸ್ವಸ್ಥಗೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ಸಹಜವಾಗಿ ತಂಪೆದೆಗೆ ಸಮಾಧಾನ ನೀಡಬಹುದಾದ ಪ್ರೀತಿ ಸ್ನೇಹಗಳಿಂದಲೂ ಕವಿ ವಂಚಿತರಾದಂತೆ ತೋರುತ್ತದೆ.


ಕಂಡು ಮಾತನಾಡಿ ಮೈ
ದಡವಿ ನಗಿಸಿ ನಲಿವರಿಲ್ಲ
ಬೆಂದ ಬಗೆಗೆ ಸೊದೆಯನೆರೆದು
ಕಂಬನಿಯ ತೊಡೆವರಿಲ್ಲ (ಗಾಳಿಯೊಡನೆ)


ಮಾನವ ಸಹಜ ಸಂಬಂಧಗಳಿಂದ ದೊರಕಬಹುದಾಗಿದ್ದ ಪ್ರೀತಿಯಿಂದ ವಂಚಿತರಾದ ಕವಿ ಹೇಳುತ್ತಾರೆ:


ಕಲ್ಲಾಗು ಕಲ್ಲಾಗು ಬಾಳ ಬಿರಿಗಾಳಿಯಲ್ಲಿ 
ಅಲ್ಲಾಡದೆಯೆ ನಿಲ್ಲು ಜೀವ (ಕಲ್ಲಾಗು ಕಲ್ಲಾಗು)


ಹತಾಶೆಯ ಸ್ಥಿತಿಯಲ್ಲಿ ಕವಿ ಮನಸ್ಸು ನಿಷ್ಟುರವಾಗಲು ಪ್ರಯತ್ನಿಸುತ್ತದೆ. ಇಂಥ ಸ್ಥಿತಿಯಲ್ಲಿ ಹರಯದ ಮನಸ್ಸನ್ನು ಸಹಜವಾಗಿ ಸೆಳೆಯಬಹುದಾಗಿದ್ದ ಹೆಣ್ಣಿನ ಸ್ನೇಹ ಕವಿಗೆ ಕಪಟವೆನಿಸುತ್ತದೆ. ಕವಿ ಅನುಭವಿಸುವ ಈ ಹತಾಶ ಸ್ಥಿತಿ ಸ್ವಾನುಕಂಪೆಯಾಗಿ ಕರುಣಾಜನಕ ಸ್ಥಿತಿ ತಲುಪದೆ, ತನ್ನನ್ನು ತಾನು ಅರ್ಥಮಾಡಿಕೊಳ್ಳುವ ಸಾಧನವಾಗಿ, ಏಕಾಗ್ರತೆಗೆ ಧ್ಯಾನಕ್ಕೆ ಹಿನ್ನೆಲೆಯಾಗಿ ನಿಲ್ಲುವಲ್ಲಿ ಅಡಿಗರ ಕಾವ್ಯದ ಸತ್ವವಿದೆ. ಈ ಹಂತದಲ್ಲಿ ಅಡಿಗರ ಕಾವ್ಯ ‘ಬಗೆಯೋಳಗನೇ ತೆರೆದು ನೋಡುವ’ ರೀತಿಯದಾಗುತ್ತದೆ.


ಒಲವೆಯೆಂದು ನಲವೆಯೆಂದು ನಾವು ಹುಸಿಯ ಮುಸುಕನು
ತೊಡಿಸಿ ನಿಜಕೆ ಮೆರೆವೆವು
ಒಲವು ಸುಳ್ಳು ನಲವು ಜಳ್ಳು ನಮ್ಮ ನಾವೆ ವಂಚಿಸುವೆವು
ಇಲ್ಲದುದನೆ ಹೊರೆವೆವು
ನಾನೆ ನನ್ನ ನಲ್ಲ ನಲ್ಲೆ ಒಲುಮೆ ಸಂಭ್ರಮ
ಉಳಿದುದೆಲ್ಲ ವಿಭ್ರಮ (ಬಿಡುಗಡೆಯ ಹಾಡು)


ಎಂದು ಹೇಳುವಲ್ಲಿ ಕವಿ ಪ್ರೀತಿ-ಸ್ನೇಹಗಳ ಬದುಕನ್ನು ಭ್ರಮೆಯೆಂದು ಕರೆದು ಅದನ್ನು ನಿರಾಕರಿಸುತ್ತಾರೆ. ಅಷ್ಟೇ ಅಲ್ಲ ಇವುಗಳಿಂದೆಲ್ಲ ದೂರ ಹೋಗಲು ಬಯಸುತ್ತಾರೆ:

ಓಡಲೆಳಸುತಿಹುದು ಜೀವ ದೂರ ದೂರ ಜನವಿದೂರ
ವಿಪಿನದೆಡೆಗೆ (ಓಡಲೆಳಸುತಿಹುದು)


ಸ್ನೇಹ-ಪ್ರೀತಿ, ಕೋಪ-ತಾಪ, ಅಳು-ನಗು ಎಲ್ಲವನ್ನೂ ನಿರಾಕರಿಸಿ ಜನವಿದೂರ ಹೋಗಬಯಸುವ ಈ ಕಾವ್ಯ ಬದುಕನ್ನೇ ನಿರಾಕರಿಸುವಂಥದಾಗಿ ತೋರುವುದು ಮೇಲ್ನೋಟಕ್ಕೆ ಸಹಜ. ಆದರೆ ಮೇಲ್ಪದರದ ಈ ಆಕ್ರೋಶದ ಹಿಂದಿನ ಆಳವಾದ ವಿಷಾದ ವಾಸ್ತವ ಬದುಕಿನ ಸ್ವೀಕರಣೆಯ ಕಡೆ ಮುಖಮಾಡಿದೆ. ಬದುಕಿನಲ್ಲಿ ಹಿರಿಯಾಸೆ ಹೊತ್ತ ಮಹತ್ವಾಕಾಂಕ್ಷೆಯ ಕವಿ ಮೋಹದ ಸುಳಿಯೊಳಗೆ ಸಿಲುಕಬಾರದೆಂಬ ಎಚ್ಚರದಿಂದ ಇವೆಲ್ಲವನ್ನೂ ಮೀರಲು ಬಯಸುತ್ತಾರೆ. ಕವಿಯ ಈ ಮಹತ್ವಾಕಾಂಕ್ಷೆ ಉನ್ನತವಾದುದ್ದನ್ನು ತನ್ನದಾಗಿರಿಸಿಕೊಳ್ಳಬೇಕೆಂಬ ಬಯಕೆ – ಇದರಿಂದಾಗಿ ಅಡಿಗರ ಕಾವ್ಯ ದೈನಿಕ ಸಹಜ ವಿವರಗಳಿಂದ, ಬದುಕಿನ ವೈವಿಧ್ಯದಿಂದ, ಕೌಟುಂಬಿಕ ಜಗತ್ತಿನಿಂದ ವಂಚಿತವಾಗುತ್ತದೆ. ದಿನನಿತ್ಯದ ನೋವು, ನಲಿವು, ಉತ್ಸಾಹ, ಚೆಲುವು ಇವೆಲ್ಲವೂ ಅವರ ಕಾವ್ಯದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಕವಿ ಬದುಕಿನ ಸ್ನೇಹ, ಪ್ರೀತಿ, ಚೆಲುವು, ಒಲವುಗಳಿಗೆ ಜಡರೇನೂ ಅಲ್ಲ. ಅವರ ಮನಸ್ಸು ಅದರಿಂದ ಮುದಗೊಳ್ಳುತ್ತದೆ. ಆದರೆ ಒಟ್ಟು ಕಾವ್ಯದ ಸಂದರ್ಭದಲ್ಲಿ ಅಂಥ ಕವಿತೆಗಳು ಅಮುಖ್ಯವಾಗುತ್ತವೆ. ಅಡಿಗರದು ಮುಖ್ಯವಾಗಿ ಧ್ಯಾನರೂಪೀ ಮನಸ್ಸು. ಅವರದೇ ಮಾತಿನಲ್ಲಿ ಹೇಳುವುದಾದರೆ – ‘ಹುತ್ತಗಟ್ಟಿದ ಚಿತ್ತ’.

ಬದುಕಿನಲ್ಲಿ ತಾನು ಅನುಭವಿಸಿದ ನೋವು, ಅಪಮಾನ, ಪ್ರೀತಿಯ ಕೊರತೆ-ಸ್ವಭಾವತಃ ಅಂತರ್ಮುಖಿಯಾದ ಕವಿಯನ್ನು ಮತ್ತಷ್ಟು ಅಂತರ್ಮುಖಿಯಾಗುವಂತೆ ಮಾಡುತ್ತವೆ. ಆದರೆ ಈ ಅಂತರ್ಮುಖತೆ ಹೊರಜಗತ್ತಿನ ಜೊತೆ ಸಂಪರ್ಕ ಕಡಿದುಕೊಳ್ಳದೆ, ಅದನ್ನು ಅರ್ಥಮಾಡಿಕೊಳ್ಳುವ ಸಮರ್ಥ ರೀತಿಯಲ್ಲಿ ಅಡಿಗರ ಕಾವ್ಯ ರೂಪುಗೊಳ್ಳುತ್ತದೆ. ಆದ್ದರಿಂದಲೇ ಅಡಿಗರ ನಂತರದ ಕಾವ್ಯ ಏಕಕಾಲಕ್ಕೆ ವೈಯಕ್ತಿಕವೂ ಸಾಮಾಜಿಕವೂ ಆಗಿಬಿಡುತ್ತದೆ.

ಅನ್ಯರೊಳು ಲೋಪದೋಷಗಳ ಬೆದಕಲು ಬೆದರಿ
ತನ್ನೆದೆಯನೇ ಗುಡಿಸಲನುವಾದನು (ಒಳತೋಟಿ)

ಈ ಸ್ವವಿಮರ್ಶೆ ಅಡಿಗರ ಕಾವ್ಯದ ಪ್ರಧಾನವಾದ ಅಂಶ. ತನ್ನನ್ನು ಅರ್ಥಮಾಡಿಕೊಳ್ಳುತ್ತಲೇ ಸಮಾಜವನ್ನೂ, ಬದುಕನ್ನೂ ಅರ್ಥಮಾಡಿಕೊಳ್ಳುವ ಕ್ರಮ-ಅಡಿಗರ ಕಾವ್ಯರೀತಿ. ಅವರ ಆರಂಭದ ಕವಿತೆಗಳನ್ನು ವೈಯಕ್ತಿಕ-ಸಾಮಾಜಿಕ ಕವಿತೆಗಳೆಂದು ಸರಳವಾಗಿ ವಿಭಾಗಿಸುವುದು ಸಾಧ್ಯ. ಆದರೆ ನಂತರದ ಕವಿತೆಗಳು ಈ ರೀತಿಯ ಸರಳ ವಿಂಗಡಣೆಗೆ ಸಿಕ್ಕದಂಥವು.


ಮರೆತುಬಿಡಲೊ ಮಗುವೆ ನಿನ್ನ ಒಲವಿನಂಗಭಂಗವ
ತೆರೆಯೋ ಅಂತರಂಗವ

ಅಲ್ಲಿ ಹುಡುಕು ಕಳಚಿಬಿದ್ದ ನಿನ್ನ ಜೀವರತ್ನವ
ತನ್ನತನದ ಸತ್ವವ

ಸಿಕ್ಕಿರಬಹುದು, ಸಿಕ್ಕದಿದ್ದರೇನು? ಹುಡುಕಾಟವೇ
ಅದರ ದಿವ್ಯಪಾರವೇ

ಎದೆಗೆ ಬಲವ ಮಾತೆಗೆ ಧೃತಿಯ ಬಾಳಿಗೊಂದು ಶಾಂತಿಯ
ನೀಡಬಹುದು ಕಾಂತಿಯ (ಬಿಡುಗಡೆಯ ಹಾಡು)

ಬಗೆ ತೆರೆದು ನೋಡುವ, ತನ್ನತನದ ಸತ್ವವನ್ನು ಕಂಡುಕೊಳ್ಳುವ ಮನೋಭಾವ ಮೊದಲ ಕವಿತೆ ‘ನನ್ನ ನುಡಿ’ಯಲ್ಲಿಯೇ ಪ್ರಕಟವಾಗಿದ್ದರೂ, ಇಲ್ಲಿ ಅದು ಹರಳುಗಟ್ಟುತ್ತದೆ. ಕವಿಗೆ ಇಲ್ಲಿ ಗುರಿಯ ಜೊತೆಗೆ ಪ್ರಕ್ರಿಯೆಯೂ ಮುಖ್ಯ. ಗುರಿಯತ್ತ ಸಾಗುವುದೇ, ಆ ಹುಡುಕಾಟವೇ ಅರ್ಥಪೂರ್ಣವಾದುದೆಂದು ಕವಿ ನಂಬುತ್ತಾರೆ. ಅಡಿಗರ ಮುಂದಿನ ಕಾವ್ಯವೆಲ್ಲ ಆ ‘ಹುಡುಕಾಟವೇ’ ಆಗಿದೆ. ಹೀಗಾಗಿ ಅವರ ಕಾವ್ಯದಲ್ಲಿ ವೈವಿಧ್ಯ ವಿಸ್ತಾರ ಇಲ್ಲದಂತಾಯಿತು. ಆದರೆ ಆಳ ಲಭ್ಯವಾಯಿತು. ಈ ಹಂತದಲ್ಲಿ ಅವರ ಅಂತರಂಗದಲ್ಲಿ ಒಂದು ಬಗೆಯ ಕ್ರಾಂತಿ ನಡೆದು ಅವರ ಕಾವ್ಯ ಸಂಪೂರ್ಣವಾಗಿ ಹೊಸ ರೂಪ ತಾಳಿತು. ಈ ಹಂತದ ಅವರ ಕಾವ್ಯಕಲ್ಪನೆಯನ್ನು ಅಡಿಗರೇ ಹೀಗೆ ವಿವರಿಸಿದ್ದಾರೆ.

೧ ಮೇಲ್ಪದರುಗಳನ್ನಷ್ಟೇ ಒಳಗೊಳ್ಳುವ ಹಾಗೆ ಕಾವ್ಯರಚನೆಯಾದರೆ ಉತ್ತಮ ಕಾವ್ಯ ಸಿದ್ಧಿಸುವುದಿಲ್ಲ. ಪ್ರಜ್ಞೆಯ ಜೊತೆಗೆ ಪ್ರಜ್ಞೆಯ ತಳದಲ್ಲಿ ಅಥವಾ ಅದರ ಮೇಲಕ್ಕೆ ಇರುವ ಎಲ್ಲ ಒಳ ಅಂಶಗಳೂ ಹಠಾತ್ತಾಗಿ ಸೇರಿದರೆ ಉತ್ತಮ ಕಾವ್ಯ ಆಗುತ್ತದೆ. ಇದಕ್ಕೆ ನಿರಂತರ ಶ್ರಮ ಹೇಗೋ ಹಾಗೇ ಅಸಾಧಾರಣವಾದ ತಾಳ್ಮೆಯೂ ತಕ್ಕ ಮುಹೂರ್ತಕ್ಕಾಗಿ ಕಾಯುವುದೂ ಅಗತ್ಯ.

೨. ಸಾಧಿಸಬೇಕಾದದ್ದು ಇತರರಿಗೆ ಮನೋರಂಜಕವಾಗುವ ಅಭಿವ್ಯಕ್ತಿಯನ್ನಲ್ಲ. ತನಗೆ ಅತ್ಯಂತ ಸಜವಾದುದನ್ನು, ಆಡುವ ಮಾತು ಅಂತರನುಭವಾದ ತದ್ರೂಪು ಆಗುವ ಹಾಗೇ, ಕವಿಯ ವ್ಯಕ್ತಿ ವಿಶೇಷವನ್ನು ತೆರೆಯುವ ಹಾಗೆ. 

ಈ ಹಿನ್ನೆಲೆಯಲ್ಲಿ ಕವಿ ವ್ಯಕ್ತಿತ್ವದ ಒಳಹೊರಗುಗಳನ್ನು ಒಂದೇ ಬಿಂದುವಿನಲ್ಲಿ ಹಿಡಿಯುವ ಪ್ರಯತ್ನಕ್ಕೆ ತೊಡಗುತ್ತಾರೆ. 

ಅಡಿಗರ ಕಾವ್ಯದುದ್ದಕ್ಕೂ ಕಂಡುಬರುವ ಪ್ರಧಾನ ಅಂಶಗಳಲ್ಲೊಂದು ಭೂಮಿ ಆಕಾಶಗಳ ಸೆಳೆತಕ್ಕೆ ಸಿಕ್ಕ ಮಾನವನ ಸ್ಥಿತಿ. ಇದು ದೇಹ-ಮನಸ್ಸುಗಳ ಸಂಘರ್ಷವೂ ಹೌದು; ಆದರ್ಶ ವಾಸ್ತವಗಳ ನಡುವಿನ ತಿಕ್ಕಾಟವೂ ಹೌದು. “ಇಲ್ಲಿ ಭೂಮಿಯೆಂದರೆ ಪ್ರಥ್ವಿ ಎಂದಷ್ಟೇ ತಿಳಿಯಬಾರದು. ಇಹ ಇಲ್ಲಿಯದು, ಈ ನಾಗರೀಕತೆ, ಈ ನಾಗರೀಕತೆಯ ಎಲ್ಲ ವಿಪರ್ಯಾಸಗಳನ್ನೂ ಒಳಗೊಂಡದ್ದು ಎಂದು ತಿಳಿಯಬೇಕು.”

ಎತ್ತರೆತ್ತರಕ್ಕೆ ಏರುವ ಮನಕೂ
ಕೆಸರ ಲೇಪ ಲೇಪ
ಕೊಳೆಯ ಕೊಳಚೆಯಲ್ಲಿ ಮುಳುಗಿ ಕಂಡನೋ
ಬಾನಿಗೊಂದು ಪೆಂಪ (ಇದು ಬಾಳು)

ಆದರ್ಶ ಸಾಧನೆಯ ಧ್ರುವತಾರೆಯೊಂದು ಬಾ
ನಂಗಳದಿ ನಿಂತು ಕೈಮಾಡಿ ಕರೆಯುತಿಹುದು
ವಿಷಯ ಸುಖದಾಸೆ ಕಾರ್ಮುಗಿಲಾಗಿ ಹಗೆಯಾಗಿ
ದೃಷ್ಟಿಯನು ನೆಲದೆಡೆಗೆ ದೂಡುತಿಹುದು (ಒಳತೋಟಿ)

ಅನೇಕ ಕವಿತೆಗಳಲ್ಲಿ ಮತ್ತೆ ಮತ್ತೆ ವ್ಯಕ್ತವಾಗುವ ಈ ಸಂಘರ್ಷ, ನೆಲಮುಗಿಲಿನ ಸೆಳೆತ ಸೇ೦ದ್ರಿಯವಾಗಿ ಅಭಿವ್ಯಕ್ತಿ ಪಡೆಯುವುದು ‘ಮೋಹನ ಮುರಲಿ’ ಕವಿತೆಯಲ್ಲಿ. ಅಡಿಗರ ಕಾವ್ಯ ಬೆಳವಣೆಗೆಯಲ್ಲಿ ಇದು ಮುಖ್ಯ ಕವಿತೆ. ಲೌಕಿಕ ಸುಖದಲ್ಲಿ ತೃಪ್ತಿ ಪಡೆದಿದ್ದ ಮನಸ್ಸು ಅಲೌಕಿಕದ ಸೆಳೆತಕ್ಕೆ ಒಳಗಾಗಿರುವ ಚಿತ್ರವನ್ನು ಈ ಕವಿತೆ ಸೊಗಸಾಗಿ ಚಿತ್ರಿಸುತ್ತದೆ. ಇದಿಷ್ಟೇ ಕವಿತೆಯ ಆಶಯವಾಗಿದ್ದರೆ ‘ಮೋಹನ ಮುರಲಿ’ ಮಹತ್ವದ್ದಾಗುತ್ತಿರಲಿಲ್ಲ.

ಇರುವುದೆಲ್ಲವ ಬಿಟ್ಟು ಇರದುರೆಡೆಗೆ ತುಡಿವುದೆ ಜೀವನ 
(ಮೋಹನ ಮುರಲಿ)

ಅಲೌಕಿಕ ಹಂಬಲದ ಉತ್ಕಟ ಕ್ಷಣದಲ್ಲಿಯೇ ಕವಿಗೆ ಈ ಪ್ರಶ್ನೆಯೂ ಮೂಡುತ್ತದೆ. ಇಹದ ಬಿಡುಗಡೆಯ ಸುಖದ ಹಂಬಲವನ್ನು ತೀವ್ರವಾಗಿ ಚಿತ್ರಿಸುವಂತೆಯೇ ಇಲ್ಲಿಯ ‘ಬಂಧನ’ದ ಪ್ರಿಯ ಅನುಭವವನ್ನೂ ಕವಿತೆ ದಟ್ಟವಾಗಿ ಚಿತ್ರಿಸುತ್ತದೆ. ಇವೆರಡರ ಸಂಘರ್ಷದಲ್ಲಿ ಕವಿತೆ ಪ್ರಾಮಾಣಿಕವೂ, ಶೋಧಕವೂ ಆಗುತ್ತದೆ.

ಮುಗಿಲಿನ ಹಂಬಲ ಸಹಜ ನಿಜ. ಈ ಹಂಬಲ ಬದುಕಿನಾಚೆ ಫಲಿಸುವಂಥದಲ್ಲ; ಈ ಬದುಕಿನಲ್ಲೇ ಆವಿಷ್ಕಾರವಾಗಬೇಕಾದುದು-ಇದು ಅಡಿಗರ ನಿಲುವು.

ಮರ್ತ್ಯಜೀವದ ತರುವೊಳುಮರತೆಯ ಫಲ ತನಗೆ
ಸಿಕ್ಕಬೇಕೆಂದವನು ಭಾವಿಸಿದನು (ಒಳತೋಟಿ)

ಮರ್ತ್ಯದಲ್ಲಿಯೇ ಅಮರತೆಯ ಫಲಿಸಬೇಕೆಂಬುದು ಅಡಿಗರ ಕಾವ್ಯದರ್ಶನ. ಆದ್ದರಿಂದಲೇ ಕವಿ ಬಾನಿನೂರಿನಲ್ಲಿ ನೆಲಸಿರುವ ಒಕ್ಕಲನು ಈ ನೆಲಕ್ಕೆ ಆಹ್ವಾಸಿಸುತ್ತಾರೆ (ಅತಿಥಿಗಳು). ಕ್ಷಣ ಬಂದು ಮಿಂಚಿ ಮರೆಯಾಗುವ ಅನೂಹ್ಯ ಅತಿಥಿಗಳನ್ನು ಇಲ್ಲೇ ನೆಲೆನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಈ ಮಣ್ಣಿನ ಮನದಲ್ಲಿ ಹೊನ್ನನ್ನು ಬೆಳೆಯಬಲ್ಲಂಥ ಅಪೂರ್ವ ತೇಜದ ಮಾಂತ್ರಿಕರನ್ನು ಕವಿ ಆಹ್ವಾನಿಸುತ್ತಾರೆ.

ಅಡಿಗರ ಈ ಶೋಧನೆ – ಮರ್ತ್ಯದಲ್ಲಿಯೇ ಅಮರತೆಯ ಫಲ ಸಾಧಿಸುವ ಶೋಧನೆ-ಉದ್ದಕ್ಕೂ ಆತ್ಮಶೋಧನೆಯಾಗಿಯೇ ಬೆಳೆಯುತ್ತ ಹೋಗುತ್ತದೆ. ಈ ನೆಲದಲ್ಲಿಯೇ ಹುಟ್ಟಿದ ರಾಮ, ಕೃಷ್ಣ, ಬುದ್ಧ, ಗಾಂಧಿ ದೊಡ್ಡವರಾದರು, ಮಹಾತ್ಮರಾದರು. ನಾನು ಮಾತ್ರ ಹಾಗೆಯೇ ಉಳಿದೆನೇಕೆ?

ನಾನು ಅವನು ಒಂದೆ ಲೋಹ
ಕಬ್ಬಿಣ-ಕರಿ ಕಬ್ಬಿಣ
ಯಾವ ರಸವು ಸೋಂಕಿತವನ?
ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ;
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ (ನನ್ನ ಅವತಾರ)

ಕಬ್ಬಿಣ್ಣ ಚಿನ್ನವಾಗಿ ರೂಪುಗೊಂಡ ಬಗೆ ವ್ಯಕ್ತಿತ್ವ ಮಾಗಬೇಕಾದ ರೀತಿಯನ್ನು ಹೇಳುತ್ತದೆ. ಇದು ಹೇಗೆ ಸಾಧ್ಯ? ಯಾವ ಸಿದ್ಧ ಮಾರ್ಗದರ್ಶನವೂ ಈತನ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಈತನನ್ನು ಕರೆದುಕೊಂಡು ಹೋಗಬೇಕಾಗಿದ್ದ ರೈಲು ಈತ ಕಾಯುತ್ತಿದ್ದ ನಿಲ್ದಾಣಕ್ಕೆ ಬರುವುದೇ ಇಲ್ಲ. (ಹಿಮಗಿರಿಯ ಕಂದರ) ನಿಲ್ದಾಣಕ್ಕೂ, ರೈಲಿಗೂ ನಡುವೆ ಬಿರುಕು ಬಿಟ್ಟಿದೆ. ಇಂದ್ರಿಯ ಜೀವನಕ್ಕೂ, ಅಲೌಕಿಕದ ಆಕರ್ಷಣೆಗೂ ನಡುವೆ ಬಿರುಕು ಉಂಟಾದ ಸ್ಥಿತಿಯಲ್ಲಿ ಅವನಿಗನ್ನಿಸುತ್ತದೆ –

ಇವಳೆದೆಗೆ ಬೇರಿಳಿದ ಕಾಲು ನನ್ನದು
ಬರಿದೆ ನಕ್ಷತ್ರ ಲೋಕಕ್ಕೂ ರೈಲುಬಿಟ್ಟೆ (ಭೂಮಿಗೀತ)

ಹಿಡಿದ ಗುರಿ ಸಾಧಿಸಬೇಕೆಂಬ ಹಟದಲ್ಲಿ ಕವಿ ಮನಸ್ಸು ಮತ್ತೆ ಮತ್ತೆ ಜಿಜ್ಞಾಸೆಗೊಳಗಾಗುತ್ತದೆ. ತನ್ನ ಇಡೀ ವ್ಯಕ್ತಿತ್ವವನ್ನು ಪಣಕ್ಕೊಡಿ ಕವಿ ಶೋಧನೆಗೆ ತೊಡಗುತ್ತಾರೆ. ಗುರಿ ಸಾಧಿಸಬೇಕಾದರೆ ತನ್ನ ಒಟ್ಟು ವ್ಯಕ್ತಿತ್ವದಲ್ಲೇ, ಒಟ್ಟು ಜೀವನದಲ್ಲೇ ಸಾರ್ಥಕ ಮಾರ್ಪಾಟಾಗಬೇಕು ಎಂಬ ಅರಿವು ಮೂಡುತ್ತದೆ. ಅದಕ್ಕಾಗಿ ಕವಿ ಪ್ರಾರ್ಥಿಸುತ್ತಾರೆ:

ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು
ಹೊತ್ತಿನ ಮುಖಕ್ಕೆ ಶಿಖೆ ಹಿಡಿವುದನ್ನು, ಹಾಗೇ
ಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನೂ
ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದು
ಬರಲಿ ಪರಿಪೂರ್ಣಾವತಾರಿ ವಿನತ ಪುತ್ರ (ಪ್ರಾರ್ಥನೆ)

ವಿನತೆಯ ಅವಸರದಲ್ಲಿ ತೊಡೆ ಹೊರೆಯದೆ ಹುಟ್ಟಿದ ಅರ್ಧಾವತಾರಿ ಅರುಣನಂತಾಗದೆ ಪರಿಪೂರ್ಣಾವತಾರಿ ಗರುಡನಂತಾಗಬೇಕೆಂದು ಕವಿಯ ಪ್ರಾರ್ಥನೆ. ಈ ವಿವೇಕದ ಪ್ರಾರ್ಥನೆ ಜೀವನತತ್ವವೂ ಹೌದು; ಕಾವ್ಯ ದರ್ಶನವೂ ಹೌದು. ಅನಂತಮೂರ್ತಿಯವರು ಹೇಳುವ ಹಾಗೆ ‘ಪ್ರಾರ್ಥನೆ’ ಅಡಿಗರ ಒಟ್ಟು ಕಾವ್ಯದ ಮ್ಯಾನಿಫೆಸ್ಟೋ ಎನ್ನಬಹುದು.

ಈ ಪ್ರಾರ್ಥನೆ ಸಾಕಾರವಾಗಲು, ಬದುಕನ್ನು ನಿಜವಾಗಲು – ಪರಂಪರೆಯ ಸತ್ವವನ್ನೂ, ಅಂತಃಶಕ್ತಿಯನ್ನೂ, ಕನಸು-ವಾಸ್ತವಗಳ ಹಠಾತ್ ಸಂಯೋಗವನ್ನೂ ವರ್ತಮಾನದಲ್ಲಿ ಸಾರ್ಥಕಪಡಿಸಿಕೊಳ್ಳಬೇಕಾದ ಅಗತ್ಯವನ್ನು ಕವಿ ಮನಗಾಣುತ್ತಾರೆ. 

ಅಗೆವಾಗ್ಗೆ ಮೊದಲ ಕೋಶಾವಸ್ಥೆ ಮಣ್ಣು
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ
ವಿಗ್ರಹಕ್ಕೊಗಿಸುವ ಅಸಲು ಕಸಬು (ಭೂತ)

“ರೂಢಿಯಾದದ್ದರ ಒಳಹೊಕ್ಕು ಸಿಡಿಮದ್ದಿನ ಹಾಗೆ ಸ್ಫೋಟಿಸಿ ಅದನ್ನು ಅಸ್ತವ್ಯಸ್ತಗೊಳಿಸದೆ ಹೊಸ ಕಾಲದ, ಹೊಸ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದಕಾರಣ ಯಾಂತ್ರಿಕ ವ್ಯವಸ್ಥೆಯಲ್ಲಿ ಸೇರಿದ ನಮ್ಮ ಸಂಸ್ಕೃತಿಯ ಮೌಲ್ಯಗಳ ತಿರುಳನ್ನು ಭೇದಿಸಿ ಮೂಲಬೀಜಗಳನ್ನು ಹೊರತೆಗೆದು ಅದಕ್ಕೆ ಇಂದಿನ ತಕ್ಕ ರೂಪಗಳನ್ನು ಸಿದ್ಧಪಡಿಸುವುದೇ ಬುದ್ಧಿಯ ಮೂಲಕ ಕೆಲಸ ಮಾಡುವವನ ಕರ್ತವ್ಯ”

ಹೀಗೆ ತನ್ನ ಇಷ್ಟದೇವತಾ ವಿಗ್ರಹವನ್ನು ರೂಪಿಸಿಕೊಳ್ಳಲು ಸಹಜವಾಗಿಯೇ ವಿಶೇಷ ಸಾಮರ್ಥ್ಯಬೇಕು, ಶ್ರದ್ಧೆಬೇಕು, ಸಂಕಲ್ಪಬಲ ಬೇಕು. ಸಕಲ್ಪಬಲದಿಂದ ಮಾತ್ರ ವ್ಯಕ್ತಿ ಔನ್ನತ್ಯವನ್ನು ಸಾಧಿಸುವುದು ಸಾಧ್ಯ. ಸಾಮಾನ್ಯವಾಗಿ ಹುಟ್ಟಿದ ರಾಮ ಈ ನೆಲದ ಪ್ರಜ್ಞೆಯನ್ನು ಹೀರಿನಿಂತು ಸಂಕಲ್ಪಬಲದಿಂದ ಉನ್ನತ ಚೇತನವಾಗಿ ಬೆಳೆದುನಿಂತ; ಅಂತರಂಗ ಪರಿವೀಕ್ಷಣೆಯ ಅಗ್ನಿದಿವ್ಯದಲ್ಲಿ ತನ್ನನ್ನು ತಾನು ಕಂಡುಕೊಂಡು ಪುರುಷೋತ್ತಮನಾದ.

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪರೇಷೆ (ಶ್ರೀರಾಮನವಮಿಯ ದಿವಸ)

ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಪುರುಷೋತ್ತಮನಾಗಿ ಬೆಳೆದ ರಾಮನ ಬದುಕಿನಲ್ಲಿ, ಆತನ ವ್ಯಕ್ತಿತ್ವ ವಿಕಾಸ ಕ್ರಮದಲ್ಲಿ ಅಡಿಗರಿಗೆ ಆಸಕ್ತಿ; ಕಪಿಚೇಷ್ಟೆಯ ವ್ಯಕ್ತಿ ತನ್ನಲ್ಲೇ ಹತ್ತಿ ಉರಿದು ಹನುಮನ ಚೇತನವನ್ನು ಒಳಗೊಳ್ಳುವುದು ಸಾಧ್ಯವೆಂದು ಅವರ ನಂಬುಗೆ (ವರ್ಧಮಾನ) . ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸವಾಗಬೇಕು. ಉನ್ನತ ಚೇತನವಾಗಿ ರೂಪುಗೊಳ್ಳಬೇಕು – ಇದೇ ಅಡಿಗರ ದರ್ಶನ.

“ಅಡಿಗರ ದೃಷ್ಟಿಯಲ್ಲಿ ಸಮಾಜದ ಮೂಲ ಘಟಕ ವ್ಯಕ್ತಿ. ಯಾವ ಬಂಡಾಯವಾಗುವುದಿದ್ದರೂ ಅದು ವ್ಯಕ್ತಿಯಲ್ಲಿ. ಈ ಬಂಡಾಯದ ಕಲ್ಪನೆ ಕೂಡ ವಿಶಿಷ್ಟವಾದದ್ದು. ಸೃಷ್ಟಿಯಲ್ಲಿನ ಪ್ರತಿಯೊಂದು ಚೇತನವೂ ಬೆಲೆಯುಳ್ಳದ್ದು, ಮುಂದೆ ವಿಕಾಸಗೊಂಡು ಪರಿಪೂರ್ಣಾವಸ್ಥೆಗೆ ಸಲ್ಲಬಹುದು ಸ್ವವಿಶಿಷ್ಟವಾದ ಶೀಲದ್ರವ್ಯವೇನನ್ನೋ ಪಡೆದು ಬಂದಿರುವಂಥದ್ದು. ಅದನ್ನು ಕಂಡುಕೊಳ್ಳುವುದೇ, ಬೆಳೆಸಿಕೊಳ್ಳುವುದೇ, ಫಲಾವಸ್ಥೆಗೆ ಮುಟ್ಟಿಸುವುದೇ ಬದುಕಿನ ಗುರಿ. ಅದೇ ನಿಜವಾದ ಸ್ವಸ್ವರೂಪ ದರ್ಶನ, ಆತ್ಮ ಸಾಕ್ಷಾತ್ಕಾರ.”

“ಮಾನವನ ಹೆಚ್ಚಳ ಅವನ ವ್ಯಕ್ತಿತ್ವದ ವಿಕಾಸದಲ್ಲಿದೆ. ಪ್ರತಿಯೊಬ್ಬರ ವ್ಯಕ್ತಿತ್ವ ಬದುಕಲ್ಲಿ ಪ್ರತ್ಯಕ್ಷವಾದರೆ, ಬದುಕಿಗೆ ವಿವಿಧತೆ ಬರುತ್ತದೆ. ಸಮಾಜ ಈ ವ್ಯಕ್ತಿತ್ವದ ಪ್ರತ್ಯಕ್ಷತೆಗೆ ವಿರೋಧವಾಗಿ ಅಡಚಣೆಗಳನ್ನು ಒಡ್ಡುತ್ತಲೇ ಇರುತ್ತದೆ. ಅದಕ್ಕಾಗಿ ಸತತ ಬಂಡಾಯ ಮಾಡಬೇಕು. ಅಲ್ಲದೆ, ಅಡಿಗರ ಮಾಗಿದ ದೃಷ್ಟಿಯಲ್ಲಿ ಕ್ರಾಂತಿ ವೈಯಕ್ತಿಕವಾಗಿಯೇ ಆಗಬೇಕು. ಮಂದೆ ಜೊತೆ-ಕ್ರಾಂತಿ ಮಾಡುವುದು ನಿರರ್ಥಕವಷ್ಟೇ ಅಲ್ಲ, ಅದು ಬೇಕು – ಬೇಡಗಳನ್ನು ದಾಟಿ, ದಬ್ಬಾಳಿಕೆಯಲ್ಲಿ, ಪೀಡಕ ರಾಜ್ಯದಲ್ಲಿ ಕೊನೆಯಾಗುತ್ತದೆ. ಈ ಸತ್ಯ ನಮಗೆ ಕಾಣುವ ಹಾಗೆ, ಸ್ಪರ್ಶದ ಅನುಭವಕ್ಕೆ ಬರುವ ರೀತಿಯಲ್ಲಿ ಅಡಿಗರ ರೂಪಕಗಳಲ್ಲಿ ಅವತರಿಸುತ್ತದೆ. ನಿಜವಾದ ಪ್ರಜಾರಾಜ್ಯದಲ್ಲಿ ಪ್ರತಿಯೊಬ್ಬನಿಗೂ ತನಗೆ ಸಿಕ್ಕ ಸಿಂಹಾಸನವಿದೆ. ಅದನ್ನು ದೊರಕಿಸಿಕೊಳ್ಳಬೇಕು, ದಂಗೆ ಮಾಡಿ, ಚಿನ್ನ, ಮಣ್ಣು ಮರದ್ದಾಗಬಹುದು ಸಿಂಹಾಸನ – ಡೆಮಾಕ್ರಸಿಯಲ್ಲಿ ಪ್ರತಿ ಪ್ರಜೆಯೂ ರಾಜ. ಈ ಅರ್ಥವನ್ನು ಅಡಿಗರು ಎಷ್ಟು ಸೊಗಸಾಗಿ ಚಿತ್ರಿಸುತ್ತಾರೆ.”

ದಂಗೆಯೇಳಬೇಕಾಗುತ್ತಲೇ ಇರುತ್ತದೆ
ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ (ಬಂಡಾಯ)

ವ್ಯಕ್ತಿತ್ವದ ಸಿದ್ಧಿ ಸಿದ್ಧಿಸುವವರೆಗೆ ಈ ಬಂಡಾಯ ನಿರಂತರ, ಹೋರಾಟ ಅನಿವಾರ್ಯ.

ಅಂತರಂಗದ ಶೋಧನೆಯಂತೆಯೇ ಬಹಿರಂಗದ ತಿಳುವಳಿಕೆಯೂ ವ್ಯಕ್ತಿತ್ವ ವಿಕಾಸದ ಮುಖ್ಯ ಆಯಾಮ. ‘ಪರಿಪೂರ್ಣತೆ’ ಒಳಹೊರಗು’ಗಳ ಸಂಯೋಗದಲ್ಲಿ. ಈ ವೈಯಕ್ತಿಕ – ಸಾಮಾಜಿಕ ಏಕತ್ರ ಬಿಂದುವಿನ ಮತ್ತೊಂದು ಮಜಲು – ‘ಚಿಂತಾಮಣಿಯಲ್ಲಿ ಕಂಡ ಮುಖ’. ‘ಕೂಪ ಮಂಡೂಕ’ದಲ್ಲಿ ತನ್ನೊಳಗಿನ ಚೇತನವನ್ನು ಗೆಳೆಯನೆಂದು ಕರೆದ ಅಡಿಗರು ಅದೇ ಚೇತನವನ್ನು ಇಲ್ಲಿ ಸಭೆಯ ಮಧ್ಯೆ ಸಾಮಾಜಿಕವಾಗಿ ಗುರುತಿಸುತ್ತಾರೆ. ವ್ಯಕ್ತಿತ್ವ ವಿಕಾಸದ ಹಾದಿಯಲ್ಲಿ ತನ್ನ ಮುಖವನ್ನೂ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ದರ್ಶನ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮುಖ್ಯ ಹಂತವೆನ್ನಬಹುದು. 

ಇಡೀ ಮಾನವ ಜನಾಂಗದ ಇತಿಹಾಸವನ್ನೂ ಸಮಕಾಲೀನ ಸ್ಥಿತಿಯನ್ನೂ ಭಿತ್ತಿಯಾಗುಳ್ಳ ಅಡಿಗರ ಕಾವ್ಯ ‘ವ್ಯಕ್ತಿತ್ವ ವಿಕಾಸದ ಹೋರಾಟ’ವನ್ನು ಚಿತ್ರಿಸುವ ಮಹಾಕಾವ್ಯವಾಗಿದೆ.
ನರಹಳ್ಳಿ ಬಾಲಸುಬ್ರಮಣ್ಯ

ಬೆಳಗು -ಅಂಬಿಕಾತನಯದತ್ತ

ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ್-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾತೊಯ್ದಾ

ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು

ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-ಅಮೃತsದ ಬಿಂದು
ಯಾರಿರಿಸಿದವರು ಮುಗಿಲsಮೇಲಿಂ-
ದಿಲ್ಲಿಗೇ ತಂದು
ಈಗ -ಇಲ್ಲಿಗೇ ತಂದು

ತಂಗಾಳೀಯ ಕೈಯೊಳಗಿರಿಸೀ
ಎಸಳೀನಾ ಚವರೀ
ಹೂವಿನ-ಎಸಳೀನಾ ಚವರಿ
ಹಾರಿಸಿ ಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಳಾ ಹಾಡು
ಹೊರಟಿತು-ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣ
ಕಣ್ಣಿದೆ-ಕಾಣsದೋ ಬಣ್ಣ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣ
ಇದು ಬರಿ-ಬೆಳಗಲ್ಲೋ ಅಣ್ಣಾ

Saturday, February 16, 2013

ಪ್ರಭುಶಂಕರ

ಡಾ. ಪ್ರಭುಶಂಕರರು ಫೆಬ್ರುವರಿ 15, 1929ರಂದು ಚಾಮರಾಜನಗರದಲ್ಲಿ ಜನಿಸಿದರು. ತಂದೆ ಕರಿಬಸಪ್ಪ, ತಾಯಿ ರುದ್ರಮ್ಮ. ಅಂದು ಹಳ್ಳಿಯಲ್ಲಿ ಅವಿದ್ಯಾವಂತರೇ ಜಾಸ್ತಿ. ಆದರೂ ತಂದೆ ತಾಯಿಗಳು ಲೋಯರ್ ಸೆಕೆಂಡರಿಯವರೆಗೆ ಓದಿದ್ದುದು ಇವರ ಅದೃಷ್ಟ. ಮಗನಿಗೂ ವಿದ್ಯೆ ಕಲಿಸಿದರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಚಾಮರಾಜನಗರ ಮತ್ತು ಯಳಂದೂರು. ಮೈಸೂರು, ಬೆಂಗಳೂರಿನ ಪ್ರೌಢಶಾಲೆಗಳಲ್ಲಿ ನೆರವೇರಿತು. ರಾಮಕೃಷ್ಣ ಮಿಷನ್ನಿನ ಸಂಪರ್ಕ ಅವರಿಗೆ ಲಭಿಸಿತು. ಹೀಗೆ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಜೀವನ-ಸಾಧನೆ-ಬೋಧನೆಗಳಿಂದ ಪ್ರಭಾವಿತರಾದರು. ಕಾಲೇಜು ಕಲಿತದ್ದು ಬೆಂಗಳೂರಿನಲ್ಲಿ. ತೀ.ನಂ.ಶ್ರೀ, ರಾಜರತ್ನಂ, ಎಂ.ವಿ.ಸೀ, ಡಿ.ಎಲ್.ಎನ್ ಮುಂತಾದ ಶ್ರೇಷ್ಠರ ಮಾರ್ಗದರ್ಶನದಲ್ಲಿ ಕನ್ನಡ ಕಲಿತರು. ಅಂತೆಯೇ ಆರ್. ಗುರುರಾಜರಾವ್, ಎಂ.ರಾಮರಾವ್, ಎಸ್. ಅನಂತನಾರಾಯಣರವರಿಂದ ಇಂಗ್ಲಿಷ್ ಕಲಿತರು.

ಪ್ರಭುಶಂಕರರಿಗೆ ಸಾಹಿತ್ಯ ಪ್ರೇರಣೆ ದೊರೆತದ್ದು ನಾ.ಕಸ್ತೂರಿಯವರಿಂದ. ರಾಶಿಯವರು ಪ್ರಾರಂಭಿಸಿದ್ದ ‘ಕೊರವಂಜಿ’ ಮಾಸಪತ್ರಿಕೆ ಮತ್ತು ಸುಬೋಧ ರಾಮರಾಯರು ಪ್ರಾರಂಭಿಸಿ, ಜಿ.ಎಸ್. ಕೃಷ್ಣರಾಯರ ಸಂಪಾದಕತ್ವದಲ್ಲಿ ನಡೆದ ‘ನಗುವನಂದ’ ಪತ್ರಿಕೆಗಳಿಗೆ ಅನೇಕ ಬಿಡಿ ಬರಹಗಳನ್ನು ಬರೆದರು. ಕುವೆಂಪು, ದೇಜಗೌ, ಕ.ವೆಂ. ರಾಘವಾಚಾರ್ ಮುಂತಾದವರ ಸೆಳೆತದಿಂದ ಮೈಸೂರು ಕಾಲೇಜಿಗೆ ಸೇರಿ ಬಿ.ಎ. ಆನರ್ಸ್‌ ಪಡೆದು ಎಂ.ಎ. ಪದವಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಗಳಿಸಿದರು.

ಪ್ರಭುಶಂಕರರು ಕುವೆ೦ಪು ಪರಮಾಪ್ತರಲ್ಲಿ ಒಬ್ಬರು. ಕುವೆ೦ಪು ಕೈಯ್ಯಳತೆ ದೂರದಲ್ಲಿ ತಮ್ಮ ಜೀವಿತದ ಬಹುತೇಕ ಭಾಗ ಸವೆಸಿದ ಹಿರಿಯ ಜೀವ ಅವರದ್ದು. ಅವರು ಕನ್ನಡದಲ್ಲಿ ಕುವೆ೦ಪು ಬರಹಗಳ ಕುರಿತು ಸಮಗ್ರ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದ ಮೊದಲಿಗರು. ನಾ. ಕಸ್ತೂರಿ ಅವರ ಶಿಷ್ಯರೂ ಆಗಿದ್ದ ಪ್ರಭುಶಂಕರರಿಗೆ ನಾ ಕಸ್ತೂರಿ ಅವರನ್ನು ಕಂಡರೆ ಸಹಾ ಆಪಾರ ಪ್ರೀತಿ. ಪು.ತಿ.ನ ಅವರು ನಿವೃತ್ತರಾಗಿದ್ದಾಗ ಅವರ ನಿವೃತ್ತ ಜೀವನದಲ್ಲಿ ಆರ್ಥಿಕ ಸಹಾಯಕವಾಗುವಂತೆ ಅವರನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ನಿಘಂಟು ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಹಿರಿಯರ ಭಕ್ತಿಕೂಡಾ ಪ್ರಭುಶಂಕರರದ್ದು.

ಬೆಂಗಳೂರಿನ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಪ್ರಭುಶಂಕರರು ಕೋಲಾರ ಮತ್ತು ಮೈಸೂರು ಕಾಲೇಜಿನಲ್ಲಿ 14 ವರ್ಷ, ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ 14 ವರ್ಷ ಸೇವೆ ಸಲ್ಲಿಸಿದರು. ಕನ್ನಡ ಕೃತಿಗಳ ವಿವರಣಾತ್ಮಕ ಗ್ರಂಥಸೂಚಿ, ಗೃಹಸರಸ್ವತಿ ಗ್ರಂಥಮಾಲೆಯಲ್ಲಿ ಅಮೂಲ್ಯ ಗ್ರಂಥಗಳ ಪ್ರಕಟಣೆ ಮಾಡಿದರು. CULTURAL HERITAGE OF INDIAದ ‘ಯುಗಯಾತ್ರಿ ಭಾರತೀಯ ಸಂಸ್ಕೃತಿ’ ಎಂಬ ಕನ್ನಡಾನುವಾದ ಪ್ರಕಟಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಪ್ರಾರಂಭಗೊಂಡಾಗ ಪ್ರಥಮ ಪ್ರಾಧ್ಯಾಪಕರಾದರು. ನಂತರ ಮೈಸೂರು ವಿಶ್ವವಿದ್ಯಾಲಯಕ್ಕೆ ಮರಳಿ, ಅಧ್ಯಯನ ಸಂಸ್ಥೆ ನಿರ್ದೇಶಕತ್ವವಹಿಸಿ . ಪ್ರಾಧ್ಯಾಪಕರಾಗಿ ನಿವೃತ್ತಿಗೊಂಡರು. ಮಂಗಳೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು.

ಕುವೆಂಪುರವರ ವ್ಯಕ್ತಿತ್ವ, ಬೆರಳ್‌ಗೆ ಕೊರಳ್, ಸ್ಮಶಾನ ಕುರುಕ್ಷೇತ್ರ, ಶೂದ್ರತಪಸ್ವಿ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದರು. MESSAGE OF UPANISHADSನ್ನು ‘ಉಪನಿಷದ್ ಸಂದೇಶ’ ಎಂದು ಕನ್ನಡಕ್ಕೆ ತಂದರು. ಜನಮನ (ವ್ಯಕ್ತಿಚಿತ್ರ) ; ಎತ್ತಿಗೆ ಜ್ವರ ಎಮ್ಮೆಗೆ ಬರೆ’ (ಲಘು ಪ್ರಬಂಧ) ; ಜೀವ ಜೀವದ ನಂಟು (ಕಾದಂಬರಿ) ; ಅಂಗುಲಿಮಾಲ, ಆಮ್ರಪಾಲಿ (ನಾಟಕ) ; ವಿದೇಶ ಪ್ರವಾಸಾನುಭವದ ನಾನು ಮತ್ತು ಶಾಂತಿ (ಪ್ರವಾಸಕಥನ) ಮುಂತಾದವುಗಳನ್ನು ಪ್ರಕಟಿಸಿದರು. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ ಕನ್ನಡದಲ್ಲಿ ಮೂಡುವಲ್ಲಿ ಪ್ರಭುಶಂಕರರು ಮಹಾನ್ ಸೇವೆ ಸಲ್ಲಿಸಿದ್ದಾರೆ. ಪ್ರೇಮಭಿಕ್ಷು ಎಂಬ ಅವರ ಮನೋಹರ ಕೃತಿ ಹಲವಾರು ವರ್ಷಗಳ ಕಾಲ ಕಾಲೇಜು ಪಠ್ಯ ಪುಸ್ತಕವಾಗಿತ್ತು. ಅವರ ಅನೇಕ ಮನೋಲ್ಲಾಸಕರ ಹಾಸ್ಯ ಬರಹಗಳು ‘ಬೆಸ್ಟ್ ಆಫ್ ಪ್ರಭುಶಂಕರ’ದಂತಹ ಸಂಕಲನಗಳಲ್ಲಿ ಬೆಳಕು ಕಂಡು ಜನಮನವನ್ನು ತಣಿಸುತ್ತಿವೆ. ಇಂದಿನ ದಿನದಲ್ಲೂ ಪ್ರಭುಶಂಕರರ ಉಪನ್ಯಾಸಗಳೆಂದರೆ ಜನ ಎಲ್ಲೆಡೆಯಿಂದ ಓಡಿ ಬರುತ್ತಾರೆ. ಅಷ್ಟು ವಿದ್ವತ್ಪೂರ್ಣ, ಸೊಗಸಿನ, ವಿನೋದಪೂರ್ಣ, ಅಪ್ಯಾಯಮಾನ ಮಾತುಗಾರಿಕೆ ಪ್ರಭುಶಂಕರ ಅವರದ್ದು.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ವಿಶ್ವಮಾನವ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಡಾ. ಪ್ರಭುಶಂಕರರನ್ನು ಅರಸಿ ಬಂದಿವೆ. 

Thursday, February 7, 2013

ಎದೆ ತುಂಬಿ ಹಾಡಿದೆನು - ಜಿ.ಎಸ್.ಶಿವರುದ್ರಪ್ಪ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಎದೆ ತುಂಬಿ ಹಾಡಿದೆನು ಅಂದು ನಾನು

ಇಂದು ನಾ ಹಾಡಿದರೂ
ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ
ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ
ಹಾಡು ಹಕ್ಕಿಗೆ ಬೇಕೆ
ಬಿರುದು ಸನ್ಮಾನ?

ಎದೆ ತುಂಬಿ ಹಾಡಿದೆನು ಅಂದು ನಾನು

ಎಲ್ಲ ಕೇಳಲಿ ಎಂದು
ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ
ಕರ್ಮ ನನಗೆ

ಕೇಳುವವರಿಹರೆಂದು
ಕೇಳುವವರಿಹರೆಂದು
ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ

ಯಾರು ಕಿವಿ ಮುಚ್ಚಿದರೂ
ಯಾರು ಕಿವಿ ಮುಚ್ಚಿದರೂ
ನನಗಿಲ್ಲ ಚಿಂತೆ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಏದು ತುಂಬಿ , ಮನ ತುಂಬಿ,
ತನು ತುಂಬಿ ಹಾಡಿದೆನು ಅಂದು ನಾನು...
ನಾನು....

Wednesday, February 6, 2013

ನಾಟಕ ಶಿರೋಮಣಿ ಎ. ವಿ. ವರದಾಚಾರ್

ಕನ್ನಡ ರಂಗಭೂಮಿಯ ವಿಷಯದಲ್ಲಿ ಆಸ್ಥೆ ತಳೆದವರಿಗೆ ‘ನಾಟಕದ ವರದಾಚಾರ್ಯ’ರ ಹೆಸರು ತುಂಬಾ ಪರಿಚಿತ. ವರದಾಚಾರ್ಯರು ಹುಟ್ಟಿದ್ದು 1869ರಲ್ಲಿ. ತೀರಿಕೊಂಡದ್ದು 1926ರಲ್ಲಿ ತಮ್ಮ ಜೀವಿತದ ಮುಕ್ಕಾಲು ಪಾಲನ್ನು ಅವರು ಕನ್ನಡ ವೃತ್ತಿರಂಗದ ಏಳಿಗೆಗಾಗಿ ಮುಡುಪಿಟ್ಟರು. ತುಂಬ ಪ್ರಭಾವಶಾಲಿಯೆನಿಸಿದ ‘ರತ್ನಾವಳೀ ನಾಟಕ ಮಂಡಳಿ’ಯನ್ನು ಕಟ್ಟಿದರು. ಕಲಾವಂತರನ್ನು ಹುಡುಕಿ, ಕೂಡಿಸಿ, ರಂಗಶಿಕ್ಷಣ ಕೊಟ್ಟು ನಾಟಕಕಲೆಯಲ್ಲಿ ಪರಿಣತರನ್ನಾಗಿ ಮಾಡಿ, ಅವರಿಗೂ ತಮಗೂ ಕೀರ್ತಿ ತಂದುಕೊಂಡರು. ಕನ್ನಡ ನಾಟಕಗಳನ್ನು ಅಭಿನಯಿಸುತ್ತ ಕನ್ನಡ ಭೂಮಿಯ ಉದ್ದಗಲದಲ್ಲಿ ಮಾತ್ರವೇ ಅಲ್ಲದೆ, ನೆರೆಯ ತಮಿಳು, ತೆಲುಗು ರಾಜ್ಯಗಳಲ್ಲಿಯೂ ಸಂಚರಿಸಿ, ಅಲ್ಲಿನ ಜನ ನಮ್ಮ ನಾಟಕವನ್ನು ಮೆಚ್ಚಿ ಹೊಗಳುವಂತೆ ಮಾಡಿದರು. ಪ್ರದರ್ಶನವು ಉತ್ತಮಗೊಳ್ಳುವ ಸಲುವಾಗಿ, ಅವರ ಕಾಲದಲ್ಲಿ ಕ್ರಾಂತಿಕಾರಕ ಎನಿಸುವಂತಹ ಮಾರ್ಪಾಡುಗಳನ್ನೂ ಸುಧಾರಣೆಗಳನ್ನೂ ಮಾಡಿದರು. ಸ್ವತಃ ವರದಾಚಾರ್ಯರ ವೈಶಿಷ್ಟ್ಯವನ್ನು ಹತ್ತುಪಾಲು ಹಿಗ್ಗಿಸಿ, ನೋಡಿದವರು ಎಂದೆಂದಿಗೂ ಮರೆಯದಂತೆ ಮನಸ್ಸಿನ ಮೇಲೆ ಅಚ್ಚೊತ್ತಿಬಿಡುವ ಕಲಾವಂತಿಕೆ. ಅವರ ಅಭಿನಯವನ್ನು ಕಂಡಿದ್ದವರು ಹೇಳುವಂತೆ ‘ನುಡಿಯಲ್ಲಿ ಹಿಡಿಯಲಾಗದ ಕಲಾಸೌಭಾಗ್ಯ ಅವರದು.’

‘ನಾಟಕ ವರದಾಚಾರ್ಯ’ರ ಪೂರ್ಣ ಹೆಸರು-ಅನಮನಪಲ್ಲಿ ವೆಂಕಟವರದಾಚಾರ್. ಹುಟ್ಟಿದ್ದು ಚಿತ್ರದುರ್ಗದಲ್ಲಿ 1869ನೇ ವರ್ಷದ ಫೆಬ್ರವರಿ 2 ದಿನಾಂಕದಂದು. ತಂದೆ, ರಂಗಸ್ವಾಮಿ ಅಯ್ಯಂಗಾರರು ರೆವಿನ್ಯೂ ಶಿರಸ್ತೇದಾರರು. ಶಾಸ್ತ್ರೀಯಸಂಗೀತ ಎಂದರೆ ಅವರಿಗೆ ತುಂಬ ಆಸಕ್ತಿ. ಅದರಿಂದ ತಮ್ಮ ಮಗನಿಗೆ ಬಾಲ್ಯದಿಂದಲೇ ವಿದ್ವಾನ್ ವೆಂಕಟೇಶ ಶಾಸ್ತ್ರಿಗಳಲ್ಲಿ ಸಂಗೀತದ ಶಿಕ್ಷಣ ಕೊಡಿಸಿದರು. ಬಾಲಕನ ಸೊಂಪು ದೇಹಕ್ಕೆ ತಕ್ಕ ಸುಂದರ ಮುಖ; ಚುರುಕು ಬುದ್ಧಿ. ಸಂಗೀತ ಕಲಿಯುತ್ತಲೇ ಶಾಲೆಗಳಲ್ಲಿಯೂ ಮುಂದಾಗಿ, ಹದಿನೈದು ವರ್ಷ ವಯಸ್ಸಿನ ಒಳಗಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲವರ್ಗದ ಯಶಸ್ಸು ಪಡೆದ. ಅನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಎಫ್.ಎ. ತರಗತಿಯಲ್ಲಿ ಅಭ್ಯಾಸ ನಡೆಸಿದ. ಆ ಸಮಯದಲ್ಲಿ ಎರಗಿದ ಅಘಾತವೆಂದರೆ ತಾಯಿಯ ಮರಣ. ಅದರಿಂದಾಗಿ ಬಾಲಕನ ಬಾಳಿನಲ್ಲಿ ಬಿರುಗಾಳಿ ಬೀಸಿ ಬಡಿದಂತಾಗಿ, ಉತ್ಸಾಹ ಬತ್ತಿ, ಶಾಲೆಗೆ ಶರಣು ಹೊಡೆದು ಸಂಗೀತ ಕಛೇರಿ, ನಾಟಕ ಎಂದು ಕಾಲ ಕಳೆಯತೊಡಗಿದ. ಹಿಂದಿನ ವರ್ಷವೇ ಮದುವೆಯಾಗಿದ್ದ ತಂಗಿಯ ಮನೆಯಲ್ಲಿ ಬಿಡಾರ ಹೂಡಿದ್ದುದರಿಂದ ಊಟ, ನೆರಳುಗಳಿಗೆ ಕೊರತೆ ಇಲ್ಲದಿದ್ದರೂ ಜೀವನದ ನೆಲೆ ತಪ್ಪಿ ಮುಂದಿನ ಗುರಿ ಕಾಣದಾಗಿತ್ತು.

ವರದಾಚಾರ್ಯರು ಕಾಲ ಕಳೆಯುವ ಸಲುವಾಗಿ ನಾಟಕ ಗಳನ್ನು ನೋಡಿ, ಸಂಗೀತ ಕಛೇರಿಗಳನ್ನು ಕೇಳತೊಡಗಿದಾಗ, ತಮಗೇ ಅರಿವಿಲ್ಲದೆಯೆ ಅನುಕರಣ ಕಲೆ ಮೈ ಹತ್ತಿಕೊಂಡಿತು. ಕಂಡಕಂಡ ಕಂಪೆನಿ ನಾಟಕಗಳಲ್ಲಿ ತಾವೇ ಮುಂದಾಗಿ ಹೋಗಿ ಬೇಡಿ ಮಾಡಿದ ಪಾತ್ರಗಳಿಗಾಗಿ ಪುಡಿಗಾಸು ಸಿಕ್ಕಿದ್ದು ದೊಡ್ಡ ಮಾತಲ್ಲ; ಇವರ ಪಾತ್ರನಿರ್ವಹಣೆಯನ್ನು ನೋಡಿದ ಪ್ರೇಕ್ಷಕರು ಕಳಪೆ ಪಾತ್ರಗಳಿಗೆ ಕೂಡ ಕಳೆಯನ್ನೇರಿಸಿದ ಕಲಾವಂತಿಕೆಗೆ ತಲೆ ದೂಗಿ, ಚಪ್ಪಾಳೆಯನ್ನಿಕ್ಕಿ ಹುರಿದುಂಬಿಸಿದ್ದು ದೊಡ್ಡ ಮಾತು. ವರದಾಚಾರ್ಯರು ಆಗ ಬೆಂಗಳೂರಿನಲ್ಲಿ ಪ್ರಸಿದ್ಧವಾಗಿದ್ದ ‘ಗೊಲ್ಲರ ಪೇಟೆ ನಾಟಕ ಕಂಪೆನಿ’ಯಿಂದ ಮೊದಲುಗೊಂಡು ಕರೆದ ಕಡೆ ಓಗೊಟ್ಟು ಪಾತ್ರಗಳನ್ನು ಅಭ್ಯಾಸ ಮಾಡಿ, ಹಾಡುಗಳಿಗೆ ತಾವೇ ಮಟ್ಟು ಕೂಡಿಸಿ, ಪಾತ್ರಕ್ಕೆ ತಮ್ಮದೇ ವಿಶಿಷ್ಟರೀತಿಯ ಅಭಿನಯ ಮೆರಗು ಕೊಟ್ಟು ಪ್ರಸಿದ್ಧಿಗೆ ಬಂದರು.

ಆಚಾರ್ಯರನ್ನು ಪ್ರಸಿದ್ಧ ನಟರನ್ನಾಗಿ ಮಾಡಿದ ಕೀರ್ತಿ ಗೌರೀ ನರಸಿಂಹಯ್ಯನವರದು. ರಂಗ ಸಂಗೀತದಲ್ಲಿ, ಪಾತ್ರಾಭಿನಯದಲ್ಲಿ ಗೌರೀ ನರಸಿಂಹಯ್ಯನವರ ನಿರ್ದೇಶನದಂತೆ ಆಚಾರ್ಯರು ಅಸಮಾನ್ಯ ಸಾಧನೆ ಮಾಡಿದನಂತರ, ಮೈಸೂರಿನಲ್ಲಿ ‘ಸತ್ಯ ಸಂಧೋಪಾಖ್ಯಾನ’, ‘ರತ್ನಾವಳಿ’ ಮುಂತಾದ ನಾಟಕಗಳು ಅಪಾರ ಜನಪ್ರಿಯತೆ ಗಳಿಸಿದವು. ಈ ಮಧ್ಯೆ ಆಚಾರ್ಯರ ಮಗಳು ಮತ್ತು ಪತ್ನಿ ನಿಧನರಾದರು. ಯಶಸ್ಸಿನ ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಿದ್ದ ಆಚಾರ್ಯರಿಗೆ, ಪ್ರಪಾತಕ್ಕೆ ಕಡೆದು ಉರುಳಿದ ಅನುಭವವಾಯಿತು. ಮನಸ್ಸಿನ ತುಂಬ ಕತ್ತಲೆ ತುಂಬಿ, ಜೀವನ ದುರ್ಭರವಾಯಿತು. ‘ನನಗಿನ್ನು ನಾಟಕರಂಗ ಬೇಡ’ ಎಂದು ಮಂಡಳಿಯನ್ನು ಬಿಟ್ಟು ಬೆಂಗಳೂರಿನಲ್ಲಿಯೇ ನಿಂತುಬಿಟ್ಟರು. ಜೀವನ ನಿರ್ವಹಣಕ್ಕಾಗಿ ಬ್ರಿಟಿಷ್ ರೆಸಿಡೆಂಟರ ಕಚೇರಿಯಲ್ಲಿ ಕಾರಕೂನರಾಗಿ ಕೆಲಸಕ್ಕೆ ಸೇರಿದರು. ಕಾಲ ಉರುಳಿತು, ತಳಮಳಿಸುತ್ತಿದ್ದ ಜೀವಕ್ಕೆ ತಂಪು ಕಾಣಲಿಲ್ಲ. ಪಿಡುಗು ಅಡಗಿ ವರ್ಷವಾಗುತ್ತ ಬಂತು. ವರದಾ ಚಾರ್ಯರು ಯಾಂತ್ರಿಕವಾಗಿ ಉದ್ಯೋಗದಲ್ಲಿ ತೊಡಗಿದ್ದರು. ಸ್ನೇಹಿತರೂ ಅಭಿಮಾನಿಗಳೂ ಅವರನ್ನು ಮತ್ತೆ ರಂಗಭೂಮಿಗೆ ಎಳೆತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಬಂಧುಗಳು ದುಂಬಾಲುಬಿದ್ದರೂ ಅವರು ಮತ್ತೆ ಮದುವೆ ಮಾಡಿಕೊಳ್ಳಲಿಲ್ಲ. ‘ಮೈಸೂರು ಬೇಡ, ನಿಮ್ಮ ಸಲುವಾಗಿ ಬೆಂಗಳೂರಿನಲ್ಲಿಯೇ ನಾಟಕ ಮಂಡಳಿ ಕಟ್ಟೋಣ’ ಎಂದು ಆಚಾರ್ಯರ ಅಭಿಮಾನಿಗಳು 1900ರಲ್ಲಿ ’ಬೆಂಗಳೂರು ಯೂನಿಯನ್’ ಎಂಬ ಹೆಸರಿನಿಂದ ನಾಟಕ ಸಭೆಯನ್ನೂ ಸ್ಥಾಪಿಸಿದರು. ಕಡೆಗೊಮ್ಮೆ ವರದಾಚಾರ್ಯರು ರೆಸಿಡೆಂಟರ ಕಚೇರಿಯ ಉದ್ಯೋಗವನ್ನು ಬಿಟ್ಟು ನಾಟಕ ಸಭೆಯ ಕಾರ್ಯನಿರ್ವಹಕ್ಕೆ ನಿಂತರು. ಬಂಡವಾಳಕ್ಕಾಗಿ ಐದು ಸಾವಿರ ರೂಪಾಯಿ ಕೂಡಿತು.

ಮೊದಲ ನಾಟಕ ‘ರತ್ನಾವಳಿ’. ಅದರ ಪ್ರಯೋಗವಾದ ನಂತರ ಕ್ರಮವಾಗಿ ‘ಗುಲೇಬಕಾವಲಿ’, ‘ಮನ್ಮಥ ವಿಜಯ’, ‘ಹರಿಶ್ಚಂದ್ರ’, ‘ಶಾಕುಂತಲ’, ‘ಪ್ರತಾಪಸಿಂಹ’ ಎಂಬ ನಾಟಕಗಳು. ‘ಗುಲೇಬಕಾವಲಿ’ ನಾಟಕದಲ್ಲಿ ವರದಾಚಾರ್ಯರೇ ರಾಜಕಿರೀಟಿ ಪಾತ್ರ. ಅವರು ಮಂದಾರವಲ್ಲಿಯ ಉದ್ಯಾನವನಕ್ಕೆ ಮಂದಾರಪುಷ್ಪಕ್ಕಾಗಿ ಪ್ರವೇಶಿಸುವಾಗ ಒಳಗಿನಿಂದಲೇ ಕೇದಾರಗೌಳ ರಾಗದಲ್ಲಿ ಎಸ್. ಜೆ. ನರಸಿಂಹಾಚಾರ್ಯರು ರಚಿಸಿಕೊಟ್ಟಿದ್ದ ಉದ್ಯಾನವನದ ವರ್ಣನೆಯ ಹಾಡನ್ನು ಹಾಡಿಕೊಂಡು ರಂಗಮಂಟಪಕ್ಕೆ ಬರುತ್ತಿದ್ದರು. ಅವರ ಆ ವೇಷಭೂಷಣಗಳನ್ನು ನೋಡಿ, ಪ್ರೇಕ್ಷಕರು ಕರತಾಡನ ಮಾಡುತ್ತ ಆನಂದ ಪರವಶರಾಗುತ್ತಿದ್ದರು. ಶಬ್ದ ನಿಂತ ತಕ್ಷಣ ರಾಜಕಿರೀಟಿಯು, “ಈ ವನವನೆಂತು ಬಣ್ಣಿಪೆ” ಎಂದು ಅನೇಕ ಸಂಗತಿಗಳನ್ನು ಹಾಕಿ, ಪಿಟೀಲ್ ವಾದ್ಯಗಾರರ ಕೈಗಳು ಬಿದ್ದು ಹೋಗುತ್ತದೆಯೋ ಏನೋ ಎಂಬಂತೆ ಸಂಗತಿಗಳನ್ನು ಸೇರಿಸಿ ಹಾಡಿದಾಗ ಪ್ರೇಕ್ಷಕರು ಆನಂದದಿಂದ ಮೈಮರೆಯುತ್ತಿದ್ದರು. ಮುಂದೆ ಮೈಸೂರಿನಲ್ಲಿ ‘ಮೈಸೂರು ರತ್ನಾವಳೀ ನಾಟಕ ಸಭಾ’ ಎಂಬ ಹೊಸ ಮಂಡಳಿಯನ್ನು 1902ರಲ್ಲಿ ಪ್ರಾರಂಭಿಸಲಾಯಿತು. ಕಂಪೆನಿಯ ಸಕಲ ಸ್ವತ್ತಿಗೂ ಆಡಳಿತಕ್ಕೂ ವರದಾಚಾರ್ಯರು ಸರ್ವಾಧಿಕಾರಿಗಳಾದರು.

ಮುಂದಿನ ಎರಡು ದಶಕಗಳ ಕಾಲ, ಆಗಾಗ ಸಣ್ಣಪುಟ್ಟ ಎಡರುಗಳು ಅಡ್ಡ ಬಂದರೂ ಒಟ್ಟಾರೆ ವರದಾಚಾರ್ಯರ ದಿಗ್ವಿಜಯದ ಕಾಲವೆನಿಸಿ, ಕನ್ನಡ ವೃತ್ತಿರಂಗದ ಇತಿಹಾಸದಲ್ಲಿ ಅದು ‘ಸ್ವರ್ಣಯುಗ’ವೇ ಆಯಿತು. ಅವರ ರತ್ನಾವಳೀ ಕಂಪೆನಿ, ಮನೆಮನೆಯ ಮಾತಾಯಿತು. ವರದಾಚಾರ್ಯರ ಸೋದರ ಕೃಷ್ಣಸ್ವಾಮಿ ಅಯ್ಯಂಗಾರರು (ಶಾಮಣ್ಣ) ರೈಲ್ವೆ ಗಾರ್ಡ್ ಉದ್ಯೋಗದಲ್ಲಿದ್ದವರು ಕೆಲಸಬಿಟ್ಟು ಅಣ್ಣನ ನಾಟಕ ಕಂಪೆನಿಯನ್ನು ಸೇರಿ ಆಡಳಿತದ ಮೇಲ್ವಿಚಾರಣೆ ನೋಡಿಕೊಂಡರು. ಅವರೂ ಒಳ್ಳೆಯ ನಟರು. ಹಲವರು ಪರಿಣತ ಕಲಾವಿದರು ಮಂಡಳಿಯನ್ನು ಸೇರಿದರು. ಕ್ರಮವಾಗಿ ಶಾಕುಂತಲ, ರತ್ನಾವಳೀ, ಮನ್ಮಥವಿಜಯ, ಹರಿಶ್ಚಂದ್ರ, ಸತ್ಯವರ್ಮ, ಮಂದಾರವಲ್ಲೀ ಪರಿಣಯ, ಮಾಳವಿಕಾಗ್ನಿಮಿತ್ರ, ನಿರುಪಮಾ, ರಾಮವರ್ಮ-ಲೀಲಾವತಿ, ಕಾಮಪಾಲ, ಪ್ರತಾಪ ಸಿಂಹ, ಸದಾರಮೆ, ಮಕರಂಧಿಕಾಪರಿಣಯ ಇವುಗಳಲ್ಲದೆ, ಸ್ವತಃ ವರದಾಚಾರ್ಯರೇ ರಚಿಸಿದ ಇಂದಿರಾನಂದ, ಮಿಮಲಾ ವಿಜಯ ಮೊದಲಾದ ನಾಟಕಗಳು ರಂಗದ ಮೇಲೆ ಬಂದವು. ಮೊದಲಿಗೆ ಶನಿವಾರದಂದು ವಾರಕ್ಕೆ ಒಂದು ನಾಟಕ ಮಾತ್ರ ಪ್ರದರ್ಶನವಾಗುತ್ತಿದ್ದುದು, ಜನತೆಯ ಒತ್ತಾಯಕ ಕಾರಣ, ಬುಧವಾರ, ಭಾನುವಾರಗಳ ರಾತ್ರಿಯಲ್ಲಿಯೂ ನಾಟಕಗಳು ಪ್ರಯೋಗಗೊಂಡವು. ನಿಂತ ನೀರಾಗದೆ ಮಂಡಳಿ ಹೊಸ ನಾಟಕಗಳನ್ನು ರೂಢಿಸಿಕೊಂಡು, ದೃಶ್ಯ ಸಂಯೋಜನೆ, ರಂಗ ಸಂಗೀತ, ವೇಷಭೂಷಣಗಳ ನಿಟ್ಟಿನಿಂದ ಹೊಸ ಹಾದಿಯನ್ನೇ ನಿರ್ಮಿಸಿ ಕನ್ನಡನಾಡಿನ ಮುಖ್ಯ ಪಟ್ಟಣಗಳಲ್ಲಿ ಬೀಡುಬಿಟ್ಟು, ವೃತ್ತಿನಾಟಕದ ವಿಷಯದಲ್ಲಿ ಜನತೆಯಿಂದ ಅಪಾರ ಅನುರಾಗವನ್ನು ಸಂಪಾದಿಸಿತು. ಸಂಸ್ಥೆಯಲ್ಲಿದ್ದ ನಟವರ್ಗದವರು ಮತ್ತು ಸಿಬ್ಬಂದಿಯವರನ್ನು ತಮ್ಮ ಬಂಧುಗಳು ಎಂದೇ ಆಚಾರ್ಯರು ಕಾಣುತ್ತಿದ್ದರು. ಅವರಿಗೆ ತಾವು ಯಜಮಾನ ಎಂಬ ಗರ್ವವಿರಲಿಲ್ಲ. ಎಲ್ಲರೊಡನೆ ಸ್ನೇಹದಿಂದ ಬೆರೆಯುತ್ತಿದ್ದರು. ಅನೇಕರ ಮುಂಜಿ, ಮದುವೆಗಳಿಗೆ ಸಹಾಯಮಾಡಿ ಕಲೆಯ ಅಭಿವೃದ್ದಿಗಾಗಿಯೇ ಸದಾ ಚಿಂತಿಸುತ್ತ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟರು.

ಪರಿಣತರಾದ ನಟರಿಂದ ಕೂಡಿ, ಮಂಡಳಿ ತನ್ನ ಕಾಲಮೇಲೆ ತಾನು ನಿಂತಾಗಲೂ ‘ಯಜಮಾನ’ರಾದ ಆಚಾರ್ಯರು ನಿತ್ಯಜಾಗೃತರಾಗಿ, ತಮಗೆ ದೈವದತ್ತವಾಗಿದ್ದ ಕಲೆಯನ್ನು ಬಳಸಿ ಬೆಳೆಸಿಕೊಳ್ಳುತ್ತ, ಪ್ರತಿಯೊಂದು ನಾಟಕದಲ್ಲಿಯೂ ನಾಯಕ ಭೂಮಿಕಿಯಲ್ಲಿ ನಿಂತು, ಜನ ಆವರೆಗೆ ಕಾಣದಂಥ ಪಾತ್ರದ ಗುಣಧರ್ಮವನ್ನು ಹೊಸ ಹೊಸದಾಗಿ ಹರಿಸಿದರು. ಯಾವ ಪಾತ್ರವೇ ಆಗಲಿ ಆಚಾರ್ಯರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ಪ್ರೀತಿ, ಕೋಪ, ಶೌರ್ಯ, ಕರುಣೆ-ಯಾವ ಭಾವವನ್ನಾಗಲಿ ಬೇರೆ ಯಾರೂ ತಮಗೆ ಸಮರಲ್ಲ ಎನ್ನುವಂತೆ ತೋರಿಸುತ್ತಿದ್ದರು. ನಮ್ಮ ದೇಶದಲ್ಲಿ ತನ್ನ ತಪ್ಪಿನಿಂದಲೋ ದುರದೃಷ್ಟದಿಂದಲೋ ಕಷ್ಟಪಟ್ಟು ಕಡೆಗೂ ಕಷ್ಟದಲ್ಲಿಯೇ ಜೀವನ ಮುಗಿಸುವ ನಾಯಕರ ನಾಟಕಗಳಿರಲಿಲ್ಲ. ಇಂತಹವು ಬಂದದ್ದು ಪಶ್ಚಿಮ ದೇಶಗಳಿಂದ. ಇಂತಹ ನಾಯಕರ ಪಾತ್ರಗಳನ್ನು ವರದಾ ಚಾರ್ಯರು ಅಮೋಘವಾಗಿ ಅಭಿನಯಿಸುತ್ತಿದ್ದರು. ಅವರು ರಾಮವರ್ಮ, ಕೀಚಕ, ರಾವಣ ಮುಂತಾದ ಪಾತ್ರಗಳನ್ನು ಅಭಿನಯಿಸಿದ್ದನ್ನು ಒಮ್ಮೆ ನೋಡಿದವರು ಮರೆಯುವಂತಿರಲಿಲ್ಲ. ಅವರ ಕಂಠ ಅದ್ಭುತವಾದದ್ದು. ಆದರೆ ಸಂಗೀತವನ್ನು ವಿವೇಚನೆ ಇಲ್ಲದೆ ಬಳಸಲಿಲ್ಲ. ಸನ್ನಿವೇಶಕ್ಕೆ ತಕ್ಕ ಹಾಗೆ ಸಂಗೀತವನ್ನು ಬಳಸಿ ನಾಟಕದ ಪರಿಣಾಮ ಆಳವಾಗುವಂತೆ ಮಾಡಿದರು. ಅಭಿನಯ ಮತ್ತು ಗಾಯನ ಕಲೆಗಳು ಒಬ್ಬ ನಟನಲ್ಲೆ ಹೀಗೆ ಸಮರಸವಾಗಿ ಸೇರುವುದು ಬಹು ವಿರಳ. ಆಚಾರ್ಯರು ವೇಷಭೂಷಣಗಳನ್ನೂ ರಂಗಪರಿಕರಗಳನ್ನೂ ಪಾತ್ರಕ್ಕೆ, ನಾಟಕದ ಕಥಾ ದ್ರವ್ಯಕ್ಕೆ ಅಸಹಜವಾಗದೆ, ಅಸಂಗತವಾಗದೆ ಹೊಂದಿಕೊಳ್ಳುವಂತೆ ಏರ್ಪಡಿಸಿದರು. ಹಳೆಯ ಅನೇಕ ನಾಟಕಗಳನ್ನೂ ಪ್ರದರ್ಶನಕ್ಕೆ ಹೆಚ್ಚು ಯೋಗ್ಯವಾಗುವಂತೆ ತಿದ್ದಿದರು. ತಾವೇ ಸ್ವತಂತ್ರವಾಗಿ ಎರಡು ನಾಟಕಗಳನ್ನು ರಚಿಸಿದರು. ಸಂಸ್ಕೃತ-ಕನ್ನಡಪಂಡಿತರುಗಳನ್ನುತಮ್ಮೊಂದಿಗೇ ಮಂಡಳಿಯಲ್ಲಿ ಇಟ್ಟುಕೊಂಡು, ಸೂಕ್ತ ಸಲಹೆಗಳನ್ನು ಕೊಟ್ಟು ಪುರಾಣಗಳಲ್ಲಿ ಹೇಳಿದ ಕಥೆ ಮತ್ತು ಪಾತ್ರಗಳಿಗೆ ಅಪಚಾರವಾಗದಂತೆ, ಹೊಸ ನಾಟಕ ಗಳನ್ನು ಬರೆಸಿದರು. ಹೀಗೆ ತಮ್ಮ ಮಂಡಳಿಯನ್ನು ಹಲವಾರು ನಿಟ್ಟುಗಳಿಂದ ಸಿದ್ಧಪಡಿಸಿಕೊಂಡು ರಂಗಕಲೆಯನ್ನು ಮತ್ತೆ ಮತ್ತೆ ಮಥಿಸಿ ಹೊಸ ಪಾಕವನ್ನೇ ಸಿದ್ಧಗೊಳಿಸಿ ಆಚಾರ್ಯರು ಆ ಅಮೃತ ವನ್ನು ಊರುಊರುಗಳಿಗೆ ಉಣಬಡಿಸಿದರು.

ಅಪಾರವಾದ ಕೀರ್ತಿಯನ್ನು ಗಳಿಸಿದ ವರದಾಚಾರ್ಯರಿಗೆ 1913ರಲ್ಲಿ, ನಗರದ ಪ್ರಮುಖರು ಒಟ್ಟಾಗಿ ಮಹತ್ ಸತ್ಕಾರಮಾಡಿ ‘ಗಿಫ್ಟೆಡ್ ಆಕ್ಟರ್’ ಎಂಬ ಪ್ರಶಸ್ತಿಯನ್ನು ರತ್ನಖಚಿತವಾದ ತೋಡದೊಂದಿಗೆ ಅರ್ಪಿಸಿದರು. ಉಡುಪಿಯಲ್ಲಿದ್ದಾಗ ಶ್ರೀಕೃಷ್ಣ ದೇಗುಲದಲ್ಲಿ, ಅಷ್ಟ ಮಠಾಧೀಶರೆಲ್ಲರ ಸಮ್ಮುಖದಲ್ಲಿ ‘ಪ್ರಹ್ಲಾದ ಚರಿತ್ರೆ’ ಪ್ರಯೋಗಗೊಂಡಾಗ ಯತಿಗಳು ಅತ್ಯಾನಂದಪಟ್ಟು ಆಚಾರ್ಯರಿಗೆ ‘ನಾಟ್ಯಕಲಾ ಚತುರ’ ಎಂಬ ಪ್ರಶಸ್ತಿಯನ್ನು ಬಂಗಾರದ ತೋಡ ಖಿಲ್ಲತ್ತುಗಳೊಂದಿಗೆ ಕೊಟ್ಟು ಸನ್ಮಾನಿಸಿದರು. ತಿರುಚನಾಪಳ್ಳಿಯ ಪ್ರಮುಖರು ಆಚಾರ್ಯರಿಗೆ ‘ನಾಟಕ ಶಿರೋಮಣಿ’ ಎಂಬ ಮಹಾಪ್ರಶಸ್ತಿಯನ್ನು ರತ್ನಖಚಿತವಾದ ತೋಡಾ ಖಿಲತ್ತುಗಳೊಂದಿಗೆ ಅರ್ಪಿಸಿದರು. ಆಚಾರ್ಯರು ತಮಿಳುನಾಡಿನ ಹಲವು ನಗರಗಳಲ್ಲಿ ನಾಟಕಗಳನ್ನು ಆಡಿ, ಜನರ ಮನಸ್ಸನ್ನು ಸೂರೆಗೊಂಡರು. ಅನೇಕ ಕಡೆ ಜನ ಅವರನ್ನು ಸವರನ್‌ಗಳ ಸರಗಳಿಂದ ಅಲಂಕರಿಸಿದರು.

ಹಲವಾರು ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಎಂಥಹ ಪರಿಸ್ಥಿತಿಯಲ್ಲಿಯೂ ಎಂದಿನಿಂದಲೂ ಹೆಸರಾದ ವರದಾಚಾರ್ಯರ ದಾನಶೀಲತೆ ಬಡವಾಗಲಿಲ್ಲ. ಅವರನ್ನೇ ನಂಬಿ ನಿಂತಿದ್ದ ವಿದ್ಯಾಸಂಸ್ಥೆಗಳಿಗೂ ವಿದ್ಯಾರ್ಥಿ ನಿಲಯಗಳಿಗೂ ಅನಾಥಾಲಯಗಳಿಗೂ ವಾಚನಾಲಯಗಳಿಗೂ ಧರ್ಮಛತ್ರ-ದೇಗುಲಗಳಿಗೂ ಬಿಡಿಬಿಡಿಯಾಗಿ ಸುತ್ತವರಿದ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳಿಗೂ ಚೌಲ, ಮುಂಜಿ, ಮದುವೆ, ಯಾತ್ರೆ ತೀರ್ಥಗಳಿಗೆಂದು ಕೈನೀಡಿ ಸಾಲುಗಟ್ಟಿ ಬಂದ ಬಡವರಿಗೂ ಸಾಲ ಮಾಡಿಯಾದರೂ ಒಂದು ಕೇಳಿದರೆ ಹತ್ತು ಕೊಟ್ಟರೇ ವಿನಾ ಎಂದೆಂದಿಗೂ ತಮ್ಮ ಆರ್ಥಿಕ ಅಡಚಣೆ ಕುರಿತು ಯಾರಲ್ಲಿಯೂ ಚಕಾರ ಎತ್ತಲಿಲ್ಲ. ಬಡವರ ಬಂಧು ಅವರು.

1925ರಲ್ಲಿ ಬೆಂಗಳೂರಿಗೆ ಬಂದರು. ಯಾವಾಗಲೂ ವಾಸಕ್ಕೆ ದೊಡ್ಡ ಬಂಗಲೆಯನ್ನೇ ಗೊತ್ತುಮಾಡುತ್ತಿದ್ದವರು ಚಿಕ್ಕ ಮನೆಯನ್ನು ಗೊತ್ತುಮಾಡಬೇಕಾಯಿತು. ಹಲವಾರು ನಟರು ನಾಟಕಮಂದಿರದಲ್ಲೆ ಮಲಗುತ್ತಿದ್ದರು. ಅನಾರೋಗ್ಯದಿಂದ ಆಚಾರ್ಯರು ಒಂದೊಂದು ದಿನ ಮಾತ್ರ ಪಾತ್ರ ವಹಿಸುತ್ತಿದ್ದರು. 1926ರ ಜನವರಿಯಲ್ಲಿ ಒಂದು ದಿನ ‘ಗುಲೇಬಕಾವಲಿ’ಯಲ್ಲಿ ಅವರು ಅಭಿನಯಿಸುತ್ತಾರೆ ಎಂದು ಪ್ರಕಟಿಸಿ ಆಗಿಹೋಗಿತ್ತು. ಅಂದು ಅವರಿಗೆ ತೀರ ಅನಾರೋಗ್ಯ. ಹೊಟ್ಟೆ ಉಬ್ಬರಿಸಿಕೊಂಡಿತ್ತು, ಏಳುವುದು ಕೂಡುವುದು ಕಷ್ಟ. ಆದರೂ ಕಷ್ಟದಿಂದ ಅಭಿನಯಿಸಿ, ಹಾಡಿ ಜನರನ್ನು ತೃಪ್ತಿಗೊಳಿಸಿದರು. ನಾಟಕ ಮುಗಿಯುವ ಹೊತ್ತಿಗೆ ಅವರು ಮಾತಾಡುವ ಸ್ಥಿತಿಯಲ್ಲೆ ಇರಲಿಲ್ಲ. ಅದೇ ಅವರ ಕಡೆಯ ಅಭಿನಯ ಆಯಿತು. 1926ರ ಏಪ್ರಿಲ್ 4ನೆಯ ದಿನದಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಚಾರ್ಯರು ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು.

ವರದಾಚಾರ್ಯರ ರಂಗಜೀವನದ ಅತ್ಯಂತ ಸ್ಥೂಲವಾದ ಹೊಳಹು ಇದು. ಅವರ ಪ್ರವೇಶವಾಗುವವರೆಗೆ ನಮ್ಮ ವೃತ್ತಿರಂಗ(ಎಂದರೆ ಕಂಪೆನಿಗಳ ರಂಗ) ಒಂದು ದೃಷ್ಟಿಯಿಂದ ಅತಿರೇಕಗಳ ಹುಟ್ಟುನೆಲ. ಸಂಗೀತ ಬಲ್ಲವನೇ ಆಗ ಸಾರ್ಥಕ ನಟ! ಅರ್ಥವಿಲ್ಲದಿದ್ದರೂ ಆರ್ಭಟದ ಆಟಾಟೋಪ ಮಾಡುತ್ತಿದ್ದವನೇ ಪರಿಣತ ಕಲಾವಿದ! ಹೀಗೆ, ಇನ್ನೆಲ್ಲಿಯೂ ಸಲ್ಲದವರು ರಂಗದಲ್ಲಿ ಸಲ್ಲುತ್ತಾರೆ ಎನ್ನುವಂತಿದ್ದ ಆ ಕಾಲ ಧರ್ಮವನ್ನು ವರದಾಚಾರ್ಯರು ಕಲಕಿದರು. ಕಾಲು ಶತಮಾನದ ತಮ್ಮ ರಂಗಜೀವನದಲ್ಲಿ ಆಚಾರ್ಯರು ಕನ್ನಡ ವೃತ್ತಿರಂಗದ ನಡೆಯನ್ನು ಏರ್ಪಡಿಸಿದರು. ಅದನ್ನು ಕತ್ತಲೆಯಿಂದ ಬೆಳಕಿನ ಹಾದಿಗೆ ತಂದರು. ರಂಗದಲ್ಲಿ ಅವರು ಸಾಧಿಸಿತಂದ ಸುಧಾರಣೆಗಳು ಈ ಮಾತಿಗೆ ಸಾಕ್ಷಿ ನುಡಿಸಿದವು.

ವರದಾಚಾರ್ಯರ ಕಾಲವೆಂದರೆ ಕನ್ನಡ ವೃತ್ತಿ ರಂಗದ ಸ್ವರ್ಣಯುಗವೆನಿಸಿತು; ಆಚಾರ್ಯರು ಆ ಯುಗವನ್ನಾಳಿದ ಸ್ವರ್ಣಮೂರ್ತಿಯೆನಿಸಿಕೊಂಡರು.