WELCOME

ಈ ಬ್ಲಾಗಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಬರೆಹಗಳ ಜೆಪಿಜಿ ಪ್ರತಿಗಳನ್ನು ಹಂಚಿಕೊಳ್ಳತ್ತೇನೆ.














ಹುಡುಕಿ

Tuesday, February 5, 2013

ಡಾ. ಆ. ನೇ. ಉಪಾಧ್ಯೆ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಗೌರವ ಯಾರಿಗಾದರೂ ಸಿಕ್ಕರೆ ಒಲ್ಲೆನೆನ್ನುವುದುಂಟೆ? ‘ಅಸಂಭವ’ ಎನ್ನುವುದು ಸಾಮಾನ್ಯ ಉತ್ತರವಾದರೂ ಇಂಥ ಅಸಂಭವಗಳೂ ಒಂದೆರಡು ಬಾರಿ ಘಟಿಸಿವೆ. ಒಂದು ಬಾರಿ ತೀ.ನಂ.ಶ್ರೀ ಅವರು ತಮ್ಮ ಪಾಲಿಗೆ ಬಂದಿದ್ದ ಈ ಸಾಹಿತ್ಯಲೋಕದ ಅತ್ಯುನ್ನತ ಗೌರವವನ್ನು ನನಗಿಂತ ಡಿ. ಎಲ್. ನರಸಿಂಹಾಚಾರ್ ಇದಕ್ಕೆ ಹೆಚ್ಚು ಅರ್ಹರು ಎಂದು ಅದನ್ನು ಅತ್ತ ತಿರುಗಿಸಿದರು. ಇನ್ನೊಮ್ಮೆ ಹೀಗೆ ಒಲ್ಲೆ ಎಂದವರು ಅಂತರರಾಷ್ಟ್ರೀಯ ಖ್ಯಾತಿಯ ಪ್ರಾಕೃತ ವಿದ್ವಾಂಸ ಡಾ. ಆದಿನಾಥ ನೇಮಿನಾಥ ಉಪಾಧ್ಯೆ ಅವರು. “ಎರಡು ಕಾರಣಗಳಿಂದ ತಮಗೆ ಸಂಕೋಚವಾಗುತ್ತಿದೆ ಎಂದು ಅವರು ವಿವರಿಸಿದರು. ಒಂದು, ತಾವು ಕನ್ನಡದಲ್ಲಿ ಮಾಡಿರುವ ಬರವಣಿಗೆ ಕಡಿಮೆಯಾಗಿ, ಇಂಗ್ಲಿಷಿನಲ್ಲಿ ವಿಫುಲವಾಗಿ ಬರೆದಿರುವುದರಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರಲು ಒಪ್ಪಿಕೊಂಡರೆ ಔಚಿತ್ಯವಿರುತ್ತದೆಯೇ ಎಂಬುದು. ಎರಡು ತಮಗಿಂತ ಹಿರಿಯರಿದ್ದಾರೆ. ಅವರಿಗೆ ಈ ಮರ್ಯಾದೆ ಸಲ್ಲುವ ಮೊದಲು ತಾವು ಒಪ್ಪಿಕೊಳ್ಳುವುದು ತಪ್ಪಾಗುತದೆ – ಎಂಬುದು”. ಅವರು ಹುಟ್ಟು ಕನ್ನಡಿಗರಾಗಿ ಕನ್ನಡದಲ್ಲೂ ಬರವಣಿಗೆ ಮಾಡಿರುವುದನ್ನೂ, ಇಂಗ್ಲಿಷಿನಲ್ಲಿ ಬರೆದಿರುವುದರಿಂದ ಕನ್ನಡದ ಸಂಗತಿಗಳನ್ನು - ಸಾಹಿತ್ಯ ಕೃತಿಗಳನ್ನು ಜಗತ್ತಿಗೆ ಪರಿಚಯಿಸಿ ಮಹದುಪಕಾರ ಮಾಡಿರುವುದನ್ನೂ, ಅವರು ಕನ್ನಡದ ಹೊರನಾಡಿಗೆ ಜೀವಂತ ಸಂಪರ್ಕವಾಗಿರುವುದರಿಂದ ಕನ್ನಡಕ್ಕೆ ಆಗಿರುವ ಪ್ರಯೋಜನಗಳನ್ನು ಮನದಟ್ಟು ಮಾಡಿಕೊಟ್ಟ ಮೇಲೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಒಪ್ಪಿಗೆ ಕೊಟ್ಟರು. ಆಗಲೂ ಮೊದಲು ಅಜೀವ ಸದಸ್ಯತ್ವದ ಹಣ ಕೊಟ್ಟು ನೀವು ಮೊದಲು ರಶೀದಿ ಬರೆಸಿ ಆಮೇಲೆ ‘ಆಗಲಿ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ವಿನಂತಿಸಿದರು. ಸಮ್ಮೇಳನ ಕಾಲದಲ್ಲಿ ತೆಗೆದ ಭಾವ ಚಿತ್ರಗಳ ಸಂಪುಟವನ್ನು ತಾವೇ ಹಣತೆತ್ತು ಪಡೆದರು. ಈ ಬಗೆಯ ಆದರ್ಶ ಹೊಂದಿರುವ ದೊಡ್ಡವರು ಅಪರೂಪ.

ಡಾ. ಆ.ನೇ. ಉಪಾಧ್ಯೆ ಅವರದ್ದು ತುಂಬಿದ ಕೊಡದಂತಹ ವ್ಯಕ್ತಿತ್ವ. ಸಂಸ್ಕೃತ, ಪ್ರಾಕೃತ, ಕನ್ನಡ ಮರಾಠಿ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದವರು. ತಾಡವೋಲೆಗಳಲ್ಲಿ ಹುದುಗಿದ್ದ ಅದೆಷ್ಟೋ ಪ್ರಾಕೃತ, ಅರ್ಧಮಾಗಾಧಿ, ಸಂಸ್ಕೃತ, ಕನ್ನಡ ಗ್ರಂಥಗಳನ್ನು ತುಂಬಾ ಶಾಸ್ತ್ರೀಯವಾಗಿ ಸಂಪಾದನೆ ಮಾಡಿ, ವಿಸ್ತೃತವಾದ ಅಮೂಲ್ಯ ಪ್ರಸ್ತಾವನೆ ಮತ್ತು ಅನುಬಂಧಗಳೊಡನೆ ಅವನ್ನು ಪ್ರಕಟಿಸಿ, ಭಾರತೀಯ ವಿದ್ವತ್ ಲೋಕಕ್ಕೆ ಅವರು ಸಲ್ಲಿಸಿರುವ ಸೇವೆ ಅಮೂಲ್ಯವಾದದ್ದು. ರಾಷ್ಟ್ರದ ಪ್ರಖ್ಯಾತ ಸಂಶೋಧನ ಸಂಸ್ಥೆಗಳಲ್ಲಿಯೂ, ಪ್ರಕಾಶನ ಸಂಸ್ಥೆಗಳಲ್ಲಿಯೂ ಸಲಹೆಗಾರರಾಗಿದ್ದುಕೊಂಡು ಅವರು ಮಾಡಿಸಿದ ವಿದ್ವತ್ ಕಾರ್ಯಗಳು ಈ ಕ್ಷೇತ್ರಕ್ಕೆ ಅನೇಕ ಹೊಸ ಬೆಳಕನ್ನು ಕೊಟ್ಟವು. ‘ಕರ್ನಾಟಕದ ಆದ್ಯ ಆರ್ಕಿಯಾಲಜಿಸ್ಟ್’ ಎಂಬ ಖ್ಯಾತಿಗೆ ಪಾತ್ರರಾದ, ಖ್ಯಾತ ವಿದ್ವಾಂಸ ಪ್ರೊ. ಕೆ.ಜಿ. ಕುಂದಣಗಾರ ಅವರ ಬದುಕಿಗೆ ನೆಲೆ ಕಲ್ಪಿಸಿದ್ದು, ಖ್ಯಾತ ಲೇಖಕ ಮಿರ್ಜಿ ಅಣ್ಣಾರಾಯ ಅವರನ್ನು ಒಬ್ಬ ವಿದ್ವಾಂಸರನ್ನಾಗಿ ರೂಪಿಸಿದ್ದು ಪ್ರೊ. ಆ. ನೇ. ಉಪಾಧ್ಯೆ ಅವರೇ. ಭಾರತೀಯ ಜ್ಞಾನಪೀಠ, ಸೊಲ್ಲಾಪುರದ ಜೀವರಾಜ ಗ್ರಂಥಮಾಲೆಯಂಥ ಸಂಸ್ಥೆಗಳ ಮೂಲಕ ಅನೇಕಾನೇಕ ವಿದ್ವತ್ಪೂರ್ಣ ಹೆಬ್ಬೊತ್ತಗೆಗಳು ಹೊರಬರುವಂತೆ ಆದದ್ದು ಪ್ರೊ.ಉಪಾಧ್ಯೆ ಅವರ ಪರಿಶ್ರಮದ ಫಲ. ಜ್ಞಾನೋಪಾಸನೆಯನ್ನು ಒಂದು ವ್ರತದಂತೆ ಕೈಗೊಂಡು ಅದರ ಸಾಧನೆಯೊಂದೇ ತಮ್ಮ ಪ್ರಪಂಚವೆಂಬಂತೆ ಬದುಕಿದ ಋಷಿ ಸದೃಶವ್ಯಕ್ತಿ ಡಾ. ಆ.ನೇ. ಉಪಾಧ್ಯೆ ಅವರು.

ಡಾ. ಆ. ನೇ. ಉಪಾಧ್ಯೆ ಅವರ ಪೂರ್ಣ ಹೆಸರು ಆದಿನಾಥ ನೇಮಿನಾಥ ಉಪಾಧ್ಯೆ ಎಂದು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಸದಲಗಾ ಎಂಬ ಗ್ರಾಮವಿದೆ. ಅಲ್ಲಿನ ಒಂದು ಸಾಮಾನ್ಯ ಜೈನ ಪುರೋಹಿತ ಕುಟುಂಬದಲ್ಲಿ ಹುಟ್ಟಿದ ಮಗು ಈ ಆದಿನಾಥ. ತಂದೆಯ ಹೆಸರು ನೇಮಿನಾಥ. ತಾಯಿ ಚಂದ್ರಾಬಾಯಿಯವರು. ಆದಿನಾಥರ ಮೂಲ ಹೆಸರು ಕಲ್ಲಪ್ಪ. ಕಲ್ಲಪ್ಪ ಹುಟ್ಟಿದ್ದು 1906 ಫೆಬ್ರವರಿ 6ರಂದು.

ಕಲ್ಲಪ್ಪ ಬೆಳೆದು ದೊಡ್ಡವನಾಗುತ್ತಿದ್ದಂತೆ ಸದಲಗಾ ಗ್ರಾಮದಲ್ಲಿಯೇ ಆದಿನಾಥ ಎಂಬ ಹೆಸರಿನಿಂದ ಶಾಲೆಗೆ ಸೇರಿಸಲಾಯಿತು. ತಂದೆ ನೇಮಿನಾಥ ಉಪಾಧ್ಯೆಯವರು ಬೇಗನೆ ತೀರಿಕೊಂಡರು. ಮಗುವನ್ನು ಲಾಲಿಸಿ ಪೋಷಿಸುವ ಹೊಣೆ ತಾಯಿ ಹಾಗೂ ಅಜ್ಜನ ಮೇಲೆ ಬಿದ್ದಿತು. ಸ್ವಲ್ಪ ಜಮೀನು ಸಹ ಇದ್ದು ಒಕ್ಕಲುತನವನ್ನು ಇವರು ನಡೆಸುತ್ತಿದ್ದರು. ಇವರು ಪ್ರೌಢಶಾಲೆಗೆ ಬೆಳಗಾವಿಯ ಗಿಲಗಂಜಿ ಅರಟಾಳ ಹೈಸ್ಕೂಲಿಗೆ ಸೇರಿದರು. ಹೈಸ್ಕೂಲಿನಲ್ಲಿ ವಿದಾರ್ಥಿ ವೇತನ ದೊರೆಯಿತು. ಅವರಿದ್ದ ‘ಮಾನಿಕಭಾಗ ದಿಗಂಬರ ಜೈನ ಬೋರ್ಡಿಂಗ್’ನಲ್ಲಿ ಪ್ರತಿದಿನವೂ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತಿತ್ತು. ಪ್ರಖ್ಯಾತ ಮೈಸೂರು ಅರಮನೆಯ ಆಸ್ಥಾನ ಪಂಡಿತರೂ ‘ಮಹಾಪುರಾಣ’ವನ್ನು ಕನ್ನಡಕ್ಕೆ ಅನುವಾದಿಸಿದ ಮಹಾನ್ ವಿದ್ವಾಂಸರೂ ಆದ ಪಂಡಿತ ಎ. ಶಾಂತಿರಾಜಶಾಸ್ತ್ರಿಗಳು ವರ್ಷಕ್ಕೊಂದು ಬಾರಿ ಈ ವಿದ್ಯಾರ್ಥಿ ನಿಲಯಕ್ಕೆ ಭೇಟಿಕೊಟ್ಟು ಕೆಲವು ದಿನಗಳ ಕಾಲ ತಂಗಿದ್ದು ವಿದ್ಯಾರ್ಥಿಗಳಿಗೂ ಅಲ್ಲಿಗೆ ಬರುತ್ತಿದ್ದ ಶ್ರಾವಕರಿಗೂ ಜೈನಧರ್ಮ, ಶಾಸ್ತ್ರ, ಸಾಹಿತ್ಯಗಳ ಬಗ್ಗೆ ಪವಚನ ನೀಡುತ್ತಿದ್ದರು. ಇದು ಬಹುಶಃ ಆದಿನಾಥನಲ್ಲಿ ಧರ್ಮ, ಸಾಹಿತ್ಯಗಳ ಬಗ್ಗೆ ಅಭಿರುಚಿ ಕೆರಳಿಸಿದ ಮೊಟ್ಟಮೊದಲಸಂಗತಿ.

ಅಧ್ಯಯನದ ಕಡೆ ಆದಿನಾಥನ ಒಲವನ್ನು ತಿರುಗಿಸಿದ ಇನ್ನೊಂದು ಅಂಶವೆಂದರೆ ಸದಲಗಾದ ಗ್ರಂಥಭಂಡಾರ. ಈ ಗ್ರಂಥ ಭಂಡಾರದಲ್ಲಿ ಪ್ರಾಕೃತ, ಅಪಭ್ರಂಶ ಕಾವ್ಯಗಳು, ಶಬ್ದಮಣಿ ದರ್ಪಣ, ಹಳಗನ್ನಡ ಗ್ರಂಥಗಳು, ತೆಲುಗು – ಕನ್ನಡ ದೇವನಾಗರಿ ಲಿಪಿಯಲ್ಲಿನ ಗ್ರಂಥಗಳನ್ನು ಮನೆಗೆ ಬಂದಾಗಲೆಲ್ಲಾ ಓದುವ ಅಭ್ಯಾಸ ಬೆಳೆಯಿತು. ಸಣ್ಣ ಹುಡುಗ ಈ ಗ್ರಂಥಗಳನ್ನು ಒರಟೊರಟಾಗಿ ಎಳೆದು ಹಾಳುಮಾಡಿ ಬಿಟ್ಟಾನು ಎಂಬ ಸಹಜ ಭಯದಿಂದ ಅಜ್ಜ ಈ ಹುಡುಗನನ್ನು ಪುಸ್ತಕದ ಬೀರುವಿನಲ್ಲಿ ಕೈಹಾಕದಂತೆ ಬೆದರಿಸುತ್ತಿದ್ದರು. ಆದರೆ ಹುಡುಗನಿಗೆ ಆ ಗ್ರಂಥಲೋಕದಲ್ಲಿ ವಿಹರಿಸುವ ಬಯಕೆ; ಹೀಗಾಗಿ ಅಜ್ಜನ ಕಣ್ಣು ತಪ್ಪಿಸಿ ಅಲ್ಲಿಂದ ಪುಸ್ತಕಗಳನ್ನೆತ್ತಿಕೊಂಡು ಓದುತ್ತಿದ್ದ.

ಬಡತನದಿಂದ ಕಾಲೇಜು ಶಿಕ್ಷಣ ಪಡೆಯುವ ಆಸೆಗೆ ಭಂಗವಾಗುವ ಸ್ಥಿತಿಯಲ್ಲಿದ್ದಾಗ ಕೊಲ್ಲಾಪುರದ ದಿವಾನರಾಗಿದ್ದ ಅಣ್ಣಾಸಾಹೇಬ ಲಠ್ಠೆ ಅವರು ಸಹಾಯ ನೀಡಿದ ಬೆಂಬಲದಿಂದಾಗಿ ಉಪಾಧ್ಯೆ ಅವರು ಕೊಲ್ಲಾಪುರದ ರಾಜಾರಾಮ ಕಾಲೇಜು ಸೇರಿದರು. ಸ್ವಲ್ಪಕಾಲದ ನಂತರ ಅದನ್ನು ತೊರೆದು ಸಾಂಗ್ಲಿಯಲ್ಲಿದ್ದ ಪ್ರಸಿದ್ಧ ವಿಲಿಂಗ್ಡನ್ ಕಾಲೇಜನ್ನು ಸೇರಿದರು. ಸಂಸ್ಕೃತ ಮತ್ತು ಅರ್ಧಮಾಗಧಿ ವಿಷಯಗಳನ್ನು ಪ್ರಧಾನ ವಿಷಯಗಳನ್ನಾಗಿ ಆರಿಸಿಕೊಂಡು ಬಿ. ಎ. ಪದವಿಯನ್ನು 1928ರಲ್ಲಿ ಪಡೆದರು.

ಅಲ್ಲಿಂದ ಮುಂದೆ ಉಪಾಧ್ಯೆ ಪುಣೆಯ ‘ಭಂಡಾರಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್’ ಸೇರಿದರು. ಅಂತರರಾಷ್ಟ್ರೀಯ ಖ್ಯಾತಿಯ ಪ್ರಾಚ್ಯ ವಿದ್ಯಾ ವಿದ್ವಾಂಸರೂ ಸದಾಕಾಲಕ್ಕೂ ಪ್ರಾತಃಸ್ಮರಣೀಯರೂ ಆದ ಡಾ. ಪಿ.ಎಲ್. ವೈದ್ಯ, ವಿ.ಎಸ. ಸುಕ್ತಂಕರ್, ಪ್ರೊ. ಎಸ್. ಕೆ. ಬಿಳವಲಕರ್ ಇವರುಗಳ ಪರಿಚಯ, ಮಾರ್ಗದರ್ಶನ, ವಾತ್ಸಲ್ಯ ಇವರಿಗೆ ಲಭ್ಯವಾಯಿತು. ಆ ಮಹನೀಯರು ಇವರ ವಿದ್ವತ್ ಜೀವನದ ರೂವಾರಿಗಳಾದರು. ಸಂಶೋಧನೆ, ಗ್ರಂಥ ಸಂಪಾದನೆಯ ಮರ್ಮಗಳನ್ನೆಲ್ಲ ಇವರಿಗೆ ತಿಳಿಸಿಕೊಟ್ಟ ನಿಸ್ವಾರ್ಥ ಗುರುಗಳವರು. ಇವರ ಸಾಹಚರ್ಯದಲ್ಲಿ ಉಪಾಧ್ಯೆ ಮುಂಬೈ ವಿಶ್ವವಿದ್ಯಾಲಯದ ಎಂ.ಎ ಪದವಿ ಪಡೆದರು (1930).

ಎಂ. ಎ ಮುಗಿಯುತ್ತಿದ್ದಂತೆ ಕೊಲ್ಲಾಪುರದ ರಾಜಾರಾಮಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುವ್ವತ್ಮೂರು ವರ್ಷಗಳ ದೀರ್ಘಕಾಲದ ಅಧ್ಯಾಪಕ ವೃತ್ತಿಯನ್ನು ಅದೇ ಕಾಲೇಜಿನಲ್ಲಿ ನಡೆಸಿದರು. ಈ ಮಧ್ಯೆ ಅವರು 1938ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿ ಪಡೆದರು. ಮುಂಬೈ ವಿಶ್ವವಿದ್ಯಾಲಯವು ಸಂಶೋಧಕರಿಗೆ ನೀಡುವ ಪ್ರಖ್ಯಾತ ರಿಸರ್ಚ್ ಸ್ಕಾಲರ್ ಶಿಪ್ ಡಾ. ಉಪಾಧ್ಯೆಯವರಿಗೆ ಅದೇ ವರ್ಷ ದೊರಕಿತು. 1939ರಿಂದ 1942ರವರೆಗೆ ಮೂರು ವರ್ಷಗಳ ಕಾಲ ಈ ಯೋಜನೆಯಡಿಯಲ್ಲಿ ಸಂಶೋಧನೆ ನಡೆಸಿದರು. ಇದೇ ಅವಧಿಯಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲಭಾರತ ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ, ಪ್ರಾಕೃತ, ಪಾಲಿ, ಬೌದ್ಧಧರ್ಮ ಮತ್ತು ಜೈನಧರ್ಮಕ್ಕೆ ಸಂಬಂಧಿಸಿದ ವಿಭಾಗದ ಅಧ್ಯಕ್ಷತೆಯ ಗೌರವ ಅವರಿಗೆ ಪ್ರಾಪ್ತವಾಯಿತು (1941). ಆಗಿನ್ನೂ ಅವರಿಗೆ ಮೂವತ್ತೈದು ವರ್ಷ.

ತಮ್ಮ ತಾಯಿ ಎಂದರೆ ಉಪಾಧ್ಯೆ ಅವರಿಗೆ ಪಂಚಪ್ರಾಣ. ಇವರ ವಿದ್ವತ್ ಗ್ರಂಥಗಳು ಪ್ರಕಟವಾಗಿ ಖ್ಯಾತಿಲತೆ ಹಬ್ಬುತ್ತಿದ್ದಂತೆ ಜರ್ಮನಿಗೆ ಬರಬೇಕೆಂದು ಒಂದು ಆಮಂತ್ರಣ ಬಂದಿತು. ತಾಯಿ ಮಗನನ್ನು ಅಷ್ಟು ದೂರ ಕಳಿಸಲು ಒಪ್ಪಲಿಲ್ಲ. ಸರಿ. ಜರ್ಮನಿಗೆ ಹೋಗುವುದನ್ನೇ ಬಿಟ್ಟು ಬಿಟ್ಟರು. ಇಂಥ ಮತ್ತೊಂದು ಪ್ರಸಂಗವೂ ಮುಂದೆ ಬಂದಿತು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅರ್ಧಮಾಗಧಿ ವಿಭಾಗವನ್ನು ಅಭಿವೃದ್ಧಿಪಡಿಸಲೆಂದು ಕುಲಪತಿ ಡಾ. ಡಿ.ಸಿ. ಪಾವಟೆಯವರು ಉಪಾಧ್ಯೆಯವರನ್ನು ಅಲ್ಲಿಗೆ ಕರೆ ತರುವ ಯೋಜನೆ ಹಾಕಿದರು (1956). ಮುಪ್ಪಿನ ತಾಯಿ ಕೊಲ್ಲಾಪುರ ಬಿಡಲೊಲ್ಲೆನೆಂದಾಗ ಉಪಾಧ್ಯೆ ಧಾರವಾಡಕ್ಕೂ ಬರಲೊಪ್ಪಲಿಲ್ಲ. ಕೊಲ್ಲಾಪುರವೇ ಅವರ ಜೀವಮಾನದ ಕರ್ಮಭೂಮಿಯಾಯಿತು.

1963ರಲ್ಲಿ ನಿವೃತ್ತರಾದ ಬಳಿಕ ಒಂಭತ್ತು ವರ್ಷ ಯು.ಜಿ.ಸಿ ಫೆಲೋಶಿಪ್ ನಡಿಯಲ್ಲಿ ಸಂಶೋಧನ ಕಾರ್ಯ ಮುಂದುವರೆಸಿದರು (1963-72). ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗ 1971ರಲ್ಲಿ ಆರಂಭವಾಯಿತು. ಅದರ ಮುಖ್ಯಸ್ಥರಾಗಿ ಬರಬೇಕೆಂಬ ಆಹ್ವಾನವನ್ನು ಸ್ವೀಕರಿಸಿ ಅಲ್ಲಿಗೆ ಬಂದ ಡಾ. ಉಪಾಧ್ಯೆ ಆ ವಿಭಾಗವನ್ನು ಕಟ್ಟಿ ಬೆಳೆಸಿದರು. ಮೈಸೂರು ಬೆಂಗಳೂರುಗಳಲ್ಲಿನ ಸಾಹಿತ್ಯ ಸಂಶೋಧಕರಿಗೆ ಉಪಾಧ್ಯೆ ಸ್ಪೂರ್ತಿಯಾದರು. ತರುಣ ಸಂಶೋಧಕರನ್ನು ಪ್ರೇರಿಸಿದರು.

ಮೈಸೂರಿನಿಂದ ನಿವೃತ್ತಿ ಪಡೆದು ಹೊರಡುವ ಮುನ್ನ ಅವರಿಗೆ ರಾಷ್ಟ್ರಕವಿ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಬೆಂಗಳೂರಲ್ಲೂ ಬೀಳ್ಕೊಡುಗೆ ಸಮಾರಂಭಗಳು ನಡೆದವು. ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನಿಂದ ಕೊಲ್ಲಾಪುರ ತಲುಪುತ್ತಿದ್ದಂತೆ ತೀವ್ರ ಹೃದಯಾಘಾತಕ್ಕೆ ಒಳಗಾದ ಈ ಆಚಾರ್ಯರನ್ನು ನೇರವಾಗಿ ಆಸ್ಪತ್ರೆಗೆ ಸೇರಿಸಲಾಯಿತು. ತಾ. 8.10.1975ರಂದು ಈ ಸಾರಸ್ವತ ತಪಸ್ವಿ ಕಣ್ಣುಮುಚ್ಚಿದರು. ಅವರ ಅಗಲಿಕೆಯನ್ನು ಡಾ. ಹಂಪನಾ ಹೀಗೆ ವರ್ಣಿಸುತ್ತಾರೆ “ದೀಪದ ಕುಡಿ ಆರುವಂತೆ ತಟಕ್ಕನೆ ಕಣ್ಮರೆಯಾದರು. ಸಂಶೋಧನೆಯ ದೊಡ್ಡಹಡಗು ತನ್ನೆಲ್ಲ ಸರಕಿನೊಂದಿಗೆ ಮುಳುಗಿತು”. ಜ್ಞಾನಪೀಠ ಸಂಸ್ಥೆ ಕೂಡಾ ಈ ಮಾಹಾನ್ ವಿದ್ವಾಂಸರ ಗೌರವಾರ್ಥವಾಗಿ ತನ್ನ ಕಚೇರಿಗಳನ್ನು ಮುಚ್ಚಿ ಅಶ್ರುಮಿಡಿಯಿತು.

ಡಾ. ಉಪಾಧ್ಯೆ ಅವರು ಪ್ರಮುಖವಾಗಿ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಅವರನ್ನು ‘ಗ್ರಂಥ ಸಂಪಾದನಾಚಾರ್ಯ’ ಎಂದು ವಿದ್ವಾಂಸರು ಬಣ್ಣಿಸುತ್ತಿದ್ದರು. ಅದಕ್ಕೆ ಹೊಂದಿಕೊಂಡಂತೆ ಸಾಹಿತ್ಯ, ಇತಿಹಾಸ, ಭಾಷಾ ಶಾಸ್ತ್ರ, ಶಬ್ದನಿಷ್ಪತ್ತಿ ಇತ್ಯಾದಿ ಶಾಖೆಗಳಲ್ಲಿ ಅವರು ಪ್ರಾವೀಣ್ಯ ಪಡೆದಿದ್ದರು.

ಡಾ. ಉಪಾಧ್ಯೆ ತಮ್ಮ ಮೊದಲ ಸಂಶೋಧನ ಲೇಖನ ಬರೆದದ್ದು 1929ರಲ್ಲಿ. ‘Samanthabhadra – An Outstanding Personality’ ಎಂಬ ಲೇಖನ ಅದು. ಸಮಂತಭದ್ರರೆಂಬ ಪ್ರಸಿದ್ಧ ಜೈನಾಚಾರ್ಯರನ್ನು ಕುರಿತ ಲೇಖನ ಅದು. ಅವರು ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸಿದ ಮೊದಲ ಗ್ರಂಥ ‘ಪಂಚಸುತ್ತಂ’ ಎಂಬುದು. ಅದು ಒಬ್ಬ ಅಜ್ಞಾತ ಕವಿಯಿಂದ ರಚಿತವಾಗಿದ್ದ ಪ್ರಾಕೃತ ಕೃತಿ. ಇದು ಜೈನ ಸಿದ್ಧಾಂತ ಗ್ರಂಥ. ಇದನ್ನು ಇಷ್ಟೊಂದು ಪ್ರಬುದ್ಧವಾಗಿ ಪ್ರಕಟಿಸಿದಾಗ ಅವರಿಗಿನ್ನೂ 29ವರ್ಷ (1935). ಆಗಿನ್ನೂ ಅವರಿಗೆ ಡಾಕ್ಟರೇಟ್ ಬಂದಿರಲಿಲ್ಲ. ಈ ತರುಣ ಸಂಪಾದಿಸಿದ ಈ ಮಹತ್ವದ ಗ್ರಂಥದ ಬಗ್ಗೆ ವಿದೇಶಿ ವಿದ್ವಾಂಸರಾದ – ಷೂಬ್ರಿಂಗ್, ಎಲ್. ಡಿ. ಬಾರ್ನೆಟ್, ವಿಂಟರ್ ನಿಟ್ಸ್ ಮೊದಲಾದ ಖ್ಯಾತ ಪಂಡಿತರು ಮುಕ್ತಕಂಠದ ಪ್ರಶಂಸೆ ಮಾಡಿದರು.

ಅದರ ಮರುವರ್ಷ ಅವರು ಮತ್ತೊಂದು ಮಹಾಕೃತಿಯ ಸಂಪಾದನಾ ಕಾರ್ಯ ಮುಗಿಸಿ ಪ್ರಕಟಿಸಿದರು. ಅದು ಕುಂದಕುಂದಾಚಾರ್ಯರೆಂಬ ಮತ್ತೊಬ್ಬ ಪ್ರಸಿದ್ಧ ಜೈನಾಚಾರ್ಯರ ಪ್ರಾಕೃತ ಗ್ರಂಥ – ಪ್ರವಚನ ಸಾರ. ಈ ಪುಸ್ತಕವನ್ನೂ ಇದಕ್ಕಿಂತ ಹಿಂದೆ ಪ್ರಕಟಿಸಿದ ತಮ್ಮ ಸಂಪಾದಿತ ಕೃತಿಗಳನ್ನೂ ಒಟ್ಟಾಗಿ ಸೇರಿಸಿ ಮುಂಬೈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದಾಗ ಆ ಕೃತಿಗಳು ಹೊರಸೂಸುವ ವಿದ್ವತ್ ಪ್ರತಿಭೆಯನ್ನೂ ಸಂಪಾದನಾ ಕಾರ್ಯದಲ್ಲಿನ ವಿಚಕ್ಷಣತೆಯನ್ನೂ ಜ್ಞಾನದ ನಿರ್ದುಷ್ಟತೆಯನ್ನೂ ಗಮನಿಸಿದ ಪರೀಕ್ಷಕರು ಬೆರಗಾದರು. ಸಂತೋಷದಿಂದ ಅವರಿಗೆ ಡಿ.ಲಿಟ್ ಶಿಫಾರಸ್ಸು ಮಾಡಿದರು. ಇವರ ಗುರುಗಳಾದ ಡಾ. ಪಿ. ಎಲ್. ವೈಧ್ಯ ಹಾಗೂ ಡಾ. ಸುಕ್ತಂಕರ್ ಇವರುಗಳು ತುಂಬುಹೃದಯದಿಂದ ಇವರನ್ನು ಹೊಗಳಿ ‘ಗುರುವನ್ನು ಮೀರಿಸಿದ ಗುರುವಾಗಿದ್ದೀರಿ’ ಎಂದು ಮೆಚ್ಚಿದರು. ಅನಂತರ ಇವರಿಗೆ ಸ್ಟ್ರಿಂಜರ್ ಫೆಲೋಶಿಪ್ ದೊರೆತದ್ದು ಡಾ. ಸುಕ್ತಂಕರ್ ಅವರ ಶಿಫಾರಸ್ಸಿನಿಂದಲೇ.

ತಮ್ಮ ಜೀವಿತಾವಧಿಯಲ್ಲಿ ಉಪಾಧ್ಯೆ ಮಾಡಿದ ವಿದ್ವತ್ಕಾರ್ಯ ಬೃಹತ್ ಮಹತ್ತುಗಳಲ್ಲಿ ಘನವಾದದ್ದು. ಅವರು ಬರೆದಿರುವ ಸಂಪಾದಿಸಿರುವ ಗ್ರಂಥಗಳ ಸಂಖ್ಯೆ ಮೂವತ್ತು. ವಿದ್ವತ್ ಪ್ರಬಂಧಗಳ ಸಂಖ್ಯೆ ಸುಮಾರು ಇನ್ನೂರು. ಪುಸ್ತಕ ವಿಮರ್ಶೆಗಳು ಎಪ್ಪತ್ತೈದು.

ಪ್ರೊ. ಕೆ.ಜಿ. ಕುಂದಣಗಾರ ಆವರೊಡನೆ ಸೇರಿ ‘ಚಿನ್ಮಯ ಚಿಂತಾಮಣಿ’ ಹಾಗೂ ‘ಜ್ಞಾನಭಾಸ್ಕರ ಚರಿತೆ’ ಎಂಬ ಎರಡು ಕನ್ನಡ ಕಾವ್ಯಗಳನ್ನು ಸಂಪಾದಿಸಿದ್ದಾರೆ. ಡಾ. ಉಪಾಧ್ಯೆಯವರು ಕನ್ನಡದಲ್ಲಿ ಇಪ್ಪತ್ತೊಂದು ಲೇಖನಗಳನ್ನೂ, ಮೂರು ಪುಸ್ತಕಗಳನ್ನೂ ಬರೆದಿದ್ದಾರೆ. ಮೇಲೆ ಹೇಳಿದ ಎರಡು ಪುಸ್ತಕಗಳಲ್ಲದೆ ಇನ್ನೊಂದು, ‘ಪಾಲಿ ಮತ್ತು ಪ್ರಾಕೃತ’. ಇದು ಇವರು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಂಗದ ಆಶ್ರಯದಲ್ಲಿ ಇದೇ ವಿಚಾರದಲ್ಲಿ ನೀಡಿದ ಮೂರು ಉಪನ್ಯಾಸಗಳ ಸ ಸಂಕಲನ.

ಕನ್ನಡ ನಾಡಿನಲ್ಲ ಹುಟ್ಟಿ, ಕನ್ನಡ, ಸಂಸ್ಕೃತ, ಪ್ರಾಕೃತ – ಹೀಗೆ ವಿವಿಧ ಭಾಷೆಗಳಲ್ಲಿ ಕಾವ್ಯಗಳನ್ನೂ ಶಾಸ್ತ್ರ ಗ್ರಂಥಗಳನ್ನೂ ರಚಿಸಿದ ಪ್ರತಿಭಾವಂತ ಕವಿಗಳು, ಆಚಾರ್ಯರು ಆಗಿ ಹೋಗಿದ್ದಾರೆ. ಅವರನ್ನು, ಅವರ ಕೃತಿಗಳ ಮಹತ್ವವನ್ನು ಕುರಿತು ಉಪಾಧ್ಯೆಯವರು ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಲೇಖನಗಳನ್ನು ಬರೆದಿದ್ದಾರೆ. ಇದರಿಂದಾಗಿ ಜಗತ್ತು ಕನ್ನಡ ಸಾಹಿತ್ಯ ಹಾಗೂ ಇಲ್ಲಿನ ಮಹಾಪ್ರತಿಭೆಯ ಪೂರ್ವಸೂರಿಗಳ ಬಗೆಗೆ ತಿಳಿಯಲು ಸಾಧ್ಯವಾಯಿತು.

ಡಾ. ಉಪಾಧ್ಯೆ ಕೆಲವು ಮಹತ್ವಪೂರ್ಣ ಗ್ರಂಥಗಳನ್ನು ಡಾ. ಹೀರಾಲಾಲ್ ಜೊತೆ ಸೇರಿ ಸಂಪಾದಿಸಿದ್ದಾರೆ. ಡಾ. ಹೀರಾಲಾಲ್ ಜೈನ್ ಉಪಾಧ್ಯೆಯವರಿಗಿಂತ ಹಿರಿಯರು. ಭಾರತದ ಈ ಕಾಲದ ಪ್ರಕಾಂಡ ಪಂಡಿತರಲ್ಲೊಬ್ಬರು. ಇಬ್ಬರೂ ಸಮಾನ ಆಸಕ್ತಿಯುಳ್ಳವರು. ‘ಧವಲಾ’ ಇವುಗಳಲ್ಲಿ ಪ್ರಮುಖವಾದುದು. ಇದನ್ನು ಭಾರತೀಯ ಜ್ಞಾನಪೀಠವು ಸುಮಾರು ತಲಾ 500 ಪುಟಗಳ ಹದಿನಾರು ಸಂಪುಟಗಳಲ್ಲಿ (ಒಟ್ಟು ಎಂಟು ಸಾವಿರ ಪುಟಗಳು) ಪ್ರಕಟಿಸಿತು. ಜೈನ ಆಗಮತತ್ವವನ್ನು ಅಭ್ಯಾಸ ಮಾಡಬೇಕೆನ್ನುವ ಯಾರಿಗೇ ಆಗಲಿ ಇದೊಂದು ಮೂಲಭೂತ ಅಧಿಕೃತ ಆಧಾರಗ್ರಂಥವೆಂದು ಪರಿಗಣಿತವಾಗಿದೆ. ಇವರಿಬ್ಬರೂ ಕೂಡಿ ಸಂಪಾದಿಸಿದ ಇತರ ಕೆಲವು ಗ್ರಂಥಗಳೆಂದರೆ ಸಂಸ್ಕೃತದಲ್ಲಿ ‘ಆತ್ಮಾನುಶಾಸನ’, ‘ಪಂಚವಿಂಶತಿ’, ‘ಬ್ರಹತ್ ಕಥಾಕೋಶ’; ಪ್ರಾಕೃತದಲ್ಲಿ ಬರೆದು , ಹಿಂದಿ ಇಂಗ್ಲಿಷ್ ಭಾಷೆಗಳಲ್ಲಿ ಪ್ರಸ್ತಾವನೆ ಉಳ್ಳ ‘ತಿಲೋಯ ಪಣ್ಣತ್ತಿ’ (ಭಾಗ 1 ಮತ್ತು 2) ಇತ್ಯಾದಿ.

ಡಾ. ಉಪಾಧ್ಯೆಯವರು ಸ್ವತಂತ್ರವಾಗಿ ಸಂಪಾದಿಸಿರುವ ಕೆಲವು ಮಹತ್ವಪೂರ್ಣ ಕೃತಿಗಳೆಂದರೆ – ‘ಆನಂದ ಸುಂದರಿ (ಪ್ರಾಕೃತ – ನಾಟಕ), ಉಷಾಣಿರುದ್ಧ (ಪ್ರಾಕೃತ ಕಾವ್ಯ), ಕಾರ್ತಿಕೇಯಾನು ಪ್ರೆಕ್ಷ್ಯಾ (ಪ್ರಾಕೃತ – ಜೈನ ಸಿದ್ಧಾಂತ ಗ್ರಂಥ), ಕುವಲಯ ಮಾಲಾಕಹಾ (ಕುವಲಯ ಕಥಾ ಪ್ರಾಕೃತ – ಶ್ರಂಗಾರ ಪ್ರಧಾನ ಕಾವ್ಯ – ಎಂಟನೆಯ ಶತಮಾನದ್ದು) ಕಥಾಕೋಶ (ಸಂಸ್ಕೃತ ಗದ್ಯ ಕೃತಿ), ಜಂಬೂದೀವ ಪಣ್ಣತ್ತಿ ಸಂಗ್ರಹ (ಪ್ರಾಕೃತ ಶಾಸ್ತ್ರ ಗ್ರಂಥ, ಹತ್ತನೇ ಶತಮಾನದ್ದು). ದೂರ್ತಾಖ್ಯಾನ – ಎ ಕ್ರಿಟಿಕಲ್ ಸ್ಟಡಿ –ವಿಶಿಷ್ಟವಾದ ಒಂದು ವಿಡಂಬನ ಕಥಾಕೋಶ (ಸಂಸ್ಕೃತದಲ್ಲಿ), ಚಂದ್ರಲೇಖ (ಪ್ರಾಕೃತ ನಾಟಕ), ಪ್ರವಚನ ಸಾರ (ಪ್ರಾಕೃತ), ಪುಣ್ಯಾಸ್ರವ ಕಥಾಕೋಶ (ಸಂಸ್ಕೃತ) ಮುಂತಾದವು.

ಇವಲ್ಲದೆ ಇಂಗ್ಲಿಷಿನಲ್ಲಿ ಬರೆದಿರುವ ಎರಡು ಕೃತಿಗಳು ಪ್ರಸಿದ್ಧವಾಗಿವೆ. ‘ಪ್ರಾಕೃತ ಲಾಂಗ್ವೇಜಸ್ ಅಂಡ್ ಲಿಟರೇಚರ್’, ‘ಗೋವಿಂದ ಪೈ – ಮ್ಯಾನ್ ಆಫ್ ಲಿಟರ್ಸ್.

ಕನ್ನಡದಲ್ಲಿ ಅವರು ವರಂಗಚರಿತೆ, ವಡ್ಡಾರಾಧನೆ, ಆದಿಪುರಾಣ, ಧರ್ಮಪರೀಕ್ಷೆ, ಜೀವಸಂಭೋಧನೆ – ಈ ಕಾವ್ಯಗಳನ್ನು ಕುರಿತು ಮತ್ತು ಪ್ರಾಕೃತ ಭಾಷೆ, ಕವಿ ರನ್ನ ಇತ್ಯಾದಿಗಳನ್ನು ಕುರಿತು ಲೇಖನಗಳನ್ನು ಬರೆದಿದ್ದಾರೆ. ಅವರು ಕನ್ನಡದಲ್ಲಿ ಬರೆದಿರುವುದಕ್ಕಿಂತ ಕನ್ನಡದಲ್ಲಿರುವುದನ್ನು ಕುರಿತು ಇಂಗ್ಲಿಷಿನಲ್ಲಿ ಬರೆದಿರುವುದೇ ಬಹಳ.

ಗ್ರಂಥ ಸಂಪಾದನೆಯಲ್ಲಿ ಉಪಾಧ್ಯೆ ಹೊಸದಾದ ಪರಿಪುಷ್ಟವಾದ ಹೊಸ ರಾಜಮಾರ್ಗವೊಂದನ್ನು ನಿರ್ಮಿಸಿಕೊಟ್ಟರು. ಆ ರೀತಿ ಹೊಸ ಪಂಥವನ್ನು ನಿರ್ಮಿಸಿದ್ದೇ ಒಂದು ಸೃಜನಶೀಲ ಕಾರ್ಯ. ಅವರು ಹಾಕಿಕೊಟ್ಟ ಪದ್ಧತಿಯನ್ನು ‘ಉಪಾಧ್ಯೆ ಪಂಥ’ (Upadhya School of Critical Methodology in Editing Claasical Texts) ಎಂದು ಈ ಕ್ಷೇತ್ರದ ಸರ್ವೋತ್ತಮ ಆಚಾರ್ಯರುಗಳು ಪ್ರಶಂಸಿಸಿದ್ದಾರೆ.

ಉಪಾಧ್ಯೆಯವರ ಅದ್ಭುತ ವಿದ್ವತ್ತಿಗೆ, ಬರವಣಿಗೆಯಲ್ಲಿನ ನಿಖರತೆಗೆ ಮೆಚ್ಚಿದವರ ಪಟ್ಟಿ ಬಹು ದೊಡ್ಡದು. ಇವೆಲ್ಲ ದಾಖಲೆಯಲ್ಲಿರುವ ಅಂಶಗಳು. ಜರ್ಮನಿಯ ವಿದ್ವಾಂಸರಾದ ಡಾ. ಡಬ್ಲ್ಯೂ. ಷುಬ್ರಿಂಗ್, ಡಾ. ವಿಂಟರನಿಟ್ಜ್, ಡಾ. ಎ.ಬಿ. ಕೀತ್, ಡಾ. ಲುಡ್ವಿಗ್ ಆಲ್ಸಡಾರ್ಫ್, ಇಟಲಿಯ ಡಾ. ಎಲ್. ನೌಲಿ – ಇಂಥ ವಿದೇಶೀ ಸೂರಿಗಳಲ್ಲದೆ, ಭಾರತದ ಶ್ರೇಷ್ಠ ಪಂಡಿತರುಗಳಾದ – ಪಂಡಿತ ನಾಥೂರಾಮ ಪ್ರೇಮಿ, ರಾ. ನರಸಿಂಹಾಚಾರ್, ಆರ್. ಶಾಮಾಶಾಸ್ತ್ರಿ, ಪ್ರೊ. ಸುನೀತಿ ಚಟರ್ಜಿ (ಇವರು 26 ಭಾಷೆಗಳನ್ನು ಬಲ್ಲವರಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು), ಹೆಚ್. ಡಿ. ವೇಲಣಕರ್, ಎಂ. ಗೋವಿಂದ ಪೈ, ಪ್ರೊ. ಎಂ. ಹಿರಿಯಣ್ಣ, ಎಸ್. ಎಂ. ಕತ್ರೆ, ಸಿ. ಡಿ. ದೇಶ್ ಮುಖ್ – ಇಂಥ ನೂರಾರು ಮಹಾನುಭಾವರಿಂದ ನಿರ್ಮತ್ಸರ ಪ್ರಶಂಸೆ ಪಡೆದ ಯಶೋಜೀವಿ ಡಾ. ಆ. ನೇ. ಉಪಾಧ್ಯೆ ಅವರು.

ಡಾ. ಆ. ನೇ. ಉಪಾಧ್ಯೆ ಎಂಬುದು ಸಂಶೋಧನೆಗೆ ಇನ್ನೊಂದು ಹೆಸರು. ಅವರಂಥ ಸಂಶೋಧಕ ವಿದ್ವಾಂಸರು ಯಾವ ಭಾಷೆಗಾದರೂ ದೊಡ್ಡ ಸಂಪತ್ತು, ಆಸ್ತಿ. ಮಹಾಕವಿ ಯುಗಕ್ಕೊಮ್ಮೆ ಬರುತ್ತಾನಂತೆ. ಡಾ. ಆ. ನೇ. ಉಪಾಧ್ಯೆ ಅವರಂತಹ ಮಹಾ ಸಂಶೋಧಕರೂ ಅಷ್ಟೇ.

(ಆಧಾರ: ಡಾ. ಎಸ್. ಪಿ. ಪದ್ಮಪ್ರಸಾದ್ ಅವರು ಬರೆದ ಡಾ. ಆ. ನೇ. ಉಪಾಧ್ಯೆ ಅವರ ಕುರಿತ ಬರಹ)

No comments:

Post a Comment